ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಗ್ ಕಿತ್ತೊಯ್ದಿದ್ದವರ ಬಂಧನ

ಪರಾರಿಯಾಗಿದ್ದ ಆರೋಪಿಗಳನ್ನು ಬೆನ್ನಟ್ಟಿದ್ದ ಸಂಚಾರ ಪೊಲೀಸರು
Last Updated 11 ಸೆಪ್ಟೆಂಬರ್ 2020, 19:27 IST
ಅಕ್ಷರ ಗಾತ್ರ

ಬೆಂಗಳೂರು: ಭಾರತಿನಗರ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಹಿಳೆಯನ್ನು ತಳ್ಳಿ ಗಾಯಗೊಳಿಸಿ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಗಳಾದ ಆಸಿಫ್ ಮತ್ತು ತೌಸಿಫ್ ಬಂಧಿತರು. ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜೋಶಿನಿ ಎಂಬುವರು ಸೆ. 9ರಂದು ಮಧ್ಯಾಹ್ನ 12.30ರ ಸುಮಾರಿಗೆ ಕೋಲ್ಸ್ ಪಾರ್ಕ್ ಜಂಕ್ಷನ್ ಬಳಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು, ಜೋಶಿನಿ ಅವರನ್ನು ತಳ್ಳಿ ರಸ್ತೆಯಲ್ಲೇ ಬೀಳಿಸಿದ್ದರು. ಬ್ಯಾಗ್‌ ಕಿತ್ತುಕೊಂಡು ಪರಾರಿಯಾಗಲು ಮುಂದಾಗಿದ್ದರು'.

'ನರಳುತ್ತಿದ್ದ ಮಹಿಳೆ ಸಹಾಯಕ್ಕಾಗಿ ಕೂಗಿದ್ದರು. ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದ ಪುಲಿಕೇಶಿನಗರ ಸಂಚಾರ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ಗಳಾದ ಹೇಮಂತ್ ಕುಮಾರ್ ಹಾಗೂ ನಾಗೇಂದ್ರ, ಆರೋಪಿಗಳನ್ನು ಬೆನ್ನಟ್ಟಿದ್ದರು' ಎಂದು ಪೊಲೀಸರು ಹೇಳಿದರು.

'ಮಾರ್ಗಮಧ್ಯೆಯೇ ಆರೋಪಿಗಳು ಮಹಿಳೆಯ ಬ್ಯಾಗ್ ಎಸೆದು ಪರಾರಿಯಾಗಿದ್ದರು. ಬ್ಯಾಗ್ ಪಡೆದ ಹೆಡ್ ಕಾನ್‌ಸ್ಟೆಬಲ್‌ಗಳು, ಜೋಶಿನಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಹಣ ಹಾಗೂ ಮೊಬೈಲ್ ಇದ್ದ ಬ್ಯಾಗ್ ವಾಪಸು ನೀಡಿದ್ದರು'.

ಠಾಣೆಗೆ ಕರೆಸಿಕೊಂಡು ಬಂಧನ: 'ಪರಾರಿ ಯಾದ ಆರೋಪಿಗಳ ಬಗ್ಗೆ ಹೆಡ್ ಕಾನ್‌ಸ್ಟೆಬಲ್‌ಗಳು, ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ನಂತರಠಾಣೆ ಸಿಬ್ಬಂದಿ, ವಾಹನ ಪತ್ತೆ ಮಾಡಿದ್ದರು. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇರುವು ದಾಗಿ ಹೇಳಿ ಆರೋಪಿಗಳನ್ನು ಠಾಣೆಗೆ ಕರೆಸಿಕೊಂಡು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಆರೋಪಿಗಳನ್ನು ಬೆನ್ನಟ್ಟಿದ್ದ ಹೆಡ್‌ ಕಾನ್‌ಸ್ಟೆಬಲ್‌ಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಪೂರ್ವ ವಿಭಾಗದ (ಸಂಚಾರ) ಡಿಸಿಪಿ ನಾರಾಯಣ, 'ಸಂಚಾರ ದಟ್ಟಣೆ ನಿರ್ವಹಣೆ ಸಮಯದಲ್ಲೂ ನಮ್ಮ ಪೊಲೀಸರು ತೋರಿದ ಧೈರ್ಯ, ಸಮಯ ಪ್ರಜ್ಞೆ, ಕರ್ತವ್ಯ ಪಾಲನೆ ಮೆಚ್ಚುವಂಥದ್ದು' ಎಂದಿದ್ದಾರೆ. ಮಹಿಳೆ ಜೋಶಿನಿ ಹಾಗೂ ಅವರ ಪೋಷಕರು ಸಹ ಹೆಡ್‌ ಕಾನ್‌ಸ್ಟೆಬಲ್‌ಗಳು ನೆರವಿಗೆ ಧಾವಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT