ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸಂಚಾರ ದಟ್ಟಣೆಯಲ್ಲಿ ಸಿಲುಕಿ ಜನ ಹೈರಾಣ

ಸಮ್ಮೇಳನ, ಉದ್ಯೋಗ ಮೇಳಕ್ಕೆ ವಿವಿಧ ಜಿಲ್ಲೆಗಳಿಂದ ಬಂದವರ ಅನಿವಾರ್ಯ ‘ಪಾದಯಾತ್ರೆ’
Published 27 ಫೆಬ್ರುವರಿ 2024, 23:45 IST
Last Updated 27 ಫೆಬ್ರುವರಿ 2024, 23:45 IST
ಅಕ್ಷರ ಗಾತ್ರ

ಬೆಂಗಳೂರು: ಅರಮನೆ ರಸ್ತೆಯಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಮ್ಮೇಳನ ಹಾಗೂ ಬೃಹತ್ ಉದ್ಯೋಗ ಮೇಳದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರಿಂದ, ನಗರದ ಹಲವು ರಸ್ತೆಗಳಲ್ಲಿ ಮಂಗಳವಾರ ಇಡೀ ದಿನ ವಿಪರೀತ ಸಂಚಾರ ದಟ್ಟಣೆ ಉಂಟಾಯಿತು.

ಸಾರಿಗೆ ನಿಗಮಗಳ ಬಸ್‌ಗಳು, ಖಾಸಗಿ ಬಸ್‌ಗಳು ಹಾಗೂ ಕಾರುಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ನೌಕರರು ನಗರಕ್ಕೆ ಬಂದಿದ್ದರು. ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು, ಕೆಲ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿದ್ದರಿಂದ, ಉಳಿದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿ ದಟ್ಟಣೆ ಕಂಡುಬಂತು.

ತುಮಕೂರು ರಸ್ತೆಯ ಜಾಲಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಸದಾಶಿವನಗರ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಂತೂ ವಾಹನಗಳು ನಿಮಿಷಗಟ್ಟಲೆ ನಿಂತಲ್ಲೇ ನಿಂತಿದ್ದವು. ಯಶವಂತಪುರದಿಂದ ಅರಮನೆ ಮೈದಾನದತ್ತ ಹೊರಟಿದ್ದ ವಾಹನಗಳು ಮೇಲ್ಸೇತುವೆಯಲ್ಲಿ ನಿಧಾನಗತಿಯಲ್ಲಿ ಸಾಗಿದವು. ಐಐಎಸ್ಸಿ, ಸದಾಶಿವನಗರ ಪೊಲೀಸ್ ಠಾಣೆ ವೃತ್ತ ಹಾಗೂ ಮೇಖ್ರಿ ವೃತ್ತದಲ್ಲಂತೂ ವಾಹನಗಳು ಮುಂದಕ್ಕೆ ಹೋಗದ ಸ್ಥಿತಿ ನಿರ್ಮಾಣವಾಗಿತ್ತು.

ಖಾಸಗಿ ಬಸ್‌ಗಳಲ್ಲಿ ಬಂದಿದ್ದ ನೌಕರರು ಅರ್ಧ ದಾರಿಯಲ್ಲೇ ಇಳಿದು, ಅರಮನೆ ಮೈದಾನದತ್ತ ನಡೆದುಕೊಂಡು ಹೋದರು. ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಜನರು ಸಹ ಬಸ್ಸಿನಿಂದ ಇಳಿದು ಪಾದಚಾರಿ ಮಾರ್ಗದಲ್ಲಿ ಹೆಜ್ಜೆ ಹಾಕಿದರು. ಕೆಲವರು ಸಾಮಗ್ರಿಗಳನ್ನು ಹೊತ್ತುಕೊಂಡು ಸಾಗಿದರು. ಮಕ್ಕಳು ಹಾಗೂ ವೃದ್ಧರು ನಡೆಯಲು ಕಷ್ಟಪಟ್ಟರು. ಆಗಾಗ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು, ನಂತರ ಮುಂದಕ್ಕೆ ಸಾಗಿದರು.

ಬಳ್ಳಾರಿ ರಸ್ತೆಯಲ್ಲಿ ನಿತ್ಯವೂ ದಟ್ಟಣೆ ಸಾಮಾನ್ಯ. ಆದರೆ, ಮಂಗಳವಾರ ವಿಪರೀತ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೆಬ್ಬಾಳ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ದಟ್ಟಣೆ ಕಂಡುಬಂತು. ಸರ್ಕಾರಿ ನೌಕರರ ಸಮ್ಮೇಳನದ ಪೋಸ್ಟರ್ ಅಂಟಿಸಿದ್ದ ಖಾಸಗಿ ಬಸ್‌ಗಳೇ ರಸ್ತೆಯಲ್ಲಿ ಹೆಚ್ಚಿದ್ದವು. ಮೈಸೂರು ರಸ್ತೆಯಲ್ಲೂ ವಿಪರೀತ ದಟ್ಟಣೆ ಉಂಟಾಗಿತ್ತು.

ಸೋಮವಾರದಿಂದ ಆರಂಭವಾದ ಉದ್ಯೋಗ ಮೇಳದಲ್ಲಿ ಮಂಗಳವಾರವೂ ಸಾಕಷ್ಟು ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಅಭ್ಯರ್ಥಿಗಳು ರಸ್ತೆ ದಾಟುವ ಸಂದರ್ಭದಲ್ಲಿ ವಾಹನಗಳ ಸಂಚಾರ ತಡೆಯಲಾಗಿತ್ತು. ಇದರಿಂದಾಗಿ ಮತ್ತಷ್ಟು ದಟ್ಟಣೆ ಉಂಟಾಯಿತು.

‘ಸಮ್ಮೇಳನದಲ್ಲಿ ಭಾಗವಹಿಸಲು ಖಾಸಗಿ ಬಸ್‌ನಲ್ಲಿ ಬೆಳಿಗ್ಗೆ 8 ಗಂಟೆಗೆ ಪಾರ್ಲೆ ಟೋಲ್‌ಗೇಟ್‌ ಬಳಿ ಬಂದಿದ್ದೆವು. ದಟ್ಟಣೆಯಿಂದ ಬಸ್‌ ನಿಧಾನವಾಗಿ ಹೊರಟಿತು. ಮಧ್ಯಾಹ್ನ 11 ಗಂಟೆಗೆ ಯಶವಂತಪುರ ತಲುಪಿದೆವು. ದಟ್ಟಣೆ ಕಂಡು ಇಂದು ಮೈದಾನ ತಲುಪುವುದು ಅಸಾಧ್ಯವೆಂಬುದು ಗೊತ್ತಾಯಿತು. ಹೀಗಾಗಿ, ಯಶವಂತಪುರ ಮೇಲ್ಸೇತುವೆಯಲ್ಲಿ ಇಳಿದು ಮೈದಾನದವರೆಗೂ ನಡೆದುಕೊಂಡು ಹೋದೆವು’ ಎಂದು ಸರ್ಕಾರಿ ನೌಕರ ಕೆ. ಮಲ್ಲೇಶಪ್ಪ ತಿಳಿಸಿದರು.

ನಿಲುಗಡೆಗೆ ಹರಸಾಹಸ: ಹೊರ ಜಿಲ್ಲೆಗಳಿಂದ ಬಂದಿದ್ದ ನೌಕರರನ್ನು ಅರಮನೆ ಮೈದಾನದ ಗೇಟ್‌ಗಳ ಬಳಿ ಇಳಿಸಿದ ಬಸ್‌ಗಳು ಹಾಗೂ ಕಾರುಗಳನ್ನು ಸೂಕ್ತ ಜಾಗದಲ್ಲಿ ನಿಲುಗಡೆ ಮಾಡಲು ಚಾಲಕರು ಹರಸಾಹಸಪಟ್ಟರು.

ಕೆಲವು ಬಸ್‌ಗಳನ್ನು ಅರಮನೆ ಮೈದಾನದಲ್ಲಿ ನಿಲುಗಡೆ ಮಾಡಲಾಗಿತ್ತು. ಪಾರ್ಕಿಂಗ್ ಜಾಗ ಭರ್ತಿಯಾಗಿದ್ದರಿಂದ, ಜಯಮಹಲ್ ರಸ್ತೆಗೆ ಹೊಂದಿಕೊಂಡಿರುವ ಮೈದಾನದೊಳಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಕೆಲ ಗಂಟೆಗಳಲ್ಲಿ ಅಲ್ಲಿಯೇ ವಾಹನಗಳು ಭರ್ತಿಯಾದವು. ನಂತರ, ರಸ್ತೆ ಅಕ್ಕ–ಪಕ್ಕದಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು. ಇದು ಸಹ ದಟ್ಟಣೆಗೆ ಕಾರಣವಾಯಿತು.

ರಾತ್ರಿಯೂ ದಟ್ಟಣೆ ಬಿಸಿ: ಸಮ್ಮೇಳನ ಹಾಗೂ ಉದ್ಯೋಗ ಮೇಳ ಮುಗಿಸಿ ಜನರೆಲ್ಲರೂ ರಾತ್ರಿ ಊರಿನತ್ತ ಹೊರಟಿದ್ದ ಸಂದರ್ಭದಲ್ಲೂ ವಿಪರೀತ ದಟ್ಟಣೆ ಉಂಟಾಯಿತು. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನಗಳೇ ಹೆಚ್ಚಿದ್ದವು.

ಇಡೀ ದಿನ ಉಂಟಾಗಿದ್ದ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಒಂದು ರಸ್ತೆಯಲ್ಲಿ ದಟ್ಟಣೆ ಕಡಿಮೆಯಾಗುತ್ತಿದ್ದಂತೆ, ಮತ್ತೊಂದು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ನೈಸ್ ರಸ್ತೆಯಲ್ಲಿ ದಟ್ಟಣೆಯಲ್ಲಿನ ವಾಹನ ದಟ್ಟಣೆ
ನೈಸ್ ರಸ್ತೆಯಲ್ಲಿ ದಟ್ಟಣೆಯಲ್ಲಿನ ವಾಹನ ದಟ್ಟಣೆ
ಮಾದಾವರ ಬಳಿ ಉರುಳಿಬಿದ್ದಿದ್ದ ಟ್ಯಾಂಕರ್
ಮಾದಾವರ ಬಳಿ ಉರುಳಿಬಿದ್ದಿದ್ದ ಟ್ಯಾಂಕರ್
ಬೆಳಿಗ್ಗೆ 6 ಗಂಟೆಗೆ ಮೈಸೂರು ಬಿಟ್ಟಿದ್ದೆ. ನೈಸ್‌ ರಸ್ತೆ ಹಾಗೂ ಬೆಂಗಳೂರಿನ ದಟ್ಟಣೆಯಲ್ಲಿ ಸಿಲುಕಿದ್ದರಿಂದ ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನ ತಲುಪಿದೆ
ಅಯಾನ್ ಅಹಮ್ಮದ್ ಮೈಸೂರು ವಿದ್ಯಾರ್ಥಿ
ಹೆದ್ದಾರಿಯಲ್ಲಿ ಉರುಳಿಬಿದ್ದಿದ್ದ ಟ್ಯಾಂಕರ್
ರಾಷ್ಟ್ರೀಯ ಹೆದ್ದಾರಿಯ ಮಾದಾವರ ಬಳಿ ಅಪಘಾತ ಉಂಟಾಗಿ ಟ್ಯಾಂಕರ್‌ವೊಂದು ಉರುಳಿಬಿದ್ದಿತ್ತು. ರಾಷ್ಟ್ರೀಯ ಹೆದ್ದಾರಿಯ ಅರ್ಧ ಭಾಗದಲ್ಲಿ ವಾಹನಗಳ ಸಂಚಾರ ಬಂದ್ ಆಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸರ್ಕಾರಿ ನೌಕರರ ಸಮ್ಮೇಳನಕ್ಕೆ ಬರುತ್ತಿದ್ದವರು ದಟ್ಟಣೆಯಲ್ಲಿ ಸಿಲುಕಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ದಟ್ಟಣೆಯ ಬಿಸಿ ನೈಸ್ ರಸ್ತೆಗೂ ತಟ್ಟಿತ್ತು. ನೈಸ್‌ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಬರುವ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT