ಬೆಂಗಳೂರು: ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ದರೋಡೆಕೋರ ಯಾಸರ್ ರೆಹಮಾನ್ ಅಲಿಯಾಸ್ ಘೋರ್‌ನ (21) ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಕಾಲಿಗೆ ಗುಂಡೇಟು ತಗುಲಿದ್ದು ಆರೋಪಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದಾಶಿವನಗರದ ಅರಮನೆ ಮೈದಾನದ ಬಳಿ ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಮುಂದಾದ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಯಿತು ಎಂದು ಮೂಲಗಳು ಹೇಳಿವೆ.
ಸುಲ್ತಾನ್ ಪಾಳ್ಯದ ಭುವನೇಶ್ವರಿ ನಗರದ ನಿವಾಸಿಯಾಗಿರುವ ಆರೋಪಿ, ಸುಲಿಗೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿವೆ.
‘ಅಶೋಕ ನಗರ, ವೈಯಾಲಿಕಾವಲ್, ರಾಜಾಜಿನಗರ, ಮಲ್ಲೇಶ್ವರಂ, ಸದಾಶಿವನಗರ, ಯಶವಂತಪುರ ಭಾಗದಲ್ಲಿ ಈತ ಸುಲಿಗೆ ನಡೆಸುತ್ತಿದ್ದ. ಒಂಟಿಯಾಗಿ ನಡೆದು ತೆರಳುತ್ತಿದ್ದವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಮೊಬೈಲ್ ಹಾಗೂ ಹಣ ದೋಚುತ್ತಿದ್ದ. ಹೆಚ್ಚಾಗಿ ಈತ ಮುಂಜಾನೆ ವೇಳೆ ಸುಲಿಗೆಗೆ ಇಳಿಯುತ್ತಿದ್ದ. ಮುಂಜಾನೆ ಸುಲಿಗೆ ಮಾಡುತ್ತಿದ್ದರಿಂದ ಒಂದು ವಾರದಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಆದರೂ, ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಅರಮನೆ ಮೈದಾನದ ಬಳಿ ಆರೋಪಿಯನ್ನು ಬಂಧಿಸುವಾಗ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದ. ಆಗ ಇನ್‌ಸ್ಪೆಕ್ಟರ್ ಒಬ್ಬರು ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದರು ಎಂದು ಮೂಲಗಳು ಹೇಳಿವೆ.
ಆರೋಪಿ ಜತೆಗಿದ್ದ ಸಹಚರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.