ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದುಳು ಸಮಸ್ಯೆ ಪತ್ತೆಗೆ ವೈದ್ಯರಿಗೆ ತರಬೇತಿ

ನರ ಸಂಬಂಧಿ ಅನಾರೋಗ್ಯ ಸಮಸ್ಯೆಗಳ ನಿವಾರಣೆಗೆ ನಿಮ್ಹಾನ್ಸ್ ಕ್ರಮ
Last Updated 21 ಜುಲೈ 2022, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಮಿದುಳಿನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ಚಿಕಿತ್ಸೆಗೆ ಒಳಪಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ’ ಎಂದುರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ತಿಳಿಸಿದೆ.

ಸಂಸ್ಥೆಯುಕರ್ನಾಟಕ ಮಿದುಳು ಆರೋಗ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಭಾಗವಾಗಿ ವಿಶ್ವ ಮಿದುಳು ಆರೋಗ್ಯ ದಿನವನ್ನು ಶುಕ್ರವಾರ ಆಚರಿಸಲಾಗುತ್ತಿದೆ. ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಮಿದುಳಿನ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮದ
ರಾಯಭಾರಿಯಾಗಿದ್ದಾರೆ.

‘ಪಾರ್ಶ್ವವಾಯು, ಅಪಸ್ಮಾರ, ಬುದ್ಧಿಮಾಂದ್ಯತೆ, ಮಿದುಳಿನ ಸೋಂಕು ಸೇರಿ ವಿವಿಧ ನರ ಸಂಬಂಧಿ ಕಾಯಿಲೆಗಳು ಅಂಗವಿಕಲತೆಗೆ ಕಾರಣವಾಗುತ್ತಿವೆ. ಸಾಮಾನ್ಯ ನರ ರೋಗಗಳಿಗೆ ಸಂಬಂಧಿಸಿದಂತೆ 2022ರ ಮಾರ್ಚ್‌ನಿಂದ ಜೂನ್ ತಿಂಗಳವರೆಗೆ ಪ್ರಾಯೋಗಿಕವಾಗಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ದಕ್ಷಿಣದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೂರು ವೈದ್ಯರಿಗೆ ತರಬೇತಿ ನೀಡಲಾಗಿದೆ. ಈ ತರಬೇತಿಯನ್ನು ಮುಂದುವರೆಸಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ
ತಿಳಿಸಿದ್ದಾರೆ.

‘ಆಶಾ ಕಾರ್ಯಕರ್ತೆಯರಿಗೆ ನರ ಸಂಬಂಧಿ ರೋಗಗಳ ತಪಾಸಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇವರು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಹಾಗೂ ಮನೆಯ ಮಟ್ಟದಲ್ಲಿ ತಪಾಸಣೆ ನಡೆಸಲಿದ್ದಾರೆ’ ಎಂದು ಹೇಳಿದ್ದಾರೆ.

‘ಮಿದುಳಿನ ಅನಾರೋಗ್ಯ ಸಮಸ್ಯೆಗಳು ತ್ವರಿತವಾಗಿ ಹೆಚ್ಚುತ್ತಿವೆ. ಇದು ಸಮಾಜದ ಮೇಲೆಯೂ ಗಮನಾರ್ಹವಾದ ಪರಿಣಾಮ ಬೀರುತ್ತಿದೆ. ಆರಂಭಿಕ ಹಂತದಲ್ಲಿಯೇ ಈ ಸಮಸ್ಯೆಯನ್ನು ಪತ್ತೆಹಚ್ಚಿ, ಚಿಕಿತ್ಸೆ ಒದಗಿಸಿದಲ್ಲಿ ಅಂಗವೈಕಲ್ಯ ಮತ್ತು ಮರಣ ತಡೆಯಲು ಸಾಧ್ಯ. ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಮಿದುಳಿನ ಅಸ್ವಸ್ಥತೆ ಎದುರಿಸುವ ಪ್ರಮಾಣವನ್ನು ಶೇ 40ರಷ್ಟು ತಡೆಯಬಹುದು’ ಎಂದು ಪ್ರತಿಮಾ ಮೂರ್ತಿ ಅವರು ತಿಳಿಸಿದ್ದಾರೆ.

‘ರೋಗದ ಆರಂಭಿಕ ಲಕ್ಷಣ ಗುರುತಿಸುವುದು ಹಾಗೂ ಸಕಾಲಕ್ಕೆ ಚಿಕಿತ್ಸೆ ನೀಡುವುದು ಮುಖ್ಯ. ಈ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಕಡಿಮೆ. ರಾಜ್ಯದಲ್ಲಿ ಸಾಮಾನ್ಯ ನರರೋಗ ಮತ್ತು ಮಾನಸಿಕ ಅಸ್ವಸ್ಥತೆ ಬಗ್ಗೆ ಜಾಗೃತಿ ಹೆಚ್ಚಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT