ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ಕೊಲೆ: ಮೂವರ ಬಂಧನ

Published 30 ಮಾರ್ಚ್ 2024, 22:33 IST
Last Updated 30 ಮಾರ್ಚ್ 2024, 22:33 IST
ಅಕ್ಷರ ಗಾತ್ರ

ಬೆಂಗಳೂರು: ಹೆಮ್ಮಿಗೆಪುರದಲ್ಲಿ ಮಣ್ಣು ಸಮತಟ್ಟು ಮಾಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಜೆ.ಸಿ.ಬಿ ಯಂತ್ರದ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಹೆಮ್ಮಿಗೆಪುರದ ಎಚ್‌.ಎಸ್‌.ಲಿಂಗಮೂರ್ತಿ ಕೊಲೆಯಾದ ವ್ಯಕ್ತಿ.

ಲಿಂಗಮೂರ್ತಿ ಅವರ ಸಹೋದರ ಗೋವಿಂದರಾಜು ಎಂಬುವವರು ದೂರು ನೀಡಿದ್ದು, ಹೆಮ್ಮಿಗೆಪುರ ನಿವಾಸಿ ಚಿರಂಜೀವಿ ಅಲಿಯಾಸ್ ಚಿರಿ (40) ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.

ಕೊಲೆಯಾದ ಲಿಂಗಮೂರ್ತಿ ಮತ್ತು ಅವರ ಸಹೋದರ ಗುತ್ತಿಗೆದಾರರಾಗಿದ್ದರು. ಲಿಂಗಮೂರ್ತಿ ಅವರ ಬಳಿ ಜೆಸಿಬಿ ಯಂತ್ರಗಳಿದ್ದವು. ಹೆಮ್ಮಿಗೆಪುರ ಐರಾ ಸ್ಕೂಲ್ ಪಕ್ಕದ ಖಾಲಿ ಜಾಗದಲ್ಲಿ ಸುರಿದಿದ್ದ ಮಣ್ಣನ್ನು ಶುಕ್ರವಾರ ತಡರಾತ್ರಿ ಲಿಂಗಮೂರ್ತಿ ಜೆಸಿಬಿ ಯಂತ್ರದ ಮೂಲಕ ಮಟ್ಟ ಮಾಡುತ್ತಿದ್ದರು. ಆಗ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ‘ಮಣ್ಣನ್ನು ಮಟ್ಟ ಮಾಡುವುದು ಮಾತ್ರವಲ್ಲ, ನೀರು ಹಾಕು. ಇಲ್ಲವಾದರೆ ಧೂಳು ಹೆಚ್ಚಾಗುತ್ತದೆ’ ಎಂದು ಗದರಿದ್ದರು.

ಇದಕ್ಕೆ ಲಿಂಗಮೂರ್ತಿ ಪ್ರತಿಕ್ರಿಯಿಸಿ, ‘ನೀರು ಹಾಕುವುದು ನಮ್ಮ ಕೆಲಸ ಅಲ್ಲ. ಗುತ್ತಿಗೆ ಪಡೆದುಕೊಂಡ ಕೆಲಸ ಮಾತ್ರ ಮಾಡುತ್ತೇವೆ ಎಂದಿದ್ದಾರೆ. ಇದೇ ವಿಚಾರಕ್ಕೆ ಗಲಾಟೆ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ಲಿಂಗಮೂರ್ತಿ ಸಹೋದರ ಗೋವಿಂದರಾಜುಗೆ ಕರೆ ಮಾಡಿ ಚಿರಂಜೀವಿ ಗಲಾಟೆ ಮಾಡುತ್ತಿರುವ ವಿಚಾರ ತಿಳಿಸಿ, ಸ್ಥಳಕ್ಕೆ ಬರುವಂತೆ ಕೋರಿದ್ದರು. ಮತ್ತೊಂದೆಡೆ ಗಲಾಟೆ ವಿಕೋಪಕ್ಕೆ ಹೋದಾಗ ಆರೋಪಿಗಳು ಚಾಕುವಿನಿಂದ ಲಿಂಗಮೂರ್ತಿ ಎದೆಗೆ ಇರಿದು ಪರಾರಿಯಾಗಿದ್ದರು’.

‘ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಿಂಗಮೂರ್ತಿ ಅವರನ್ನು ಸ್ನೇಹಿತ ಕುಮಾರ್ ಎಂಬುವರು ಆಸ್ಪತ್ರೆಗೆ ಕರೆದೊ ಯ್ದಿದ್ದಾರೆ. ಅಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಹಾಗೂ ಲಿಂಗಮೂರ್ತಿ ನಡುವೆ ಈ ಹಿಂದೆಯೂ ಗಲಾಟೆ ನಡೆದಿತ್ತು. ಶುಕ್ರವಾರ ರಾತ್ರಿ ಉದ್ದೇಶ
ಪೂರ್ವಕವಾಗಿಯೇ ಜೆಸಿಬಿ ಯಂತ್ರದ ಕೆಲಸ ಮಾಡುವ ಸ್ಥಳಕ್ಕೆ ಬಂದು ಚಿರಂಜೀವಿ ಗಲಾಟೆ ಮಾಡಿದ್ದಾನೆ. ಅಲ್ಲದೆ, ಕೊಲೆ ಮಾಡುವ ಉದ್ದೇಶದಿಂದಲೇ ಚಾಕುವನ್ನು ಜತೆಗೆ ತಂದಿದ್ದ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಣ್ಣು ದಾನ
ಲಿಂಗಮೂರ್ತಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ವೈದ್ಯರು,‘ತೀವ್ರ ರಕ್ತಸ್ರಾವ ಆಗಿರುವುದರಿಂದ ಬದುಕುವುದು ಕಷ್ಟ’ ಎಂದು ಹೇಳಿದ್ದರು. ಆಗ ಲಿಂಗಮೂರ್ತಿ, ‘ನಾನು ಬದುಕುವುದಿಲ್ಲ ಎಂದಾದರೆ ನನ್ನ ಕಣ್ಣುಗಳನ್ನು ದಾನ ಮಾಡುತ್ತೇನೆ’ ಎಂದು ಹೇಳಿದ್ದರು. ಕೆಲ ಹೊತ್ತಿನ ಬಳಿಕ ಲಿಂಗಮೂರ್ತಿ ಮೃತಪ್ಟಟಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT