ದಟ್ಟಣೆಗೆ ಬೇಸತ್ತ; ಮುಖವಾಡ ಧರಿಸಿ ಸೈಕಲ್ನಲ್ಲಿ ಹೊರಟ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದ ಬೇಸತ್ತ ಸಾಫ್ಟ್ವೇರ್ ಎಂಜಿನಿಯರೊಬ್ಬರು ಇತ್ತೀಚೆಗೆ ತಮ್ಮ ಕಚೇರಿಗೆ ಕುದುರೆ ಮೇಲೆ ಹೋಗಿದ್ದನ್ನು ನೋಡಿದ್ದೇವೆ. ಈಗ ಮತ್ತೊಬ್ಬ ಉದ್ಯೋಗಿ, ಮುಖವಾಡ ಧರಿಸಿ ಸೈಕಲ್ನಲ್ಲೇ ನಿತ್ಯವೂ ಸಂಚರಿಸುತ್ತಿದ್ದಾರೆ.
ಖಾಸಗಿ ಕಂಪನಿಯ ಉದ್ಯೋಗಿ ಮುರಳಿ ಕಾರ್ತಿಕ್ ಎಂಬುವರು, ವೃದ್ಧರ ಮುಖವಾಡ ಧರಿಸಿ ನಿತ್ಯವೂ ಸೈಕಲ್ನಲ್ಲೇ ಕಚೇರಿಗೆ ಹೋಗಿ ಬರುತ್ತಿದ್ದಾರೆ. ತಮ್ಮ ಸ್ನೇಹಿತರು ಹಾಗೂ ಪರಿಚಯಸ್ಥರನ್ನು ಭೇಟಿಯಾಗಲು ಸಹ ಸೈಕಲ್ನ್ನೇ ಬಳಸುತ್ತಿದ್ದಾರೆ.
‘ಸೈಕಲ್ ಬಳಸಿದರೆ, ಟ್ರಾಫಿಕ್ ಇರಲ್ಲ ಮಾಲಿನ್ಯವೂ ಆಗೊಲ್ಲ’ ಎಂಬ ಬರಹವುಳ್ಳ ಫಲಕವನ್ನು ತಮ್ಮ ಸೈಕಲ್ಗೆ ನೇತು ಹಾಕಿಕೊಂಡಿದ್ದಾರೆ. ಮುಖವಾಡ ಧರಿಸಿ ಸುತ್ತಾಡುವ ಅವರನ್ನು ಕಂಡ ಸಾರ್ವಜನಿಕರು, ತಡೆದು ಮಾತನಾಡಿಸುತ್ತಿದ್ದಾರೆ. ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.
ಮುರಳಿಯವರು ಸೈಕಲ್ನಲ್ಲಿ ಹೊರಟಿದ್ದ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಇಶಾನ್ ಬಾಲಿ, ‘ಈ ಯುವಕ, ವಿಭಿನ್ನ ರೀತಿಯಲ್ಲಿ ಸೈಕಲ್ ಬಳಸುತ್ತಿದ್ದಾನೆ. ನೀವೂ ಸೈಕಲ್ ಬಳಕೆ ಮಾಡಿ’ ಎಂದು ಬರೆದುಕೊಂಡಿದ್ದಾರೆ.
‘ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ ಎಂದು ಬೇರೆಯವರನ್ನು ದೂಷಿಸುತ್ತೇವೆ. ಆ ದಟ್ಟಣೆಗೆ ನಾವೇ ಕಾರಣ ಎಂಬುದನ್ನು ಈ ಯುವಕ ತೋರಿಸಿದ. ಇವತ್ತು ಕಚೇರಿಗೆ ಹೋಗುವಾಗ ದಾರಿ ಮಧ್ಯೆ ಸಿಕ್ಕ ಈ ಯುವಕ, ನನ್ನ ಆಲೋಚನೆಯನ್ನೇ ಬದಲಾಯಿಸಿದ. ಆತನ ಜತೆ ಸೇರಿ ನಾವೆಲ್ಲೂ ಸೈಕಲ್ ಬಳಕೆ ಮಾಡಬೇಕು. ಆಗ, ದಟ್ಟಣೆಗೆ ಪರಿಹಾರ ಸಿಗಲಿದೆ’ ಎಂದು ಇಶಾನ್ ಹೇಳಿಕೊಂಡಿದ್ದಾರೆ.
ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಮೋಹನ್ ಎಂಬುವರು, ‘ಕಚೇರಿಗೆ ಹೋಗುವಾಗ ಹಾಗೂ ಬರುವಾಗ ಈ ಯುವಕನನ್ನು ನೋಡಿದ್ದೇನೆ. ಅವರ ಮುಖವಾಡವೇ ನನ್ನ ಗಮನ ಸೆಳೆದಿತ್ತು’ ಎಂದಿದ್ದಾರೆ.
ಗಿರಿಧರ್ ಎಂಬುವರು, ‘ಮುರಳಿಯವರು ದಟ್ಟಣೆಯಿಂದ ಬೇಸತ್ತಿದ್ದಾರೆ. ಹೀಗಾಗಿಯೇ ಸೈಕಲ್ ಬಳಸುತ್ತಿದ್ದಾರೆ. ಇನ್ನು ಕೆಲವು ದಿನಗಳ ನಂತರ ನಾವೆಲ್ಲರೂ ಸೈಕಲ್ ಬಳಸುವ ಸ್ಥಿತಿಯೇ ಬರಲಿದೆ’ ಎಂದು ಬರೆದುಕೊಂಡಿದ್ದಾರೆ.
ಸೈಕಲ್ ಬಳಕೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮುರಳಿ ಕಾರ್ತಿಕ್ ಲಭ್ಯರಾಗಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.