ಭಾನುವಾರ, ಜೂನ್ 13, 2021
29 °C

ಟಿಐಇ: ಅಂತಿಮ ಸುತ್ತಿಗೆ 48 ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ಜಾಗತಿಕ ಉದ್ಯಮದಾರರ ಸಂಸ್ಥೆಯ (ಟಿಐಇ) ಬೆಂಗಳೂರು ಶಾಖೆ ಹಮ್ಮಿಕೊಂಡಿದ್ದ ಯುವ ಉದ್ಯಮಿ ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆಗಳ 48 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 

ಟಿಐಇನ 30ಕ್ಕೂ ಹೆಚ್ಚು ಶಾಖೆಗಳು ವಿಶ್ವದಾದ್ಯಂತ ಈ ಸ್ಪರ್ಧೆಯನ್ನು ಆನ್‌ಲೈನ್‌ನಲ್ಲಿ ಆಯೋಜಿಸಿದ್ದವು. ಬೆಂಗಳೂರು ಘಟಕದ ಅಂತಿಮ ಸುತ್ತಿನಲ್ಲಿ 250 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ 48 ವಿದ್ಯಾರ್ಥಿಗಳು ಎಂಟು ತಂಡಗಳಾಗಿ ರೂಪಿಸಿದ್ದ, ಎಂಟು ಯೋಜನೆಗಳನ್ನು ಅಂತಿಮಗೊಳಿಸಲಾಯಿತು. ಮುಂದಿನ ವರ್ಷ ಜಾಗತಿಕ ಮಟ್ಟದಲ್ಲಿ ಅಂತಿಮ ಸ್ಪರ್ಧೆ ನಡೆಯಲಿದ್ದು, ಈ ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಗೆದ್ದ ತಂಡವು ₹7.50 ಲಕ್ಷ (10 ಸಾವಿರ ಡಾಲರ್‌) ಬಹುಮಾನವನ್ನು ಪಡೆಯಲಿದೆಯಲ್ಲದೆ, ಜಾಗತಿಕವಾಗಿ ಮನ್ನಣೆ ಪಡೆಯಲಿದೆ. ಮುಂದಿನ ವರ್ಷ ನಡೆಯಲಿರುವ ಅಂತಿಮ ಸುತ್ತಿನಲ್ಲಿ ವಿಶ್ವದ ಹಲವು ತಂಡಗಳು ಸೆಣಸಲಿವೆ. 

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೊದಲ ಹಂತದ ಸುತ್ತುಗಳು ಆನ್‌ಲೈನ್‌ನಲ್ಲಿಯೇ ನಡೆಸಲಾಯಿತು. ಐವರು ತೀರ್ಪುಗಾರರ ಸಮಿತಿಯು ವಿಜೇತರನ್ನು ಆಯ್ಕೆ ಮಾಡಿತು. 

ಗ್ರೀನ್‌ವುಡ್‌ ಹೈ, ಟಿಐಎಸ್‌ಬಿ, ಕ್ರೈಸ್ಟ್‌ ಜ್ಯೂನಿಯರ್ ಕಾಲೇಜು, ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್, ದೆಹಲಿ ಪಬ್ಲಿಕ್‌ ಸ್ಕೂಲ್‌, ಬಿಷಪ್‌ ಕಾಟನ್‌ ಬಾಲಕಿಯರ ಶಾಲೆ, ಸೋಫಿಯಾ ಪ್ರೌಢಶಾಲೆ, ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಸ್ಕೂಲ್ ಸೇರಿದಂತೆ ನಗರದ ಹಲವು ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು