ಮಂಗಳವಾರ, ಆಗಸ್ಟ್ 9, 2022
20 °C

ಪಂತರಪಾಳ್ಯ: ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪಂತರಪಾಳ್ಯದ ಎರಡೂವರೆ ಎಕರೆ ಪ್ರದೇಶದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತಲೆ ಎತ್ತಲಿದ್ದು, ಶೀಘ್ರದಲ್ಲಿಯೇ ಈ ಕಾಮಗಾರಿ ಆರಂಭವಾಗಲಿದೆ.

₹18 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ಬಿಬಿಎಂಪಿ ನಿರ್ಮಿಸಲಿದೆ. ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಶೀಘ್ರ ಶಂಕುಸ್ಥಾಪನೆ ನೆರವೇರಿಸಿ, ಕಟ್ಟಡ ಕಾಮಗಾರಿ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಡಯಾಲಿಸಿಸ್‌ ಕೇಂದ್ರ ಪರಿಶೀಲನೆ:

ಗೋವಿಂದರಾಜನಗರ ಕ್ಷೇತ್ರದ ಮಾರುತಿಮಂದಿರ ವಾರ್ಡ್ ವ್ಯಾಪ್ತಿಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಡಯಾಲಿಸಿಸ್‌ ಕೇಂದ್ರದ ಪರಿಶೀಲನೆಯನ್ನೂ ಗೌರವ್ ಗುಪ್ತ ನಡೆಸಿದರು.

ಬಿಬಿಎಂಪಿ ಅನುದಾನದಡಿ ₹10 ಕೋಟಿ ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣವಾಗುತ್ತಿದೆ. ಸದ್ಯ ಈ ಕೇಂದ್ರವನ್ನು ಕೋವಿಡ್‌ ರೋಗಿಗಳ ಆರೈಕೆಗಾಗಿ ಮೀಸಲಿಡುವ ಉದ್ದೇಶವಿದ್ದು, 15 ಐಸಿಯು ಹಾಸಿಗೆ ಹಾಗೂ 50 ಎಚ್‌ಡಿಯು ಹಾಸಿಗೆ ಸೇರಿದಂತೆ 65 ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ:

ನಗರದ ಅಗ್ರಹಾರ ದಾಸರಹಳ್ಳಿ ವಾರ್ಡ್‌ನ ಎಂ.ಸಿ. ಬಡಾವಣೆಯಲ್ಲಿ ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆ ಅಡಿಯಲ್ಲಿ ₹35 ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ನಡೆಯುತ್ತಿದೆ. 

ಈ ಕಾಮಗಾರಿಯು ಮುಂದಿನ ನವೆಂಬರ್‌ ವೇಳೆಗೆ ಮುಗಿಯಲಿದೆ ಎಂದು ಅಧಿಕಾರಿಗಳು ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಿದರು. ಶೀಘ್ರವಾಗಿ ಕಾಮಗಾರಿ ಮುಕ್ತಾಯಗೊಳಿಸಿ ಎಂದು ಗೌರವ್ ಗುಪ್ತ ಸೂಚನೆ ನೀಡಿದರು.

ಪಶ್ಚಿಮ ವಲಯ ಜಂಟಿ ಆಯುಕ್ತ ಶಿವಸ್ವಾಮಿ, ವಲಯ ಮುಖ್ಯ ಎಂಜಿನಿಯರ್‌ ದೊಡ್ಡಯ್ಯ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು