ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಆರ್‌ಆರ್‌ ಯೋಜನೆ ವಿಭಜನೆಗೆ ಚಿಂತನೆ

ಬಿಡ್‌ದಾರರನ್ನು ಸೆಳೆಯಲು ಹೊಸಕ್ರಮಕ್ಕೆ ಮುಂದಾದ ಬಿಡಿಎ
Published 7 ಜುಲೈ 2024, 21:58 IST
Last Updated 7 ಜುಲೈ 2024, 21:58 IST
ಅಕ್ಷರ ಗಾತ್ರ

ಬೆಂಗಳೂರು: ಬಿಡ್‌ದಾರರು ಬಾರದೇ ಇರುವುದರಿಂದ ಅನುಷ್ಠಾನಕ್ಕೆ ಬಾರದ ಹೊರ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಯನ್ನು ಮೂರು ಭಾಗಗಳನ್ನಾಗಿ ವಿಭಜಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಚಿಂತನೆ ನಡೆಸಿದೆ.

74 ಕಿ.ಮೀ. ಉದ್ದದ ಪಿಆರ್‌ಆರ್‌ ಕಾರಿಡಾರ್‌ ಅನ್ನು ನಿರ್ಮಿಸಲು ಬಿಡಿಎ ನಿರ್ಧರಿಸಿತ್ತು. ಈ ಯೋಜನೆಗೆ ಸಂಬಂಧಿಸಿದಂತೆ ಟೆಂಡರ್‌ ಕೂಡ ಕರೆಯಲಾಗಿತ್ತು. ಆದರೆ ಬಿಡ್‌ನಲ್ಲಿ ಭಾಗವಹಿಸಲು ಯಾವುದೇ ಕಂಪನಿಗಳು ಉತ್ಸಾಹ ತೋರಿರಲಿಲ್ಲ. 

ಯೋಜನೆ ರೂಪಿಸಿ ಬಹುಕಾಲದಿಂದ ಬಾಕಿ ಉಳಿದಿರುವ ಈ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗಿತ್ತು. ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್‌, ಆಯುಕ್ತ ಎನ್.ಜಯರಾಮ್, ಅಧಿಕಾರಿಗಳು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.

₹ 27,000 ಕೋಟಿ ಅಂದಾಜು ವೆಚ್ಚದ ಈ ಯೋಜನೆಯನ್ನು ಮೂರು ಭಾಗಗಳಾಗಿ ವಿಂಗಡಿಸುವ ಮೂಲಕ ಬಿಡ್‌ದಾರರನ್ನು ಸೆಳೆಯಲು ಯೋಜನೆ ರೂಪಿಸಲಾಗುತ್ತಿದೆ. ನಗರದ ಸುತ್ತ ಅರ್ಧವೃತ್ತವನ್ನು ರೂಪಿಸುವ 74 ಕಿ.ಮೀ. ಉದ್ದದ ಈ ರಸ್ತೆಯನ್ನು ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆವರೆಗೆ, ಬಳ್ಳಾರಿ ರಸ್ತೆಯಿಂದ ಹಳೇ ಮದ್ರಾಸ್ ರಸ್ತೆವರೆಗೆ ಮತ್ತು ಹಳೇ ಮದ್ರಾಸ್ ರಸ್ತೆಯಿಂದ ಹೊಸೂರು ರಸ್ತೆವರೆಗೆ ಎಂದು ವಿಂಗಡಿಸುವ ಬಗ್ಗೆ ಚರ್ಚೆಗಳಾಗಿವೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

100 ಮೀಟರ್ ಅಗಲದ ರಸ್ತೆ, ಅದರ ಮಧ್ಯದಲ್ಲಿ ಮೆಟ್ರೊ ಅಥವಾ ಮೋನೊ ರೈಲಿಗೆ ಸ್ಥಳಾವಕಾಶ ಮತ್ತು ಸೈಕ್ಲಿಸ್ಟ್‌ಗಳಿಗೆ ಮೀಸಲು ಮಾರ್ಗ ನಿರ್ಮಿಸುವುದು ಮೂಲ ಯೋಜನೆಯಲ್ಲಿ ಸೇರಿತ್ತು. ಆದರೆ, ಈಗ ಸರ್ಕಾರವು ರಸ್ತೆಯ ಅಗಲವನ್ನು 60 ಮೀಟರ್ ಮತ್ತು 75 ಮೀಟರ್‌ಗೆ ಇಳಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ಆರಂಭಿಸಿದೆ.

‘50 ವರ್ಷಗಳವರೆಗೆ ಟೋಲ್‌ ಸಂಗ್ರಹ ಮಾಡುವುದು ಸೇರಿ ಒಟ್ಟು ಯೋಜನಾ ವೆಚ್ಚ ₹ 14,000 ಕೋಟಿ ಎಂದು ಅಂದಾಜಿಸಲಾಗಿತ್ತು. ಭೂ ಸ್ವಾಧೀನ ಕಾಯ್ದೆ–2013ರ ಪ್ರಕಾರ ಪರಿಹಾರ ನೀಡುವಂತೆ ರೈತರು ಬೇಡಿಕೆ ಇಟ್ಟಿರುವುದರಿಂದ ಅಂದಾಜು ವೆಚ್ಚವನ್ನು ₹ 27,000 ಕೋಟಿಗೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಡಿಎ ತನ್ನ ಹೊಸ ಬಡಾವಣೆಗಳಲ್ಲಿ ರೈತರಿಗೆ ನಗದು ಪರಿಹಾರದ ಬದಲು ಜಮೀನು ನೀಡುವ ಬಗ್ಗೆಯೂ ಯೋಚನೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT