ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಸರ ಕಸಿದು ಪರಾರಿ: ಆರೋಪಿಗಳ ಬಂಧನ

Published 8 ಜುಲೈ 2024, 16:00 IST
Last Updated 8 ಜುಲೈ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತ್ಯೇಕ ಸರ ಕಳವು ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಠಾಣಾ ವ್ಯಾಪ್ತಿಯ ಶ್ರೀಗಂಧನಗರದ ಹೆಗ್ಗನಹಳ್ಳಿಯಲ್ಲಿ ನಡೆದ ಸರ ಕಳ್ಳತನ ಪ್ರಕರಣದಲ್ಲಿ ಸುಂಕದಕಟ್ಟೆ ನಿವಾಸಿ ಮನೋಜ್‌ಕುಮಾರ್‌ (27) ಎಂಬಾತನನ್ನು ಬಂಧಿಸಿ, ₹90 ಸಾವಿರ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜೂನ್‌ 19ರಂದು ಬಾಲಾಜಿ ಅಪಾರ್ಟ್‌ಮೆಂಟ್‌ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದಿದ್ದ ಆರೋಪಿ ಕಸಿದು ಪರಾರಿಯಾಗಿದ್ದ. ಸರ ಕಳೆದುಕೊಂಡಿದ್ದವರು ನೀಡಿದ ದೂರು ಆಧರಿಸಿ, ಹೆಗ್ಗನಹಳ್ಳಿ ಕೆ.ಟಿ.ಸಿ ಕಾಲೇಜು ಬಳಿ ಆರೋಪಿಯನ್ನು ಬಂಧಿಸಲಾಯಿತು. ಕೃತ್ಯಕ್ಕೆ ಬಳಸಿದ್ದ ಬೈಕ್‌ ಜಪ್ತಿ ಮಾಡಲಾಗಿದೆ. ಆರೋಪಿ ಪತ್ತೆಗೆ ವಿವಿಧ ಸ್ಥಳಗಳಲ್ಲಿ ಹಾಕಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

ಇಬ್ಬರ ಬಂಧನ: ಹೆಗ್ಗನಹಳ್ಳಿ ಸಂಜೀವಿನಿನಗರದ ಮನೆಯೊಂದರಲ್ಲಿ ಗೃಹಿಣಿ ಧರಿಸಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ರಾಮಕೃಷ್ಣ ಅಲಿಯಾಸ್‌ ಸಚ್ಚಿನ್‌ (37) ಹಾಗೂ ನಾಗೇಶ್‌ (32) ಎಂಬುವವರನ್ನು ಇದೇ ಠಾಣೆ ಪೊಲೀಸರು ಬಂಧಿಸಿದ್ದಾರೆ. 

‘ಜುಲೈ 1ರಂದು ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದಿದ್ದ ಆರೋಪಿಗಳು, ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಮನೆ ಮಾಲೀಕರು ನೀಡಿದ ದೂರು ಆಧರಿಸಿ, ಠಾಣಾ ವ್ಯಾಪ್ತಿಯ ಆಲದಮರದ ವೃತ್ತದ ಬಳಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಬಂಧಿತರಿಂದ ₹1.5 ಲಕ್ಷದ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT