ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನೀರಾವರಿ ಯೋಜನೆಗಳ ತೊಡಕು ನಿವಾರಣೆ: ಶೀಘ್ರದಲ್ಲೇ ದೆಹಲಿಗೆ ನಿಯೋಗ'

ಪ್ರಗತಿ ಪರಿಶೀಲನೆ ಬಳಿಕ ಜಲ‌ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ
Last Updated 11 ಸೆಪ್ಟೆಂಬರ್ 2020, 9:55 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು, ಎತ್ತಿನಹೊಳೆ ಸೇರಿದಂತೆ ಬೃಹತ್ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಇರುವ ಕಾನೂನಾತ್ಮಕ ಮತ್ತು ತಾಂತ್ರಿಕ ತೊಡಕುಗಳ ನಿವಾರಣೆಗಾಗಿ ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಕರೆದೊಯ್ಯಲಾಗುವುದು ಎಂದು ಜಲ‌ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಮೂರು ದಿನಗಳ ಕಾಲ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪ್ರಮುಖವಾಗಿ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಇರುವ ಕಾನೂನಾತ್ಮಕ ತೊಡಕು ನಿವಾರಿಸಬೇಕಿದೆ. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ತಾಂತ್ರಿಕ ತೊಡಕುಗಳು ಪರಿಹಾರವಾಗಬೇಕಿದೆ. ಈ ಸಂಬಂಧ ನಿಯೋಗದಲ್ಲಿ ತೆರಳಿ ಕೇಂದ್ರ ಸರ್ಕಾರದ ಮೇಲೆ‌ ಒತ್ತಡ ಹೇರಲಾಗುವುದು' ಎಂದರು.

ಕೊರೊನಾ ವೈರಸ್ ಸೋಂಕಿನ ಸಂಕಷ್ಟದ‌ ಕಾರಣದಿಂದ ಈ ಬಾರಿ ಇಲಾಖೆಗೆ ಕಡಿಮೆ ಅನುದಾನ ದೊರಕಲಿದೆ. ಇರುವ ಮಿತಿಗಳ ನಡುವೆಯೇ ಹೆಚ್ಚಿನ ಕೆಲಸ ಮಾಡಲು ಪ್ರಯತ್ನಿಸಲಾಗುವುದು. ಇಲಾಖೆಗೆ ದೊರಕುವ ಅನುದಾನವನ್ನು ನೀರಾವರಿಯೇತರ ಉದ್ದೇಶಗಳಿಗೆ ಬಳಕೆ ಮಾಡುವುದನ್ನು ನಿರ್ಬಂಧಿಸಲಾಗುವುದು ಎಂದು ಹೇಳಿದರು.

ಪ್ರಸಕ್ತ ವರ್ಷ ಒಂದು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಇದೆ. ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ 1 ಮತ್ತು ಡ್ರಿಪ್ 2 ಯೋಜನೆಯಡಿ 52 ಅಣೆಕಟ್ಟೆಗಳ ಪುನಶ್ಚೇತನ ಹಾಗೂ ಅಭಿವೃದ್ಧಿಗೆ ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ₹ 750 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಎತ್ತಿನಹೊಳೆ ಯೋಜನೆಯಡಿ ನೀರಿನ ಲಿಫ್ಟ್ ಘಟಕ ಮತ್ತು ಗುರುತ್ವ ಕಾಲುವೆ 31ನೇ ಕಿ.ಮೀ.ವರೆಗಿ‌ನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ 2021ರ ಮುಂಗಾರು ಹಂಗಾಮಿನಲ್ಲಿ ವೇದಾ ಕಣಿವೆಗೆ ನೀರು ಹರಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯ 61ನೇ ಕಿ.ಮೀ.ವರೆಗೆ ಹಾಗೂ ಹೊಳಲ್ಕೆರೆ ಫೀಡರ್ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲೇ ಪೂರ್ಣಗೊಳಿಸಲಾಗುವುದು. ಆದಷ್ಟು ಬೇಗ ಚಿತ್ರದುರ್ಗದ 48 ಕೆರೆಗಳನ್ನು ತುಂಬಿಸಲು ಮತ್ತು ತರೀಕೆರೆ ತಾಲ್ಲೂಕಿನ 10,000 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT