ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ದಿನಪತ್ರಿಕಾ ವಿತರಕರ ದಿನಾಚರಣೆ: ಪತ್ರಿಕಾ ವಿತರಕರ ಸೇವೆ ಮೆಲುಕು, ಶ್ಲಾಘನೆ

ಮಳೆ, ಚಳಿಗೆ ಜಗ್ಗದೇ ನಿತ್ಯ ಸಕಾಲಕ್ಕೆ ದಿನಪತ್ರಿಕೆ ತಲುಪಿಸುವ ಶ್ರಮಿಕರು l ಕೇಕ್‌ ಕತ್ತರಿಸಿ ಆಚರಣೆ, ಸಂಭ್ರಮ
Last Updated 4 ಸೆಪ್ಟೆಂಬರ್ 2022, 22:23 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಭಾನುವಾರ ವಿಶ್ವ ದಿನಪತ್ರಿಕಾ ವಿತರಕರ ದಿನಾಚರಣೆಯು ಸಂಭ್ರಮದಿಂದ ನಡೆಯಿತು. ಮುಂಜಾನೆಯ ಶ್ರಮಜೀವಿಗಳಿಗೆ ಗಣ್ಯರು ಶುಭಾಶಯ ಕೋರಿ ಸಿಹಿ ಹಂಚಿದರು.

ಮಳೆ, ಗಾಳಿ, ಚಳಿ ಎನ್ನದೇ ಬೆಳಿಗ್ಗೆಯೇ ಮನೆಮನೆಗೂ ದಿನಪತ್ರಿಕೆ ವಿತರಿಸುವ ಕಾಯಕ ಜೀವಿಗಳು. ದಿನಪತ್ರಿಕೆ ಮನೆಗೆ ತಲುಪುವುದು ಸ್ವಲ್ಪ ತಡವಾದರೆ ಚಡಪಡಿಸುವ ಓದುಗರಿದ್ದಾರೆ. ಸಕಾಲಕ್ಕೆ ದಿನ ಪತ್ರಿಕೆಗಳನ್ನು ಮನೆ ಬಾಗಿಲಿಗೆ ತಲುಪಿಸಿ ಓದುಗರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ರೋಗದ ಭೀತಿ, ಲಾಕ್‌ಡೌನ್‌ನಲ್ಲಿ ಪತ್ರಿಕಾ ವಿತರಕರ ಕಾರ್ಯವನ್ನು ನಗರದ ವಿವಿಧೆಡೆ ನಡೆದ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮೆಲುಕು ಹಾಕಲಾಯಿತು.

ಯಡಿಯೂರು ದಿನಪತ್ರಿಕೆ ವಿತರಕರ ಸಂಘದಿಂದ ಪೌರ ಕಾರ್ಮಿಕರನ್ನು
ಸನ್ಮಾನಿಸಲಾಯಿತು. ಬಸವನಗುಡಿ ದಿನಪತ್ರಿಕೆ ವಿತರಕರ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ಎಎಪಿ ಮುಖಂಡ ಭಾಸ್ಕರ್ ರಾವ್ ಕೇಕ್ ಕತ್ತರಿಸುವ ಮೂಲಕ ಎಲ್ಲ ವಿತರಕರಿಗೂ ಶುಭ ಹಾರೈಸಿದರು.

ಕೊರೆಯುವ ಚಳಿಯಿರಲಿ, ಸುರಿಯುವ ಮಳೆ ಇರಲಿ, ಮನೆಯಲ್ಲಿ ಕಹಿ-ಸಿಹಿ ಘಟನೆ ಇರಲಿ,ಇವರ ಕಾಯಕ ಮಾತ್ರ ನಿರಂತರ. ನಸುಕಿನಲ್ಲಿ ಎದ್ದು, ಪತ್ರಿಕೆ ವಿತರಿಸುವ ಮೂಲಕ ಪ್ರಚಲಿತ ಘಟನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ವಿತರಕರ ಭವಿಷ್ಯ ಸುಧಾರಣೆಯಾಗಲಿ ಎಂದು ಆಶಿಸಿದರು.

ಪತ್ರಿಕೆಗಳ ಬೆನ್ನೆಲುಬಾಗಿರುವ ಪತ್ರಿಕೆವಿತರಕರುಎದುರಿಸುತ್ತಿರುವ ತಾಪತ್ರಯಗಳಿಗೆ ಲೆಕ್ಕವಿಲ್ಲ. ವಿತರಕರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗಿ, ತಮ್ಮ ಹಕ್ಕುಗಳಿಗೆ ಹೋರಾಟ ರೂಪಿಸಬೇಕು ಎಂದರು.

ಬೇಡಿಕೆ ಈಡೇರಿಕೆಗೆ ಆಗ್ರಹ:ಪತ್ರಿಕಾ ವಿತರಕರಿಗೂ ವಿಮಾ ಸೌಲಭ್ಯ ಕಲ್ಪಿಸಬೇಕು, ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು, ಕೆಲಸದ ವೇಳೆಯಲ್ಲಿ ಮೃತಪಟ್ಟರೆ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು,ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡಬೇಕು. ವೈದ್ಯಕೀಯ ಚಿಕಿತ್ಸೆ ಮತ್ತು ಅಪಘಾತದ ಪರಿಹಾರ ಮತ್ತು ಪ್ರಮುಖ ಕಾಯಿಲೆ ಗಳಿಗೆ ಚಿಕಿತ್ಸೆಗಾಗಿ ಸರ್ಕಾರ ದಿಂದ ಪರಿಹಾರ ಕಂಡುಕೊಳ್ಳಲು ಸಹಾಯ ನೀಡಬೇಕು ಮತ್ತು ಪತ್ರಿಕೆ ಹಂಚುವ ವಿತರಕರಿಗೆ ಎಲೆಕ್ಟ್ರಿಕ್‌ ಬೈಕ್‌ ಖರೀದಿಸಲು ಸಬ್ಸಿಡಿ ರೂಪದಲ್ಲಿ ಸಹಾಯಧನ ನೀಡಬೇಕು ಹಾಗೂ ಶೂನ್ಯ ಬಡ್ಡಿ ದರದಲ್ಲಿ ವಾಹನ ಖರೀದಿಸಲು ಸಹಾಯಧನ ನೀಡ ಬೇಕು ಎಂದು ಪತ್ರಿಕಾ ವಿತರಕರು ಆಗ್ರಹಿಸಿದರು.

ಸರ್ಕಾರ ನೆರವಿಗೆ ಬರಲಿ

ವೃತ್ತಿ ಉತ್ತಮವಾಗಿದೆ. 32 ವರ್ಷದಿಂದ ಇದೇ ವೃತ್ತಿಯನ್ನೇ ನಂಬಿದ್ದೇನೆ. ಸರ್ಕಾರವು ಪತ್ರಿಕಾ ವಿತರಕರಿಗೆ ನೆರವು ನೀಡಬೇಕು. ವಿತರಕರಿಗೆ ವಿಮೆಯಂತಹ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು.

- ಡಿ.ಎಸ್‌.ವೆಂಕಟೇಶ್‌,ವಿತರಕ ಹೊಸಹಳ್ಳಿ

36 ವರ್ಷದಿಂದ ಪತ್ರಿಕಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಓದುಗರು ಸಕಾಲಕ್ಕೆ ಪತ್ರಿಕೆಯ ಹಣವನ್ನು ಪಾವತಿಸಿ ಪ್ರೋತ್ಸಾಹಿಸಬೇಕಿದೆ. ಈ ವೃತ್ತಿಯಿಂದಲೇ ನನಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ

- ರವೀಂದ್ರ ನಾಯಕ್‌,ಟಿ.ದಾಸರಹಳ್ಳಿ ಪತ್ರಿಕಾ ವಿತರಕ

40 ವರ್ಷದಿಂದ ಪತ್ರಿಕೆ ವಿತರಿಸುತ್ತಿದ್ದೇನೆ. ಆರಂಭ ದಲ್ಲಿ ಮತ್ತೊಬ್ಬರ ಜತೆಗೂಡಿ ಕೆಲಸ ಮಾಡುತ್ತಿದ್ದೆ. ಈಗ ನಾನೇ ಏಜೆನ್ಸಿ ಪಡೆದಿರುವೆ. ಎಂಟು ಹುಡುಗರು ಮನೆಮನೆಗೆ ಪತ್ರಿಕೆ ವಿತರಿಸುತ್ತಿದ್ದಾರೆ. ಓದುಗರಿಂದಲೂ ಪ್ರೋತ್ಸಾಹ ಸಿಗುತ್ತಿದೆ.

- ರಂಗನಾಥ್‌,ಜಯನಗರ

22 ವರ್ಷದಿಂದ ಪತ್ರಿಕೆ ವಿತರಣೆ ಮಾಡುತ್ತಿದ್ದೇನೆ. ಓದುಗರ ಸ್ಪಂದನ ಉತ್ತಮವಾಗಿದೆ. ವೃತ್ತಿಯಲ್ಲಿ ಲಾಭವಿದ್ದರೂ ಪತ್ರಿಕೆ ಹಂಚಲು ಹುಡುಗರು ಆಸಕ್ತಿ ತೋರುತ್ತಿಲ್ಲ. ಕಂಪನಿಯಿಂದ ವೃತ್ತಿ ಪ್ರೋತ್ಸಾಹ ಸಿಗುತ್ತಿದೆ

- ನಾಗರಾಜ್‌,ತಲಘಟ್ಟಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT