ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುವಾದದ ವಿರುದ್ಧ ಹೋರಾಟ ಇಂದಿನ ತುರ್ತು: ಶಾಸಕ ಬಿ.ಆರ್‌. ಪಾಟೀಲ

Published 26 ನವೆಂಬರ್ 2023, 14:12 IST
Last Updated 26 ನವೆಂಬರ್ 2023, 14:12 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮಾಜವಾದಿಗಳು ಹಿಂದೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಿದ್ದರು. ಈಗ ಕೋಮುವಾದ ಬೃಹದಾಕಾರವಾಗಿ ಬೆಳೆದಿದ್ದು, ಅದರ ವಿರುದ್ಧ ಹೋರಾಟ ಮಾಡಬೇಕಿದೆ’ ಎಂದು ಶಾಸಕ ಬಿ.ಆರ್‌. ಪಾಟೀಲ ಹೇಳಿದರು.

ಕರ್ನಾಟಕ ಸಮಾಜವಾದಿ ಒಕ್ಕೂಟವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ಪೂರಿ ಠಾಕೂರ್‌ ಮತ್ತು ಮಧು ದಂಡವತೆ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ಚಿಂತನೆಗೆ ಬರ ಬಂದಿದೆ. ಗರ ಬಡಿದಿದೆ. ಗಾಂಧೀಜಿಯಂತಹ ಚಿಂತಕರನ್ನು ಕೂಡ ಕೆಟ್ಟವರನ್ನಾಗಿ ಬಿಂಬಿಸಲಾಗುತ್ತಿದೆ. ಎಲ್ಲ ಹೋರಾಟಗಾರರು, ಚಿಂತಕರನ್ನು ದ್ವೇಷಿಸುವುದನ್ನು ಯುವಪೀಳಿಗೆಗೆ ಕಲಿಸಿ ಕೊಡಲಾಗುತ್ತಿದೆ. ಇದನ್ನು ಎದುರಿಸಲು ಸಮಾಜವಾದಿ ಚಿಂತನೆಯನ್ನು ಜನರ ಬಳಿಗೆ ಕೊಂಡೊಯ್ಯಬೇಕು ಎಂದು ತಿಳಿಸಿದರು.

ಸಮಾಜವಾದಿಗಳು ನೇರವಾಗಿ ಆಡಳಿತ ಮಾಡಿರುವುದು ಕಡಿಮೆ ಇರಬಹುದು. ಆದರೆ, ಕಾಲಕಾಲಕ್ಕೆ ನೀಡಿರುವ ಚಿಂತನೆಗಳು, ಮಾಡಿರುವ ಘೋಷಗಳು, ರೂಪಿಸಿರುವ ಯೋಜನೆಗಳು ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಿದೆ. ಮಧು ದಂಡವತೆ, ಮಧು ಲಿಮೆಯೆ, ಕರ್ಪೂರಿ ಠಾಕೂರ್‌, ಜಾರ್ಜ್‌ ಫರ್ನಾಂಡಿಸ್‌, ಕಿಶಾನ್‌ ಪಟ್ನಾಯಕ್‌, ಜಯಪ್ರಕಾಶ್‌ ನಾರಾಯಣ್, ಜೆ.ಎಚ್‌. ಪಟೇಲ್‌ ಸಹಿತ ಅನೇಕ ನಾಯಕರನ್ನು ನೀಡಿದ ಶ್ರೇಯಸ್ಸು ಸಮಾಜವಾದಿ ಸಿದ್ಧಾಂತಕ್ಕೆ ಸಲ್ಲುತ್ತದೆ. ಸಮಾಜವಾದಿ ಹಿರಿಯ ನಾಯಕರ ಜನ್ಮ ಶತಮಾನೋತ್ಸವ ಆಚರಿಸುವ ಮೂಲಕ ಮತ್ತೆ ಸಮಾಜವಾದಿ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಜನ್ಮ ಶತಮಾನೋತ್ಸವದ ಸಂಚಾಲಕ ಅರುಣ್‌ ಶ್ರೀವಾಸ್ತವ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮಧು ಲಿಮೆಯೆ, ಮಧು ದಂಡವತೆ, ಕರ್ಪೂರಿ ಠಾಕೂರ್‌ ಜನ್ಮ ಶತಮಾನೋತ್ಸವವನ್ನು ದೇಶದಾದ್ಯಂತ ಆಚರಿಸುವ ಮೂಲಕ ಅವರ ಚಿಂತನೆಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದೇವೆ. ಚಿಂತನೆಗಳೇ ದೇಶವನ್ನು ಆಳುವುದು. ಒಳ್ಳೆಯ ಚಿಂತನೆಯಾದರೆ ಜನರಿಗೆ ಒಳ್ಳೆಯದಾಗುತ್ತದೆ’ ಎಂದು ತಿಳಿಸಿದರು.

ಹಿರಿಯ ಸಮಾಜವಾದಿಗಳಾದ ಹನುಮಂತ, ಹೀರಾಚಂದ್ ವಾಗ್ಮೋರೆ, ಅನಸೂಯಮ್ಮ ಅವರನ್ನು ಸನ್ಮಾನಿಸಲಾಯಿತು. ಬಿಹಾರದ ರಾಜ್ಯಸಭಾ ಸದಸ್ಯ ರಾಮನಾಥ್‌ ಠಾಕೂರ್‌, ಮಧ್ಯಪ್ರದೇಶದ ಮಾಜಿ ಸಚಿವ ರಮಾಶಂಕರ್‌ ಸಿಂಗ್‌, ವಿಚಾರವಾದಿ ಉದಯ್‌ ದಂಡವತೆ, ಮಾಜಿ ಶಾಸಕ ಮಹಿಮ ಪಟೇಲ್‌ ಇದ್ದರು. ಮಾಜಿ ಶಾಸಕ ಮೈಕೆಲ್‌ ಬಿ. ಫರ್ನಾಂಡಿಸ್‌ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್‌. ನಾಗರಾಜ್ ಬರೆದಿರುವ ‘ಜನನಾಯಕ ಕರ್ಪೂರಿ ಠಾಕೂರ್‌’ ಕೃತಿ ಬಿಡುಗಡೆ ಮಾಡಲಾಯಿತು.

ಭೂಸುಧಾರಣೆ ತಿದ್ದುಪಡಿ ಕಾಯ್ದೆ ವಾಪಸಿಗೆ ಆಗ್ರಹ

ದೇವರಾಜ ಅರಸು ಅವರು ಭೂಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದು ಉಳುವವನಿಗೆ ಭೂಮಿ ಸಿಗುವಂತೆ ಮಾಡಿದ್ದರು. ಬಿಜೆಪಿ ಸರ್ಕಾರ ಅದಕ್ಕೆ ತಿದ್ದುಪಡಿ ಮಾಡಿ ಮತ್ತೆ ಜಮೀನ್ದಾರಿ ಪದ್ಧತಿ ಬರುವಂತೆ ಮಾಡಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಈ ತಿದ್ದುಪಡಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈವರೆಗೂ ವಾಪಸ್‌ ಪಡೆದಿಲ್ಲ. ಕೂಡಲೇ ತಿದ್ದುಪಡಿ ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಎಂದು ಕಾಂಗ್ರೆಸ್ ಶಾಸಕರೇ ಆಗಿರುವ ಬಿ.ಆರ್‌. ಪಾಟೀಲ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT