ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ನಾಯಿ ಕಾಟ: ಮಾಧುಸ್ವಾಮಿ ಅಸಹಾಯಕತೆ

ನಾಯಿಗಳ ತಂಟೆಗೆ ಹೋಗಲು ‘ಸುಪ್ರೀಂ’ ಭಯ!
Last Updated 15 ಮಾರ್ಚ್ 2022, 21:54 IST
ಅಕ್ಷರ ಗಾತ್ರ

ಬೆಂಗಳೂರು: ‘ಸುಪ್ರೀಂಕೋರ್ಟ್‌ ನಿರ್ಣಯದಿಂದ ನಾವು ಬೀದಿ ನಾಯಿಗಳ ತಂಟೆಗೆ ಹೋಗುವಂತಿಲ್ಲ. ನಾಯಿಗಳನ್ನು ಹಿಡಿಯುವುದು, ಕೊಲ್ಲುವ ಮಾತು ಸಾಧ್ಯವೇ ಇಲ್ಲ ಬಿಡಿ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಲ್.ಎ. ರವಿಸುಬ್ರಹ್ಮಣ್ಯ ಅವರ ಪ್ರಶ್ನೆಗೆ ಉತ್ತರಿಸಿ, ನಾಯಿಗಳ ಸಂಖ್ಯೆಯ ನಿಯಂತ್ರಣಕ್ಕಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಹೇಳಿದರು.

‘ನಗರದ ಹೊರವಲಯದಲ್ಲಿ 10 ಎಕರೆ ಜಾಗದಲ್ಲಿ ‘ಗೋಶಾಲೆ’ ಮಾದರಿಯಲ್ಲಿ ‘ನಾಯಿಶಾಲೆ’ ಮಾಡಿ ಎಂದು ಶಾಸಕರೇನೋ ಸಲಹೆ ನೀಡಿದ್ದಾರೆ. ಆ ರೀತಿ ಮಾಡಿದರೆ ಸುತ್ತಮುತ್ತಲಿನ ಹಳ್ಳಿಗಳಿಗೆ ನಾಯಿಗಳ ಕಾಟ ಹೆಚ್ಚಾಗಿ, ಅಲ್ಲಿನ ಜನರು ಬಂದು ವಿಧಾನಸಭೆಗೆ ಮುತ್ತಿಗೆ ಹಾಕಿದರೆ ನಾವೇನು ಮಾಡುವುದು ಹೇಳಿ. ಬೆಂಗಳೂರಿನ ಕಸವನ್ನು ಹೊರವಲಯದಲ್ಲಿ ಹಾಕಿ ಆಗುತ್ತಿರುವ ಅವಾಂತರವೇ ಸಾಕು’ ಎಂದು ಮಾಧುಸ್ವಾಮಿ ಹೇಳಿದರು.

ಬಿಜೆಪಿ ಶಾಸಕ ಎಸ್‌.ಸುರೇಶ್‌ಕುಮಾರ್ ಮಾತನಾಡಿ, ‘ನಾಯಿಗಳಿಂದ ಸಾರ್ವಜನಿಕರ ವಿಪರೀತ ತೊಂದರೆ ಆಗುತ್ತಿದೆ. ಸುಪ್ರೀಂಕೋರ್ಟ್‌ ತೀರ್ಮಾನದ ಬಗ್ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಪರಿಶೀಲನೆ ನಡೆಸಿ. ಈ ಕುರಿತು ಸೌಹಾರ್ದವಾಗಿ ಇತ್ಯರ್ಥಗೊಳಿಸುವ ಬಗ್ಗೆ ಮುಂದಾಗಬೇಕು. ನಾಯಿ ಪ್ರೇಮಿಗಳ ಅಂತಃಕರಣ ಮತ್ತು ಅನುಕಂಪದ ಅರಿವಿದೆ. ಆದರೆ ಬೀದಿ ನಾಯಿಗಳು ಇತ್ತೀಚೆಗೆ ಕೂಲಿಕಾರರ ಮಕ್ಕಳನ್ನು ಕಚ್ಚಿ ಹಾಕಿದ ಘಟನೆ ಆತಂಕ ಹುಟ್ಟಿಸುತ್ತದೆ’ ಎಂದರು.

ಸುಪ್ರೀಂಕೋರ್ಟ್‌ನಿಂದ ಪರಿಹಾರ ಕಂಡುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮಾಧುಸ್ವಾಮಿ ಸುರೇಶ್‌ ಕುಮಾರ್‌ಗೆ ಭರವಸೆ ನೀಡಿದರು.

ವಿಷಯ ಪ್ರಸ್ತಾಪಿಸಿದ ರವಿಸುಬ್ರಹ್ಮಣ್ಯ, ‘ಬೀದಿ ನಾಯಿಗಳು ಮಕ್ಕಳು ಮತ್ತು ದ್ವಿಚಕ್ರ ವಾಹನ ಸವಾರರನ್ನು ಅಟ್ಟಿಸಿಕೊಂಡು ಬರುತ್ತವೆ. ಸಂತಾನಹರಣ ಶಸ್ತ್ರ ಚಿಕಿತ್ಸೆಯಿಂದ ಸಮಸ್ಯೆ ಬಗೆಹರಿಯುತ್ತಿಲ್ಲ. ಏನಾದರೂ ಪರಿಹಾರ ಕಂಡು ಕೊಳ್ಳಬೇಕು. ಹಾಗೆಂದು ನಾಯಿಗಳನ್ನು ಕೊಲ್ಲಿ ಎಂದು ಹೇಳುವುದಿಲ್ಲ. ಬೆಂಗಳೂರು ಹೊರ ವಲಯದಲ್ಲಿ ಬೀದಿ ನಾಯಿಗಳಿಗೆ ಇರಿಸಲು ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT