ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಫೆ ಬಾಂಬ್ ಸ್ಫೋಟ ಪ್ರಕರಣ: ಎನ್‌ಐಎ ಕಸ್ಟಡಿಗೆ ಮುಜಮೀಲ್: ಐದು ದಿನ ವಿಚಾರಣೆ

Published 11 ಏಪ್ರಿಲ್ 2024, 15:58 IST
Last Updated 11 ಏಪ್ರಿಲ್ 2024, 15:58 IST
ಅಕ್ಷರ ಗಾತ್ರ

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿರುವ ಶಂಕಿತ ಮುಜಮೀಲ್ ಶರೀಫ್‌ನನ್ನು (31) ಐದು ದಿನಗಳವರೆಗೆ ಕಸ್ಟಡಿಗೆ ಪಡೆದಿದ್ದ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು, ಹಲವು ಸ್ಥಳಗಳಿಗೆ ಕರೆದೊಯ್ದು ಮಾಹಿತಿ ಕಲೆ ಹಾಕಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸದ ಮುಜಮೀಲ್‌ನನ್ನು ಮಾರ್ಚ್‌ 23ರಂದು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಏಪ್ರಿಲ್‌ 3ರವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಮುಜಮೀಲ್ ನೀಡಿದ್ದ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿದ್ದ ಅಧಿಕಾರಿಗಳು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಶಂಕಿತ ಮಾಝ್‌ ಮುನೀರ್ ಅಹಮದ್‌ನನ್ನೂ ಸೆರೆ ಹಿಡಿದಿದ್ದರು.

‘ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದ್ದು ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್‌ ಎಂಬುದಕ್ಕೆ ಹಲವು ಪುರಾವೆಗಳು ಸಿಕ್ಕಿವೆ. ಜೊತೆಗೆ, ಅಬ್ದುಲ್ ಮಥೀನ್ ಅಹ್ಮದ್ ತಾಹಾ ಸಹ ಕೃತ್ಯದಲ್ಲಿ ಭಾಗಿಯಾಗಿದ್ದು ಗೊತ್ತಾಗಿದೆ. ಇವರಿಬ್ಬರ ಜೊತೆ ಮುಜಮೀಲ್ ಶರೀಫ್, ಹಲವು ವರ್ಷಗಳ ಒಡನಾಟ ಹೊಂದಿದ್ದ. ಮುಸಾವೀರ್ ಹಾಗೂ ಅಬ್ದುಲ್ ಸದ್ಯ ತಲೆಮರೆಸಿಕೊಂಡಿದ್ದಾರೆ. ಅವರಿಬ್ಬರನ್ನು ಪತ್ತೆ ಮಾಡಲು ಮುಜಮೀಲ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

‘ಬಾಂಬ್ ಸ್ಫೋಟಕ್ಕೆ ನಡೆಸಿದ್ದ ಸಂಚು, ಬಾಂಬ್ ತಯಾರಿಕೆಗೆ ಕಚ್ಚಾ ಸಾಮಗ್ರಿ ಸಂಗ್ರಹ ಹಾಗೂ ಶಂಕಿತರ ಭೇಟಿಯಾಗಿದ್ದ ಸ್ಥಳಗಳ ಬಗ್ಗೆ ಮುಜಮೀಲ್‌ಗೆ ಮಾಹಿತಿ ಇದೆ. ಹೀಗಾಗಿ, ಏಪ್ರಿಲ್ 6ರಂದು ಎರಡನೇ ಬಾರಿ ಮುಜಮೀಲ್‌ನನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿತ್ತು. ಐದು ದಿನ ವಿಚಾರಣೆ ನಡೆಸಿ, ಈತನನ್ನು ಏಪ್ರಿಲ್ 10ರಂದು ವಾಪಸು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ’ ಎಂದು ತಿಳಿಸಿವೆ.

‘ಮುಜಮೀಲ್‌ನನ್ನು ಕೆಲ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಲಾಗಿದೆ. ಜೊತೆಗೆ, ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಷ್ಟು ಮಂದಿಯ ಮಾಹಿತಿ ಕಲೆಹಾಕಲಾಗಿದೆ. ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ ಹಲವರು, ಶಂಕಿತರ ಜೊತೆ ಸಂಪರ್ಕವಿಟ್ಟುಕೊಂಡಿರುವ ಮಾಹಿತಿ ಲಭ್ಯವಾಗಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT