ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಶವಂತಪುರ: ₹85 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಾರ್ಕಿಂಗ್‌ ಕಟ್ಟಡ ವ್ಯರ್ಥ

ಯಶವಂತಪುರ ಎಪಿಎಂಸಿ ಆವರಣದಲ್ಲಿ ನಿರ್ಮಿಸಿರುವ ಬಹುಮಹಡಿ ಪಾರ್ಕಿಂಗ್‌ ಕಟ್ಟಡ
ಆದಿತ್ಯ ಕೆ.ಎ.
Published 27 ಮೇ 2024, 1:22 IST
Last Updated 27 ಮೇ 2024, 1:22 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ಸುಮಾರು ₹85 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಬಹುಮಹಡಿ ವಾಹನಗಳ ಪಾರ್ಕಿಂಗ್‌ ಕಟ್ಟಡವೊಂದು ಬಳಕೆಗೆ ಲಭಿಸದೇ ವ್ಯರ್ಥವಾಗುತ್ತಿದೆ. 

ಹತ್ತು ಅಂತಸ್ತಿನ ಕಟ್ಟಡದ ಕಾಮಗಾರಿ ಮುಕ್ತಾಯವಾಗಿ ಎರಡು ವರ್ಷ ಕಳೆದಿದ್ದರೂ ಬಳಕೆಗೆ ಇಲ್ಲವಾಗಿದೆ. ಕಟ್ಟಡದ ಮುಖ್ಯದ್ವಾರಕ್ಕೆ ಬೀಗ ಹಾಕಿ, ಬಂದ್‌ ಮಾಡಲಾಗಿದೆ.  

ಯಶವಂತಪುರ, ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣ, ತುಮಕೂರು ರಾಷ್ಟ್ರೀಯ ಹೆದ್ದಾರಿಯ ಬದಿ, ಯಶವಂತಪುರ ರೈಲ್ವೆ ನಿಲ್ದಾಣದ ಆವರಣದಲ್ಲಿ ನಿತ್ಯವೂ ವಾಹನ ನಿಲುಗಡೆಗೆ ವಾಹನ ಸವಾರರು ಪರದಾಡುತ್ತಿದ್ದರೂ, ಅದರ ಸಮೀಪದಲ್ಲಿರುವ ಕಟ್ಟಡ ಬಳಸಿಕೊಳ್ಳಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪವಿದೆ.

ಯಶವಂತಪುರ ಎಪಿಎಂಸಿಗೆ ಪ್ರತಿನಿತ್ಯ ಸಾವಿರಾರು ರೈತರು, ಮಧ್ಯವರ್ತಿಗಳು ತಮ್ಮ ವಾಹನಗಳಲ್ಲಿ ಕೆಲಸಕ್ಕೆಂದು ಬರುತ್ತಾರೆ. ಅವರೆಲ್ಲರೂ ತಮ್ಮ ವಾಹನ ನಿಲುಗಡೆಗೆ ಪರದಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಎಲ್ಲಿ ಹುಡುಕಿದರೂ ಸ್ಥಳವೇ ಲಭಿಸುತ್ತಿಲ್ಲ! ಪಾರ್ಕಿಂಗ್‌ ಉದ್ದೇಶಕ್ಕೆ ನಿರ್ಮಿಸಿದ ಕಟ್ಟಡವನ್ನು ಬಳಕೆ ಮಾಡಿಕೊಳ್ಳದೇ ಇರುವುದು ದುರಂತ ಎಂದು ವ್ಯಾಪಾರಿಗಳು ಹೇಳುತ್ತಾರೆ.

2018ರಲ್ಲಿ ಈ ಕಟ್ಟಡದ ಕಾಮಗಾರಿ ಆರಂಭಗೊಂಡಿತ್ತು. ಆರಂಭದಲ್ಲಿ ಕಾಮಗಾರಿ ಚುರುಕುಗೊಂಡಿದ್ದರೂ ನಂತರ ವಿಳಂಬವಾಗಿತ್ತು. ಮಧ್ಯದಲ್ಲಿ ಕಟ್ಟಡದ ಒಂದು ಬದಿ ಕುಸಿದ ಕಾರಣಕ್ಕೆ ಕೆಲವು ತಿಂಗಳು ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ 2022ರ ಡಿಸೆಂಬರ್ ವೇಳೆಗೆ ಸುಣ್ಣಬಣ್ಣ ಬಳಿದುಕೊಂಡು ಕಟ್ಟಡ ಸಜ್ಜಾಗಿತ್ತು. ಆದರೆ, ಬಳಕೆಗೆ ಮಾತ್ರ ಬರುತ್ತಿಲ್ಲ ಎಂದು ಸವಾರರು ನೋವು ತೋಡಿಕೊಳ್ಳುತ್ತಾರೆ.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕಟ್ಟಡವನ್ನು ಇನ್ನಾದರೂ ಬಳಕೆ ಮಾಡಿಕೊಳ್ಳುವತ್ತ ಅಧಿಕಾರಿಗಳು ಗಮನ ಹರಿಸಬೇಕು.
ಈರಪ್ಪ ಈರುಳ್ಳಿ, ವ್ಯಾಪಾರಿ ಯಶವಂತಪುರ

ದಟ್ಟಣೆ ನಿವಾರಣೆ ಸಾಧ್ಯ:

ತುಮಕೂರು ರಾಷ್ಟ್ರೀಯ ಹೆದ್ದಾರಿ ಮೂಲಕ ನಗರಕ್ಕೆ ಪ್ರತಿನಿತ್ಯ ಸಾವಿರಾರು ಕಾರುಗಳು ನಗರ ಪ್ರವೇಶಿಸುತ್ತವೆ. ಇದರಿಂದ ನಿತ್ಯ ನಗರ ದಟ್ಟಣೆಯ ಸಮಸ್ಯೆಗೆ ಸಿಲುಕುತ್ತಿದೆ. ಮತ್ತೊಂದು ಕಡೆ ಯಶವಂತಪುರ ಮಾರುಕಟ್ಟೆ ಪೂರ್ಣ ಪ್ರಮಾಣದಲ್ಲಿ ನೆಲಮಂಗಲ ಸಮೀಪದ ದಾಸನಪುರಕ್ಕೆ ಸ್ಥಳಾಂತರವಾಗಿಲ್ಲ. ಇದು ಸಹ ಸಮಸ್ಯೆ ಹೆಚ್ಚಿಸಿದೆ.

‘ಬಹುಮಹಡಿ ಕಟ್ಟಡವು ಬಳಕೆಗೆ ಲಭ್ಯವಾದರೆ, ತುಮಕೂರು ರಸ್ತೆಯ ಮೂಲಕ ಕಾರಿನಲ್ಲಿ ಬಂದವರು ಈ ಪಾರ್ಕಿಂಗ್‌ ಕಟ್ಟಡದಲ್ಲೇ ಕಾರು ಹಾಗೂ ಬೈಕ್‌ ನಿಲುಗಡೆ ಮಾಡಿ ಮೆಟ್ರೊದಲ್ಲಿ ನಗರದ ಒಳಕ್ಕೆ ಬರುತ್ತಾರೆ. ಕೆಲಸ ಮುಗಿದ ಮೇಲೆ ತಮ್ಮ ವಾಹನ ಕೊಂಡೊಯ್ಯುತ್ತಾರೆ. ಸ್ವಲ್ಪವಾದರೂ ದಟ್ಟಣೆ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ’ ಎಂದು ತೆಂಗಿನಕಾಯಿ ವ್ಯಾಪಾರಿ ಸುರೇಶ್‌ ಹೇಳಿದರು.

ಫ್ರೀಡಂ ಪಾರ್ಕ್‌: ತಂತ್ರಜ್ಞಾನ ಅಳವಡಿಕೆ

ಫ್ರೀಡಂ ಪಾರ್ಕ್‌ನಲ್ಲಿ ನಿರ್ಮಿಸಿರುವ ಬಹುಮಹಡಿ ಪಾರ್ಕಿಂಗ್‌ ಕಟ್ಟಡದ ನಿರ್ವಹಣೆ ಪಾರ್ಕಿಂಗ್‌ ಶುಲ್ಕ ವಸೂಲಿಗೆ ಟೆಂಡರ್‌ ಪಡೆದಿರುವ ‘ಪ್ರಿನ್ಸ್‌ ರಾಯಲ್‌ ಪಾರ್ಕಿಂಗ್‌ ಸೆಲ್ಯೂಷನ್‌ ಕಂಪನಿ’ ಅಡ್ವಾನ್ಸ್‌ ಪಾರ್ಕಿಂಗ್‌ ತಂತ್ರಜ್ಞಾನ ಅಳವಡಿಕೆ ಚುರುಕುಗೊಳಿಸಿದೆ. ದುಬೈನಿಂದ ಕೆಲವು ಸ್ಮಾರ್ಟ್‌ ಯಂತ್ರಗಳ ಬರುವುದು ಬಾಕಿಯಿದ್ದು ಅವುಗಳ ಅಳವಡಿಕೆ ನಂತರ ಪಾರ್ಕಿಂಗ್‌ ಸ್ಥಳ ಸಂಪೂರ್ಣ ಸಜ್ಜಾಗಲಿದೆ. ಜೂನ್‌ 20ಕ್ಕೆ ಉದ್ಘಾಟನೆ ನಡೆಸಲು ಚಿಂತಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಟೆಂಡರ್‌ದಾರರು ಬೇಸರ

ಎಪಿಎಂಸಿ ಆವರಣದಲ್ಲಿರುವ ಬಹುಮಹಡಿ ಕಟ್ಟಡದ ಟೆಂಡರ್ ಆಹ್ವಾನಿಸುವ ವಿಚಾರದಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಹಾಗೂ ಅವೈಜ್ಞಾನಿಕ ನೀತಿ ಅನುಸರಿಸುತ್ತಿದ್ದಾರೆ ಎಂದು ಗುತ್ತಿಗೆದಾರರು ದೂರುತ್ತಾರೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೂ ಮೊದಲೇ ಎರಡರಿಂದ ಮೂರು ಬಾರಿ ಟೆಂಡರ್ ಕರೆದು ಅಂತಿಮಗೊಳಿಸಬೇಕಿತ್ತು. ನೀತಿ ಸಂಹಿತೆ ಜಾರಿಗೂ ಮೊದಲು ಒಮ್ಮೆ ಮಾತ್ರ ಟೆಂಡರ್‌ ಕರೆಯಲಾಗಿತ್ತು. ಟೆಂಡರ್‌ ಮೊತ್ತವನ್ನು ₹12.74 ಕೋಟಿಗೆ ನಿಗದಿ ಪಡಿಸಲಾಗಿತ್ತು. ಪ್ರತಿ ವರ್ಷ ಶೇ 10ರಷ್ಟು ಏರಿಕೆ ಮಾಡುವುದಾಗಿ ಎಪಿಎಂಸಿ ಆದೇಶದಲ್ಲಿ ಹೇಳಿತ್ತು. ದುಬಾರಿ ದರ ನಿಗದಿ ಪಡಿಸಿರುವ ಕಾರಣಕ್ಕೆ ಯಾರೂ ಆಸಕ್ತಿ ತೋರಿರಲಿಲ್ಲ ಎಂದು ಗುತ್ತಿಗೆದಾರರೊಬ್ಬರು ಹೇಳಿದರು. ನೀತಿ ಸಂಹಿತಿ ಮುಕ್ತಾಯವಾದ ತಕ್ಷಣವೇ ಮತ್ತೊಮ್ಮೆ ಟೆಂಡರ್ ಆಹ್ವಾನಿಸಲಾಗುವುದು. ಗುತ್ತಿಗೆ ದರ ಕಡಿಮೆ ಮಾಡುವುದು ಇಲ್ಲವೇ ಲಾಭ ಹಂಚಿಕೆಯಡಿ ಗುತ್ತಿಗೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT