ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆ ನೆಪದಲ್ಲಿ ಪೊಲೀಸರಿಂದ ಚಿತ್ರಹಿಂಸೆ

ಕೆ.ಜಿ.ಹಳ್ಳಿ ಪೊಲೀಸರ ವಿರುದ್ಧ ಪೇಂಟರ್ ಆರೋಪ
Last Updated 8 ಜುಲೈ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು:‌ ‘ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದ ಕೆ.ಜಿ.ಹಳ್ಳಿ ಪೊಲೀಸರು, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಾಸುಂಡೆ ಬರುವಂತೆ ಹೊಡೆದಿದ್ದಾರೆ’ ಎಂದು ಆರೋಪಿಸಿ ವಿನೋದ್ ಎಂಬ ಪೇಂಟರ್ ನಗರ ಪೊಲೀಸ್ ಕಮಿಷನರ್ ಕಚೇರಿಗೆ ದೂರು ಕೊಟ್ಟಿದ್ದಾರೆ.

ದೇವರಜೀವನಹಳ್ಳಿ ಸಮೀಪದ ಆರೋಗ್ಯದಾಸ್ ನಗರ ನಿವಾಸಿಯಾದ ವಿನೋದ್ ಅವರ ಬೆನ್ನು, ತೊಡೆ ಹಾಗೂ ಕಾಲಿನ ಮೇಲೆ ಬಾಸುಂಡೆ ಗುರುತುಗಳು ಮೂಡಿದ್ದು, ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

‘ಜೂನ್ 29ರ ರಾತ್ರಿ 10 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದೆ. ಈ ವೇಳೆ ಸಂಬಂಧಿ ನಂದಕುಮಾರ್ ಬಂದು, ‘ಸ್ವಲ್ಪ ಕೆಲಸ ಇದೆ ಬಾ’ ಎಂದು ಕರೆದುಕೊಂಡು ಹೋದ. ಹೊರಗಡೆ ಕೆ.ಜಿ.ಹಳ್ಳಿ ಠಾಣೆಯ ಪೊಲೀಸರಾದ ಉಚ್ಚಾಂಡಿ ಹಾಗೂ ಹರೀಶ್ ನಿಂತಿದ್ದರು. ಏನೂ ಹೇಳದೆ ನನ್ನನ್ನು ಆಟೊದಲ್ಲಿ ಹತ್ತಿಸಿಕೊಂಡು ಹೊರಟರು’ ಎಂದು ಹೇಳಿದ್ದಾರೆ.

‘ಟ್ಯಾನರಿ ರಸ್ತೆಯಲ್ಲಿ ಆಟೊ ನಿಲ್ಲಿಸಿದ ಅವರು, ನನ್ನನ್ನು ಆಭರಣ ಮಳಿಗೆಯೊಂದಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅಂಗಡಿ ಮಾಲೀಕನಿಗೆ ಬೆದರಿಸಿ ಚಿನ್ನದ ಸರ, ಉಂಗುರ ಹಾಗೂ ₹ 20 ಸಾವಿರ ನಗದನ್ನು ಪಡೆದುಕೊಂಡರು. ಏನು ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗಲಿಲ್ಲ. ಅವರೂ ಹೇಳಲಿಲ್ಲ. ನಂತರ ನನ್ನನ್ನು ಠಾಣೆಗೆ ಕರೆದೊಯ್ದ ಅವರು, ‘ಇವುಗಳನ್ನು ನಾನೇ ಕದ್ದಿದ್ದು ಎಂದು ಒಪ್ಪಿಕೊ. ನಿನ್ನನ್ನು ಬಿಟ್ಟು ಕಳುಹಿಸುತ್ತೇವೆ. ಕೇಳಿದಷ್ಟು ದುಡ್ಡನ್ನೂ ಕೊಡುತ್ತೇವೆ. ತಿಂಗಳ ಕೊನೆ ಬೇರೆ. ಕೇಸ್ ಕ್ಲೋಸ್ ಮಾಡ್ಲಿಲ್ಲ ಅಂದ್ರೆ ಡಿಸಿಪಿ ಬೈಯ್ತಾರೆ’ ಎಂದರು. ಅದಕ್ಕೆ ನಾನು ಒಪ್ಪಲಿಲ್ಲ.’

‘ಎಷ್ಟೇ ಬಲವಂತ ಮಾಡಿದರೂ ನಾನು ಮಾತು ಕೇಳದಿದ್ದಾಗ ಲಾಠಿಯಿಂದ ಮನಸೋಇಚ್ಛೆ ಹೊಡೆಯಲಾರಂಭಿಸಿದರು. ‘ನಾವು ಹೇಳಿದ ಹಾಗೆ ನಡೆದುಕೊಳ್ಳದಿದ್ದರೆ ನೀನು ಜೀವಂತವಾಗಿ ಹೊರಗೆ ಹೋಗುವುದಿಲ್ಲ’ ಎಂದೂ ಬೆದರಿಸಿದರು. ಅಷ್ಟರಲ್ಲಿ ನಮ್ಮ ತಂದೆ ಠಾಣೆಗೆ ಬಂದರು. ಅವರಿಂದ ಹಣ ಪಡೆದ ಬಳಿಕ ನನ್ನನ್ನು ಬಿಟ್ಟು ಕಳುಹಿಸಿದರು’ ಎಂದು ವಿನೋದ್ ಆರೋಪಿಸಿದ್ದಾರೆ.

₹ 20 ಸಾವಿರ ಕೇಳಿದ್ದರು

‘ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ನನಗೆ 11 ಗಂಟೆಗೆ ವಿಷಯ ಗೊತ್ತಾಯಿತು. ತಕ್ಷಣ ಠಾಣೆಗೆ ತೆರಳಿದೆ. ಇನ್‌ಸ್ಪೆಕ್ಟರ್‌ ಭೇಟಿಗೆ ಅವಕಾಶ ಸಿಗಲಿಲ್ಲ. ಪಿಎಸ್‌ಐವೊಬ್ಬರು, ‘₹ 20 ಸಾವಿರ ಕೊಟ್ಟು ಮಗನನ್ನು ಕರೆದುಕೊಂಡು ಹೋಗು’ ಎಂದರು. ನನ್ನ ಬಳಿ ಹಣವಿರಲಿಲ್ಲ. ಸ್ನೇಹಿತನ ಹತ್ತಿರ ₹ 10 ಸಾವಿರ ಸಾಲ ಪಡೆದು ಅವರಿಗೆ ಕೊಟ್ಟೆ. ‘ಉಳಿದ ಹಣ ಕೊಡದಿದ್ದರೆ ಮತ್ತೆ ಇದೇ ಪರಿಸ್ಥಿತಿ ಎದುರಿಸುತ್ತೀರಾ’ ಎಂದು ಹೇಳಿ ಮಗನನ್ನು ಬಿಟ್ಟು ಕಳುಹಿಸಿದರು. ಪೊಲೀಸರ ಈ ವರ್ತನೆಯಿಂದ ಬೇಸರಗೊಂಡು, ಕಮಿಷನರ್ ಅವರಿಗೆ ದೂರು ಕೊಟ್ಟೆವು’ ಎಂದು ವಿನೋದ್ ತಂದೆ ಜಯಮಣಿ ಹೇಳಿದರು.

ತನಿಖೆಗೆ ಸಿದ್ಧವಿದ್ದೇವೆ: ದೌರ್ಜನ್ಯ ಆರೋಪ ತಳ್ಳಿ ಹಾಕಿರುವ ಕೆ.ಜಿ.ಹಳ್ಳಿ ಪೊಲೀಸರು, ‘ನಂದಕುಮಾರ್ ಹಾಗೂ ವಿನೋದ್ ಇಬ್ಬರೂ ಕಳ್ಳರೇ. ವಾರದ ಹಿಂದೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದರು. ಆ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದೆ. ಅವರನ್ನು ವಶಕ್ಕೆ ಪಡೆದು 10 ಗ್ರಾಂನ ಚಿನ್ನದ ಸರ, 6 ಗ್ರಾಂನ ಉಂಗುರ ಹಾಗೂ ಒಂದು ಮೊಬೈಲನ್ನು ಜಪ್ತಿ ಮಾಡಿದ್ದೇವೆ. ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್ ಕೊಡದೆ ಯಾವ ಕಳ್ಳ ತಾನೇ ತಪ್ಪೊಪ್ಪಿಕೊಳ್ಳುತ್ತಾನೆ. ಈ ವಿಚಾರದಲ್ಲಿ ಇಲಾಖಾ ವಿಚಾರಣೆ ಎದುರಿಸುವುದಕ್ಕೂ ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ.

‘ಪೊಲೀಸರನ್ನು ಬಿಟ್ಟು ಪ್ರತೀಕಾರ’

‘ಇದೆಲ್ಲ ಸಂಬಂಧಿ ನಂದಕುಮಾರ್‌ನದ್ದೇ ಸಂಚು. ಕಳ್ಳತನ ಮಾಡಿಕೊಂಡು ಬದುಕುವ ಆತ, ಕೆ.ಜಿ.ಹಳ್ಳಿ ಪೊಲೀಸರ ಮಾಹಿತಿದಾರನೂ ಹೌದು. ನನ್ನ ಚಿಕ್ಕಮ್ಮನ ಮಗಳನ್ನು ಆತನಿಗೇ ಕೊಟ್ಟು ಮದುವೆ ಮಾಡಿದ್ದೇವೆ. ತಿಂಗಳ ಹಿಂದೆ ಆಕೆ ಮೇಲೆ ಹಲ್ಲೆ ನಡೆಸಿದ್ದ ಎಂಬ ಕಾರಣಕ್ಕೆ ನಂದಕುಮಾರ್‌ಗೆ ನಾನು ಹೊಡೆದಿದ್ದೆ. ಅದೇ ದ್ವೇಷದಿಂದ ಪರಿಚಿತ ಪೊಲೀಸರನ್ನು ಬಿಟ್ಟು ನನಗೆ ಹೊಡೆಸಿದ್ದಾನೆ’ ಎಂದು ವಿನೋದ್ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT