ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆಯಿಂದ ಎದ್ದು ಬರುವವರಿಗೆ ನ್ಯಾಯ ನೀಡಲು ಕುಳಿತಿಲ್ಲ: ಹೈಕೋರ್ಟ್‌

ಐದು ದಶಕದ ಹಿಂದಿನ ಪ್ರಕರಣದ ವಿಚಾರಣೆ ವೇಳೆ ಚಾಟಿ ಬೀಸಿದ ಹೈಕೋರ್ಟ್‌
Published 23 ನವೆಂಬರ್ 2023, 16:31 IST
Last Updated 23 ನವೆಂಬರ್ 2023, 16:31 IST
ಅಕ್ಷರ ಗಾತ್ರ

ಬೆಂಗಳೂರು: ‘ಐದು ದಶಕಗಳ ಕಾಲ ಗಾಢ ನಿದ್ರೆೆಯಲ್ಲಿದ್ದು, ಈಗ ದೈವವಾಣಿಯಿಂದ ಎಚ್ಚರಗೊಂಡಂತೆ ಎದ್ದು ನ್ಯಾಯ ಕೇಳಲು ಬಂದವರಿಗೆ ನೆರವು ನೀಡಲು ನಾವು ಇಲ್ಲಿ ಕುಳಿತಿಲ್ಲ. ಅಂತಹದ್ದನ್ನು ನಮ್ಮಿಂದ ನಿರೀಕ್ಷಿಸುವುದೂ ಬೇಡ...’

ಹೀಗೆಂದು ಪುನರ್ವಸತಿ ಕಲ್ಪಿಸುವ ವಿಚಾರವಾಗಿ 50 ವರ್ಷಗಳ ಬಳಿಕ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಚಾಟಿ ಬೀಸಿದೆ.

ಭದ್ರಾ ಮೇಲ್ದಂಡೆ ಯೋಜನೆಗಾಗಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ಹೋಬಳಿಯ ಗೊಲ್ಳಹಳ್ಳಿ ಗ್ರಾಮದ ಸ್ಥಳಾಂತರಕ್ಕೆೆ 1962ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 20 ಎಕರೆ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಸಂತ್ರಸ್ತ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಅರ್ಜಿದಾರರ ಪರ ವಕೀಲರು, ಗೊಲ್ಲರಹಳ್ಳಿ ಸ್ಥಳಾಂತರಕ್ಕೆೆ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸಂತ್ರಸ್ತ ಫಲಾನುಭವಿಗಳು ಪುನರ್ವಸತಿ ಪರಿಹಾರದಿಂದ ವಂಚಿತರಾಗಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರು ಅನೇಕ ಮನವಿಗಳನ್ನು ನೀಡಿದ್ದರು. ಇಲಾಖೆಗಳ ನಡುವೆ ಪತ್ರ ವ್ಯವಹಾರಗಳಷ್ಟೇ ನಡೆದಿವೆ. ನ್ಯಾಯ ಸಿಕ್ಕಿಲ್ಲ. ಈ ಬಗ್ಗೆೆ 1994ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ನ್ಯಾಯಾಲಯ ವಜಾಗೊಳಿಸಿತ್ತು. 2020ರಲ್ಲಿ ಮತ್ತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

‘19ನೇ ಶತಮಾನ ಕಳೆದು 20ನೇ ಶತಮಾನದ 20 ವರ್ಷಗಳು ಕಳೆದು ಹೋಗಿವೆ. 50 ವರ್ಷ ಗಾಢ ನಿದ್ದೆೆಯಲ್ಲಿದ್ದ ಅರ್ಜಿದಾರ ಫಲಾನುಭವಿಗಳು, ‘ಈಗ ಕೋರ್ಟ್‌ಗೆ ಹೋಗಲು ಸೂಕ್ತ ಸಮಯ’ ಎಂದು ದೈವವಾಣಿ ಕೇಳಿಸಿಕೊಂಡು ನಿದ್ದೆೆಯಿಂದ ಎದ್ದವರಂತೆ ಕೋರ್ಟ್‌ಗೆ ಬಂದಿದ್ದಾರೆ. ಗಾಢ ನಿದ್ದೆೆಯಲ್ಲಿದ್ದವರಿಗೆ ಹೈಕೋರ್ಟ್ ನೆರವು ನೀಡುತ್ತದೆ ಎಂದು ನಿರೀಕ್ಷೆೆ ಮಾಡುತ್ತೀರಾ?ನಿದ್ರಾವಸ್ಥೆೆಯಲ್ಲಿದ್ದವರಿಗೆ ಸಹಾಯ ಮಾಡಲು ಈ ಕೋರ್ಟ್ ಇಲ್ಲ. ಜಾಗೃತ ಸ್ಥಿತಿಯಲ್ಲಿದ್ದವರಿಗೆ ನೆರವು ನೀಡಬಹುದು. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ವಿಳಂಬವನ್ನು ಮನ್ನಿಸಬಹುದು. ಆದರೆ, ದಶಕಗಳ ವಿಳಂಬವನ್ನು ಒಪ್ಪಲು ಸಾಧ್ಯವಿಲ್ಲ. ಇದೊಂದೇ ಪ್ರಕರಣ ಅಲ್ಲ, ಇಂತಹ ಅನೇಕ ಅರ್ಜಿಗಳು ಬರುತ್ತಿದೆ. ಈಗ ದೊಡ್ಡ ಮೊತ್ತದ ದಂಡ ವಿಧಿಸಲು ಆರಂಭಿಸಬೇಕೆನಿಸುತ್ತದೆ. ಪಿಐಎಲ್‌ಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಇಂತಹ ಪಿಎಎಲ್‌ಗಳಿಗೆ ತೀವ್ರ ಆಕ್ಷೇಪವಿದೆ‘ ಎಂದು ಹೇಳಿತು.

ಅರ್ಜಿ ವಾಪಸ್ ಪಡೆಯವುದಾಗಿ ಅರ್ಜಿದಾರರ ಪರ ವಕೀಲರು ಹೇಳಿರುವುದನ್ನು ಒಪ್ಪಿದ ನ್ಯಾಯಪೀಠ, ಅರ್ಜಿದಾರರ ಫಲಾನುಭವಿಗಳು ವೈಯಕ್ತಿಕವಾಗಿ ಕೋರ್ಟ್‌ನಲ್ಲಿ ನ್ಯಾಯ ಪಡೆದುಕೊಳ್ಳಬಹುದು ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT