ಗಮನ ಬೇರೆಡೆ ಸೆಳೆದು ₹4 ಲಕ್ಷ ಕಳವು

ಸೋಮವಾರ, ಜೂಲೈ 22, 2019
27 °C

ಗಮನ ಬೇರೆಡೆ ಸೆಳೆದು ₹4 ಲಕ್ಷ ಕಳವು

Published:
Updated:

ಬೆಂಗಳೂರು: ಚಿಕ್ಕಪೇಟೆಯ ಬಿ.ವಿ.ಕೆ. ಐಯ್ಯಂಗಾರ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಚಾಲಕನ ಗಮನ ಬೇರೆಡೆ ಸೆಳೆದಿದ್ದ ದುಷ್ಕರ್ಮಿಗಳು, ಕಾರಿನಲ್ಲಿದ್ದ ₹ 4 ಲಕ್ಷ ನಗದು ಕದ್ದೊಯ್ದಿದ್ದಾರೆ.

ಈ ಸಂಬಂಧ ಕಾರಿನ ಮಾಲೀಕ ಮಹಮ್ಮದ್ ಕಲೀಂ ಎಂಬುವರು ಸಿಟಿ ಮಾರ್ಕೆಟ್ ಠಾಣೆಗೆ ದೂರು ನೀಡಿದ್ದಾರೆ.

‘ರಿಚ್ಮಂಡ್ ಟೌನ್ ನಿವಾಸಿಯಾದ ಕಲೀಂ, ಸಿವಿಲ್ ಎಂಜಿನಿಯರ್. ಎಲೆಕ್ಟ್ರಿಕ್ ಉತ್ಪನ್ನಗಳನ್ನು ಖರೀದಿಸಲು ಕಾರಿನಲ್ಲಿ ಚಾಲಕ ಅಕ್ಬರ್ ಪಾಷಾ ಜೊತೆ ಬಂದಿದ್ದರು. ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸುವಂತೆ ಚಾಲಕನಿಗೆ ಹೇಳಿ ಅಂಗಡಿಗೆ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

‘ಕಾರಿನ ಬಳಿ ಬಂದಿದ್ದ ನಾಲ್ವರು ದುಷ್ಕರ್ಮಿಗಳ ಪೈಕಿ ಒಬ್ಬಾತ, ‘ರಸ್ತೆಯಲ್ಲಿ ನಿಮ್ಮ ನೋಟು ಬಿದ್ದಿದೆ’ ಎಂದು ಹೇಳಿದ್ದ. ಅದು ನನ್ನದಲ್ಲವೆಂದು ಅಕ್ಬರ್‌ ಹೇಳಿದ್ದರು. ಮತ್ತೊಬ್ಬ ಆರೋಪಿ, ಅಕ್ಬರ್‌ ಬಳಿ ಬಂದು ಮಾತನಾಡುತ್ತ ಗಮನ ಬೇರೆಡೆ ಸೆಳೆದಿದ್ದ. ಅದೇ ವೇಳೆ ಉಳಿದ ಆರೋಪಿಗಳು, ಕಾರಿನ ಕಿಟಕಿಯ ಮೂಲಕ ಹಣವಿದ್ದ ಬ್ಯಾಗ್ ಕದ್ದುಕೊಂಡು ಪರಾರಿಯಾಗಿದ್ದಾರೆ’ ಎಂದು ವಿವರಿಸಿದರು. 

‘ಅರೆನ್ಯಾಯಿಕ ಅಧಿಕಾರಿಗಳು ಅಂಗಡಿ ತೆರೆದಿದ್ದಾರೆ’

ಬೆಂಗಳೂರು: ‘ಅರೆನ್ಯಾಯಿಕ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರಿಗಳು ಅಂಗಡಿ ತೆರೆದು ಕೂತಿರುತ್ತಾರೆ’ ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ನೆಲಮಂಗಲ ತಾಲ್ಲೂಕು ಕಸಬಾ ಹೋಬಳಿಯ ಓಬಿನಾಯ್ಕನಹಳ್ಳಿಯ ವ್ಯಾಪ್ತಿಯಲ್ಲಿ 18 ಗುಂಟೆ ಜಮೀನಿನ ವಾರಸುದಾರಿಕೆಗೆ ಸಂಬಂಧಿಸಿದ ದಾಯಾದಿ ವ್ಯಾಜ್ಯವೊಂದನ್ನು ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರ ವಾದಕ್ಕೆ ಗರಂ ಆದ ನ್ಯಾಯಮೂರ್ತಿಗಳು, ‘ರಾಜ್ಯದಲ್ಲಿ ಅರೆನ್ಯಾಯಿಕ ನ್ಯಾಯಾಲಯಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎಂಬುದು ಕೋರ್ಟ್‌ಗೆ ಚೆನ್ನಾಗಿ ಗೊತ್ತಿದೆ. ಅರೆ ನ್ಯಾಯಿಕ ಪ್ರಕರಣಗಳ ವಿಚಾರಣೆ ನಡೆಸುವ ಅದಿಕಾರಿಗಳ ಮುಂದೆ ದುಡ್ಡು ಇದ್ದರೆ ಬೇಕಾದಂತಹ ಆದೇಶ ಪಡೆದುಕೊಂಡು ಬರಬಹುದಾದ ಪರಿಸ್ಥಿತಿ ಇದೆ’ ಎಂದು ಅವರು ಕಿಡಿ ಕಾರಿದರು.

₹3.03 ಕೋಟಿ ವಂಚನೆ; ಎಫ್‌ಐಆರ್‌

‘ಕಾರ್ಪೋರೇಷನ್ ಬ್ಯಾಂಕ್‌ನ ಹಿಂದಿನ ಸಹಾಯಕ ವ್ಯವಸ್ಥಾಪಕ ಪಿ.ಎ. ಉತ್ತಮ್ ಅವರು ₹3.03 ಕೋಟಿ ವಂಚನೆ ಮಾಡಿದ್ದಾರೆ’ ಎಂದು ಆರೋಪಿಸಿ ಹಾಲಿ ಸಹಾಯಕ ವ್ಯವಸ್ಥಾಪಕ ಎಂ.ಆರ್.ಮನೋಹರ್, ಸಂಪಂಗಿರಾಮನಗರ ಠಾಣೆಗೆ ದೂರು ನೀಡಿದ್ದಾರೆ.

‘ಬ್ಯಾಂಕ್‌ನಲ್ಲಿ ರದ್ದಾದ ಡಿ.ಡಿ.ಗಳನ್ನು ಹೊಸ ಡಿ.ಡಿ.ಗಳಾಗಿ ಸೃಷ್ಟಿಸಿದ್ದ ಉತ್ತಮ್, ಅವುಗಳನ್ನು ಬಳಸಿ ಬ್ಯಾಂಕ್‌ನ ಹಣವನ್ನು ತನ್ನ ಹಾಗೂ ಇತರರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಆ ಮೂಲಕ ಬ್ಯಾಂಕ್‌ಗೆ ವಂಚಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಮನೋಹರ್ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !