ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಸುಲ್ತಾನ್‌ ಹೆಸರು ರದ್ದು: ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಕೋಲಾಹಲ

ಕೌನ್ಸಿಲ್‌ನ ನಿರ್ಣಯವನ್ನು ಸ್ವಯಂಪ್ರೇರಿತವಾಗಿ ರದ್ದುಪಡಿಸಲು ಅವಕಾಶವಿಲ್ಲ– ಪ್ರತಿಪಕ್ಷ ಆಕ್ಷೇಪ
Last Updated 29 ಜನವರಿ 2020, 20:05 IST
ಅಕ್ಷರ ಗಾತ್ರ

ಬೆಂಗಳೂರು: ಜಕ್ಕೂರು ವಾರ್ಡ್‌ ವ್ಯಾಪ್ತಿಯ ಬೆಳ್ಳಹಳ್ಳಿ ವೃತ್ತಕ್ಕೆ ಇಟ್ಟಿದ್ದ ‘ಬೆಳ್ಳಹಳ್ಳಿ ಟಿಪ್ಪು ಸುಲ್ತಾನ್‌ ವೃತ್ತ’ ಎಂಬ ಹೆಸರನ್ನು ರದ್ದುಪಡಿಸಿರುವ ವಿಚಾರ ಪಾಲಿಕೆ ಸಭೆಯಲ್ಲಿ ಬುಧವಾರ ಕೋಲಾಹಲ ಸೃಷ್ಟಿಸಿತು.

ಈ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಎಂ.ಶಿವರಾಜು, ‘ಈ ಹಿಂದೆ ಕೌನ್ಸಿಲ್‌ನಲ್ಲಿ ತೆಗೆದುಕೊಂಡ ನಿರ್ಣಯ ರದ್ದುಪಡಿಸಬೇಕಾದರೆ, ಯಾರಾದರೂ ಸದಸ್ಯರು ಕೆಎಂಸಿ ಕಾಯ್ದೆಯ ನಿಯಮ 51ರ ಪ್ರಕಾರ ಪ್ರಸ್ತಾವ ಸಲ್ಲಿಸಬೇಕು. ಇಲ್ಲವೇ ಮೂರನೇ ಎರಡರಷ್ಟು ಸದಸ್ಯರು ಸಹಿ ಮಾಡಿ ಮನವಿ ನೀಡಬೇಕು. ಇವೆರಡನ್ನೂ ಮಾಡದೆ ಹಳೆ ನಿರ್ಣಯವನ್ನು ಹೇಗೆ ರದ್ದುಪಡಿಸಿದಿರಿ’ ಎಂದು ಪ್ರಶ್ನಿಸಿದರು.

‘ಇಲ್ಲಿ ತೆಗೆದುಕೊಂಡ ನಿರ್ಣಯವನ್ನು ರದ್ದುಪಡಿಸಿದರೆ ಸಭೆಯ ಗೌರವಕ್ಕೆ ಧಕ್ಕೆ ಆಗುತ್ತದೆ. ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಹೇಳಿದರು.

‘ನಿಮ್ಮ ಪಕ್ಷದ ಮುಖಂಡ ಎನ್‌.ಆರ್‌.ರಮೇಶ್‌ ಆಡಳಿತ ಪಕ್ಷದ ನಾಯಕರಾಗಿದ್ದಾಗ ರಸ್ತೆಯೊಂದಕ್ಕೆ ಟಿಪ್ಪು ಸುಲ್ತಾನ್‌ ಹೆಸರಿಡುವ ತೀರ್ಮಾನ ಕೈಗೊಂಡಿದ್ದರು. ಬೆಳ್ಳಹಳ್ಳಿ ವೃತ್ತಕ್ಕೆ ಇಟ್ಟಿದ್ದ ಟಿಪ್ಪು ಹೆಸರನ್ನು ಕೈಬಿಟ್ಟರೆ ಟಿಪ್ಪುವಿನ ಜೊತೆಗೆ ಅವರಿಗೂ ಅವಮಾನ ಮಾಡಿದಂತೆ’ ಎಂದು ಕಾಂಗ್ರೆಸ್‌ನ ಆರ್‌. ಸಂಪತ್‌ರಾಜ್‌ ಆಡಳಿತ ಪಕ್ಷದ ಸದಸ್ಯರ ಕಾಲೆಳೆದರು.

‘ನಿಯಮ 51ರ ಅಡಿಯೇ ಈ ನಿರ್ಣಯ ಕೈಗೊಂಡಿದ್ದೇವೆ’ ಎಂದು ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌ ಹೇಳಿದರು.

‘ಹಿಂದಿನ ನಿರ್ಣಯವನ್ನು ಸ್ವಯಂಪ್ರೇರಿತವಾಗಿ ರದ್ದುಪಡಿಸಲು ಬರುತ್ತದೆಯೋ ಇಲ್ಲವೋ ಎಂದು ಆಯುಕ್ತರು ಸ್ಪಷ್ಟಪಡಿಸಲೇ ಬೇಕು’ ಎಂದು ಪಟ್ಟು ಹಿಡಿದ ಕಾಂಗ್ರೆಸ್‌ ಸದಸ್ಯರು, ಮೇಯರ್‌ ಪೀಠದ ಎದುರು ಪ್ರತಿಭಟನೆ ಆರಂಭಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ನಿಯಮಗಳನ್ನು ಪರಿಶೀಲಿಸಿ ತೀರ್ಮಾನ ಪ್ರಕಟಿಸುತ್ತೇನೆ’ ಎಂದರು. ಬಳಿಕವಷ್ಟೇ ಪ್ರತಿಪಕ್ಷದ ಸದಸ್ಯರು ಆಸನಗಳಿಗೆ ಮರಳಿದರು.

‘ಈ ನಿರ್ಣಯವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಮುನೀಂದ್ರ ಕುಮಾರ್‌ ಸ್ಪಷ್ಟಪಡಿಸಿದರು.

‘ವಲಯ ಆಯುಕ್ತರಿಂದ ಪ್ರತಿ ತಿಂಗಳು ಸಭೆ’

‘ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾಪವಾದ ಬಹುತೇಕ ಸಮಸ್ಯೆಗಳು ವಲಯ ಅಥವಾ ವಾರ್ಡ್‌ ಮಟ್ಟದಲ್ಲೇ ಬಗೆಹರಿಸುವಂತಹವು.ಎಲ್ಲೋ ಒಂದು ಕಡೆ ಅಧಿಕಾರಿ ಚುನಾಯಿತ ಪ್ರತಿನಿಧಿಗಳ ನಡುವೆ ಹೊಂದಾಣಿಕೆ ಕೊರತೆ ಇದೆ.ಎಲ್ಲ ವಲಯ ಆಯುಕ್ತರು ಪಾಲಿಕೆ ಸದಸ್ಯರ ಜೊತೆ ಸಭೆ ನಡೆಸಿ, ಅಧಿಕಾರಿಗಳ ಸಮಕ್ಷಮದಲ್ಲಿ ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್ ತಿಳಿಸಿದರು.

‘ಒಂಟಿ ಮನೆ ಫಲಾನುಭವಿಗಳು ಮಹಡಿ ಮನೆ ಕಟ್ಟಿದ್ದಾರೆ ಎಂಬ ಕಾರಣಕ್ಕೆ ಅನುದಾನ ಬಿಡುಗಡೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅಣ್ಣ ತಮ್ಮಂದಿರುವ ಇರುವ ಕುಟುಂಬ ಮಹಡಿ ಮನೆ ಕಟ್ಟಿದರೆ ತಪ್ಪೇನು’ ಎಂದು ಕೆಲ ಸದಸ್ಯರು ಪ್ರಶ್ನಿಸಿದರು.

‘ಬಡವರು ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರ ಯೋಜನೆಗಳಿಗೆ ಯಾವುದೇ ಕೊರತೆ ಆಗಬಾರದು. ಒಂಟಿ ಮನೆಗಳ ನಿರ್ಮಾಣಕ್ಕೆ ಅನುದಾನ ಕೊರತೆ ಇಲ್ಲ’ ಎಂದು ಆಯುಕ್ತರು ಹೇಳಿದರು.

ಕೌನ್ಸಿಲ್‌ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಪ್ರಕಟಿಸಿದರು.

ಬೀದಿದೀಪ: ಟೆಂಡರ್‌ ಗೋಳು

‘ಎಲ್‌ಇಡಿ ಬೀದಿ ದೀಪ ಅಳವಡಿಸಲು ಜಾಗತಿಕ ಟೆಂಡರ್‌ ಕರೆದ ಬಳಿಕ ಕೆಟ್ಟುಹೋದ ಬೀದಿ ದೀಪ ಬದಲಾಯಿಸುವುದಕ್ಕೆ ಅನುಮತಿ ನೀಡುತ್ತಿಲ್ಲ. ಜಾಗತಿಕ ಟೆಂಡರ್‌ ಪಡೆದವರೂ ದೀಪ ಅಳವಡಿಸುತ್ತಿಲ್ಲ. ರಸ್ತೆಗಳೆಲ್ಲ ಕತ್ತಲಲ್ಲಿ ಮುಳುಗುವಂತಾಗಿದೆ’ ಎಂದು ಅನೇಕ ಸದಸ್ಯರು ಗಮನ ಸೆಳೆದರು.

‘ಎಲ್‌ಇಡಿ ದೀಪ ಅಳವಡಿಸಲು ಟೆಂಡರ್‌ ಕರೆದಿರುವುದರಿಂದ ಬೀದಿದೀಪ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳದಂತೆ ಸರ್ಕಾರ ಆದೇಶಿಸಿದೆ. ಕೆಲವೆಡೆ ತುರ್ತಾಗಿ ಬೀದಿ ದೀಪ ಅಳವಡಿಸಬೇಕಾಗಿರುವುದರಿಂದ 14ನ ಹಣಕಾಸು ಆಯೋಗದ ಅನುದಾನದಲ್ಲಿ ಕಾಮಗಾರಿಗೆ ಅನುಮೋದನೆ ನೀಡುತ್ತಿದ್ದೇವೆ’ ಎಂದು ಆಯುಕ್ತರು ತಿಳಿಸಿದರು.

‘ಗುತ್ತಿಗೆ ಪಡೆದ ಸಂಸ್ಥೆ ವಾರದಲ್ಲಿ ಕೆಲಸ ಆರಂಭಿಸದಿದ್ದರೆ ಟೆಂಡರ್‌ ರದ್ದುಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT