ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಶಂಕಿತ ವಶಕ್ಕೆ

ಐಎಸ್‌ ಕೃತ್ಯ ಶಂಕೆ, ಬಾಂಬ್‌ ಇಟ್ಟವನ ಸುಳಿವು ಪತ್ತೆ ? , ಬಳ್ಳಾರಿಯಲ್ಲಿ ಬಟ್ಟೆ ವ್ಯಾಪಾರಿ
Published 8 ಮಾರ್ಚ್ 2024, 0:56 IST
Last Updated 8 ಮಾರ್ಚ್ 2024, 0:56 IST
ಅಕ್ಷರ ಗಾತ್ರ

ಬೆಂಗಳೂರು: ‘ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದಾನೆ’ ಎಂಬ ಅನುಮಾನದ ಮೇರೆಗೆ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್‌ನನ್ನು (26) ವಶಕ್ಕೆ ಪಡೆದಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಬಾಂಬ್‌ ಇಟ್ಟವನ ಪತ್ತೆಗೆ ವಿಚಾರಣೆ ತೀವ್ರಗೊಳಿಸಿದ್ದಾರೆ.

‘ಬಳ್ಳಾರಿ ಕೌಲ್ ಬಜಾರ್‌ನ ಮಿನಾಜ್‌, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತ. ಇಸ್ಲಾಮಿಕ್ ಸ್ಟೇಟ್ (ಐಎಸ್‌) ಉಗ್ರರ ಜೊತೆ ಒಡನಾಟ ಇಟ್ಟುಕೊಂಡಿದ್ದ ಈತ, ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ. 2023ರ ಡಿಸೆಂಬರ್ 18ರಂದು ಎನ್‌ಐಎ ಅಧಿಕಾರಿಗಳು ಮಿನಾಜ್‌ನನ್ನು ಬಂಧಿಸಿದ್ದರು. ಅಂದಿನಿಂದ ಈತ, ಕೇಂದ್ರ ಕಾರಾಗೃಹದಲ್ಲಿದ್ದ’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

‘ಕೆಫೆ ಬಾಂಬ್ ಸ್ಫೋಟದ ಬಗ್ಗೆ ಹಲವು ಮಾಹಿತಿ ಸಂಗ್ರಹಿಸಿರುವ ಎನ್‌ಐಎ ಅಧಿಕಾರಿಗಳು, ಮಿನಾಜ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ದೊರೆತ ಕೆಲ ಮಾಹಿತಿ ಆಧಾರದಲ್ಲಿ, ಮಿನಾಜ್‌ನನ್ನು ಬಾಡಿ ವಾರಂಟ್ ಮೂಲಕ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು’ ಎಂದು ತಿಳಿಸಿವೆ.

‘ಮನವಿ ಪುರಸ್ಕರಿಸಿರುವ ನ್ಯಾಯಾಲಯ, ಮಿನಾಜ್‌ನನ್ನು ಮಾರ್ಚ್ 9ರವರೆಗೆ ಕಸ್ಟಡಿಗೆ ಒಪ್ಪಿಸಿದೆ. ಬುಧವಾರ (ಮಾರ್ಚ್ 6) ಮಿನಾಜ್‌ನನ್ನು ಕಸ್ಟಡಿಗೆ ಪಡೆದಿರುವ ಎನ್‌ಐಎ ಅಧಿಕಾರಿಗಳು, ಮಾಹಿತಿ ಕಲೆಹಾಕುತ್ತಿದ್ದಾರೆ. ಸ್ಫೋಟದಲ್ಲಿ ಈತನ ಪಾತ್ರವೇನು? ಬಾಂಬ್‌ ಇಟ್ಟವನಿಗೂ ಈತನಿಗೂ ಏನಾದರೂ ಸಂಬಂಧವಿದೆಯಾ ‌ಎಂಬುದು ವಿಚಾರಣೆಯಿಂದ ತಿಳಿಯಬೇಕಿದೆ’ ಎಂದು ಮೂಲಗಳು ಹೇಳಿವೆ.

ವ್ಯವಸ್ಥಿತ ಸಂಚು: ‘ಕೆಫೆಯಲ್ಲಿ ಬಾಂಬ್‌ ಇರಿಸಿದ್ದ ಶಂಕಿತ, ಇಲ್ಲಿಂದ ಬಸ್‌ನಲ್ಲಿ ತುಮಕೂರು, ಬಳ್ಳಾರಿ... ಹೀಗೆ ಹಲವು ನಗರಗಳಲ್ಲಿ ಸುತ್ತಾಡಿದ್ದಾನೆ. ತನಿಖಾ ಸಂಸ್ಥೆಗಳಲ್ಲಿ ಗೊಂದಲ ಮೂಡಿಸಲು ಶಂಕಿತ ಈ ರೀತಿ ಮಾಡಿರುವ ಸಾಧ್ಯತೆ ಇದೆ. ಶಂಕಿತನ ಬಗ್ಗೆಯೂ ಸುಳಿವು ಸಿಕ್ಕಿದ್ದು, ಈ ಆಯಾಮದಲ್ಲೂ ವಿಶೇಷ ತಂಡ ತನಿಖೆ ಮುಂದುವರಿಸಿದೆ’ ಎಂದು ಮೂಲಗಳು ತಿಳಿಸಿವೆ.

ಬಟ್ಟೆ ವ್ಯಾಪಾರ, ಯುವಕರ ಪ್ರಚೋದನೆ: ‘ಶಂಕಿತ ಉಗ್ರ ಮಿನಾಜ್, ಬಳ್ಳಾರಿ ಕೌಲ್‌ಬಜಾರ್‌ನಲ್ಲಿ ಬಟ್ಟೆ ಮಾರಾಟ ಮಳಿಗೆ ಇಟ್ಟುಕೊಂಡಿದ್ದ. ಪಿಎಫ್‌ಐ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಈತ, ಸ್ಥಳೀಯ ಮುಖಂಡರ ಜೊತೆ ಉತ್ತಮ ಒಡನಾಟ ಹೊಂದಿದ್ದ’ ಎಂದು ಮೂಲಗಳು ತಿಳಿಸಿವೆ.

‘ಐಎಸ್‌ ವಿವಿಧ ಘಟಕಗಳ ಮುಖ್ಯಸ್ಥರ ಜೊತೆ ಸಂಪರ್ಕ ಸಾಧಿಸಿದ್ದ ಈತ, ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ. ಇದಕ್ಕಾಗಿ ಕೆಲ ವಿದೇಶಿಯರಿಂದ ಹಣವನ್ನೂ ಪಡೆಯುತ್ತಿದ್ದ. ದೇಶದ ವಿವಿಧ ರಾಜ್ಯಗಳ ಮುಸ್ಲಿಂ ಸಮುದಾಯದ ಯುವಕರನ್ನು ಮೊಬೈಲ್ ಆ್ಯಪ್ ಮೂಲಕ ಸಂಪರ್ಕಿಸುತ್ತಿದ್ದ. ಧರ್ಮದ ಹೆಸರಿನಲ್ಲಿ ಯುವಕರನ್ನು ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದಿಸುತ್ತಿದ್ದ. ಇವರಲ್ಲಿ ಹೆಚ್ಚಿನವರು ಯುವಕರು, ಕಾಲೇಜು ವಿದ್ಯಾರ್ಥಿಗಳು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ದಾಳಿಯಲ್ಲಿ ಸಿಕ್ಕಿದ್ದ ಐಇಡಿ ಸಾಮಗ್ರಿ: ‘ಮಿನಾಜ್‌ ಹಾಗೂ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎನ್‌ಐಎ ಅಧಿಕಾರಿಗಳು, ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿಯ 19 ಸ್ಥಳಗಳ ಮೇಲೆ 2023ರ ಡಿಸೆಂಬರ್ 18ರಂದು ದಾಳಿ ಮಾಡಿದ್ದರು. ಮಿನಾಜ್ ಸೇರಿ 8 ಶಂಕಿತ ಉಗ್ರರನ್ನು ಬಂಧಿಸಿದ್ದರು’ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.

‘ಕಚ್ಚಾ ಬಾಂಬ್ (ಐಇಡಿ) ತಯಾರಿಸಲು ಶಂಕಿತರು ಸಂಗ್ರಹಿಸಿಟ್ಟುಕೊಂಡಿದ್ದ ಸಲ್ಫರ್, ಪೊಟ್ಯಾಶಿಯಂ ನೈಟ್ರೇಟ್, ಗನ್ ಪೌಡರ್, ಇದ್ದಿಲು, ಎಥೆನಾಲ್, ಚೂಪಾದ ಆಯುಧಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಸ್ಮಾರ್ಟ್ ವಾಚ್‌ಗಳು, ನಗದು ಹಾಗೂ ಕೆಲ ದಾಖಲೆಗಳನ್ನೂ ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿದ್ದರು. ಇದೇ ರೀತಿಯ ಸಾಮಗ್ರಿಗಳನ್ನು ಬಳಸಿ ಬಾಂಬ್ ಸಿದ್ಧಪಡಿಸಿ, ರಾಮೇಶ್ವರಂ ಕೆಫೆಯಲ್ಲಿ ಇರಿಸಿರುವ ಶಂಕೆ ಇದೆ’ ಎಂದು ಹೇಳಿವೆ.

‘ಮಿನಾಜ್ ಜೊತೆಯಲ್ಲೇ ಬಳ್ಳಾರಿಯ ಸೈಯದ್ ಸಮೀರ್, ಬೆಂಗಳೂರಿನ ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ, ಮೊಹಮ್ಮದ್ ಮುಜಮಿಲ್, ಮುಂಬೈನ ಅನಸ್ ಇಕ್ಬಾಲ್ ಶೇಖ್, ದೆಹಲಿಯ ಶಿಯಾನ್ ರಹಮಾನ್ ಅಲಿಯಾಸ್ ಹುಸೇನ್, ಜಾರ್ಖಂಡ್‌ನ ಮೊಹಮ್ಮದ್ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಅಲಿಯಾಸ್ ಗುಡ್ಡುನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಇದರಲ್ಲಿ ಕೆಲವರು ಎಂಜಿನಿಯರಿಂಗ್ ಹಾಗೂ ಕಾನೂನು ವಿದ್ಯಾರ್ಥಿಗಳು’ ಎಂದು ಮೂಲಗಳು ತಿಳಿಸಿವೆ.

ಸ್ಫೋಟ ಪ್ರಕರಣದ ಆರೋಪಿಯ ಕುರಿತು ಮಹತ್ವದ ಸುಳಿವು ಸಿಕ್ಕಿವೆ. ಘಟನೆಯ ನಂತರ ಬಟ್ಟೆ ಬದಲಾಯಿಸಿಕೊಂಡು ಬಸ್‌ನಲ್ಲಿ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ
ಜಿ. ಪರಮೇಶ್ವರ ಗೃಹ ಸಚಿವ

‘ಕ್ಯಾಪ್’ ಮೇಲೆ ‘10’: ಏನಿದು ಸುಳಿವು’

‘ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಸಂಖ್ಯೆ ‘10’ ಎಂಬುದಾಗಿ ಬರೆದಿದ್ದ ಕ್ಯಾಪ್ ಧರಿಸಿದ್ದ. ‘10’ ಸಂಖ್ಯೆ ಸುಳಿವು ಏನು ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡುತ್ತಿವೆ’ ಎಂದು ಮೂಲಗಳು ಹೇಳಿವೆ. ‘ಬಹುತೇಕ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಶಂಕಿತ ಧರಿಸಿದ್ದ ಕ್ಯಾಪ್ ಎದ್ದು ಕಾಣುತ್ತಿದೆ. ಶಂಕಿತ ಉದ್ದೇಶಪೂರ್ವಕವಾಗಿಯೇ ಸಂಖ್ಯೆ ‘10’ ಬರೆದಿದ್ದ ಕ್ಯಾಪ್ ಧರಿಸಿರುವ ಅನುಮಾನವಿದೆ. ‘10’ ಸಂಖ್ಯೆ ಅರ್ಥವೇನು? ಹಾಗೂ ಇದು ಮುಂದಿನ ಘಟನೆಯ ಸುಳಿವಾ? ಎಂಬ ಬಗ್ಗೆಯೂ ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ’ ಎಂದು ಮೂಲಗಳು ತಿಳಿಸಿವೆ.

‘ಯುವಕರಿಗೆ ಐಇಡಿ ತರಬೇತಿ’

‘ಶಂಕಿತ ಮಿನಾಜ್ ಐಎಸ್‌ ಬಳ್ಳಾರಿ ಘಟಕದ ಮುಖ್ಯಸ್ಥ ಜವಾಬ್ದಾರಿ ವಹಿಸಿಕೊಂಡಿದ್ದ. ಈತ ಹಾಗೂ ಇತರರು ಕಚ್ಚಾ ಬಾಂಬ್ (ಐಇಡಿ) ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು. ಜೊತೆಗೆ ಭಯೋತ್ಪಾದನಾ ಕೃತ್ಯ ಎಸಗಲು ಪ್ರಚೋದನೆಗೊಂಡ ಯುವಕರಿಗೂ ತರಬೇತಿ ಕೊಡಿಸುತ್ತಿದ್ದರೆಂಬ ಮಾಹಿತಿ ಇದೆ’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

ಶಂಕಿತನ ರೇಖಾಚಿತ್ರ ಬಿಡಿಸಿದ ಕಲಾವಿದ

ಬಾಂಬ್‌ ಸ್ಫೋಟದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳಿಗೆ ನೆರವು ನೀಡುವ ಉದ್ದೇಶದಿಂದ ಹೈದರಾಬಾದ್‌ನ ಕಲಾವಿದ ಹರ್ಷ ಕಾಳೆ ಶಂಕಿತನ ರೇಖಾಚಿತ್ರ ಬಿಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸ್ಫೋಟಕ್ಕೂ ಮುನ್ನ ಹಾಗೂ ಸ್ಫೋಟದ ನಂತರ ಶಂಕಿತ ಓಡಾಡುತ್ತಿದ್ದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದೇ ದೃಶ್ಯಗಳನ್ನು ಆಧರಿಸಿ ಹರ್ಷ ಅವರು ರೇಖಾಚಿತ್ರ ಬಿಡಿಸಿದ್ದಾರೆ. ಕ್ಯಾಪ್ ಧರಿಸಿರುವ ಶಂಕಿತನ ಮೂರು ಪ್ರತ್ಯೇಕ ಮುಖಚಹರೆಗಳನ್ನು ಕಲಾವಿದ ಹರ್ಷ ಹಾಳೆ ಮೇಲೆ ಬಿಡಿಸಿದ್ದಾರೆ. ಇದೇ ರೇಖಾಚಿತ್ರವನ್ನು ಎನ್‌ಐಎ ಹಾಗೂ ಇತರೆ ತನಿಖಾ ಸಂಸ್ಥೆಗಳ ಸಾಮಾಜಿಕ ಮಾಧ್ಯಮಗಳ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT