ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಲೆಕ್ಕಾಚಾರ: ಪಾಲಿಕೆಗೆ ₹ 627 ಕೋಟಿ ನಷ್ಟ

ಬಿಬಿಎಂಪಿ ಸಭೆಯಲ್ಲಿ ಟೋಟಲ್‌ ಸ್ಟೇಷನ್‌ ಸರ್ವೇ ವರದಿ ಮಂಡನೆ
Last Updated 10 ಆಗಸ್ಟ್ 2020, 22:42 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಪಾಲಿಕೆಯು ಈ ಹಿಂದೆ ನಡೆಸಿದ್ದ 104 ಆಸ್ತಿಗಳ ಟೋಟಲ್‌ ಸ್ಟೇಷನ್‌ ಸರ್ವೆಯ(ಟಿಎಸ್‌ಎಸ್‌) ಸಮಗ್ರ ವರದಿಯನ್ನು ಕೌನ್ಸಿಲ್‌ ಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.

ಕಟ್ಟಡ ಮಾಲೀಕರು ನೀಡಿದ್ದ ತಪ್ಪು ಲೆಕ್ಕಾಚಾರದಿಂದ ನಷ್ಟವಾಗಿದ್ದ ಆಸ್ತಿ ತೆರಿಗೆಗೆ ದಂಡ ಮತ್ತು ಬಡ್ಡಿ ಸೇರಿಸಿ ಬಿಬಿಎಂಪಿ ₹ 626.93 ಕೋಟಿ (ಮೇಲ್ಮನವಿ ಇತ್ಯರ್ಥವಾಗದ ಪ್ರಕರಣಗಳೂ ಇದರಲ್ಲಿ ಸೇರಿವೆ) ವಸೂಲಿ ಮಾಡಬೇಕಿದೆ ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. ಇತ್ಯರ್ಥವಾಗಿರುವ ಪ್ರಕರಣಗಳಲ್ಲಿ ಒಟ್ಟು ₹ 49 ಕೋಟಿಯಷ್ಟು ತೆರಿಗೆ ಪಾವತಿ ಆಗಿದೆ.

ಪೂರ್ವ ವಲಯದಲ್ಲಿ ಈ ಹಿಂದೆ ಜಂಟಿ ಆಯುಕ್ತರಾಗಿದ್ದ ಸಹಕಾರ ಇಲಾಖೆ ಅಧಿಕಾರಿ ರವೀಂದ್ರ, ಮಹದೇವಪುರ ವಲಯದಲ್ಲಿ ಜಂಟಿ ಆಯುಕ್ತರಾಗಿದ್ದ ಜಗದೀಶ್‌ ಹಾಗೂ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾಗಿದ್ದ ಸೌಜನ್ಯಾ ಅವರ ಆದೇಶಗಳಿಂದ ಪಾಲಿಕೆ ನಷ್ಟ ಉಂಟಾಗಿದ್ದು ಅವರ ವಿರುದ್ಧ ಹಾಗೂ ತನಿಖೆಗೆ ಸಹಕರಿಸದ ಪೂರ್ವ ವಲಯದ ಉಪ ಆಯುಕ್ತ ರಾಜು ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ರವೀಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಕೆಲವು ಹೋಟೆಲ್‌ಗಳ ಮಾಲೀಕರು ತಮ್ಮದು ತಾರಾ ಹೋಟೆಲ್‌ ಎಂದೇ ಸ್ವಯಂ ಘೋಷಿಸಿಕೊಂಡಿದ್ದರೂ ಅದನ್ನು ಜಂಟಿ ಆಯುಕ್ತರು ಹೋಟೆಲ್‌ ಆ್ಯಂಡ್‌ ರೆಸ್ಟೋರೆಂಟ್‌ ಎಂದು ಪರಿಗಣಿಸಿ ಪರಿಷ್ಕೃತ ತೆರಿಗೆ ಮೊತ್ತವನ್ನು ಕಡಿಮೆಗೊಳಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೇಯರ್‌ ಎಂ.ಗೌತಮ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ವರದಿ ಮಂಡಿಸಿದರು. ಕಂದಾಯ ವಿಭಾಗದ ವಿಶೇಷ ಆಯುಕ್ತ ಎಸ್‌.ಬಸವರಾಜು ಹಾಗೂ ಜಂಟಿ ಆಯುಕ್ತ ವೆಂಕಟಾಚಲಪತಿ ಸೇರಿ ಈ ವರದಿ ಸಿದ್ದಪಡಿಸಿದ್ದರು.

‘ಪಾಲಿಕೆ ಕೌನ್ಸಿಲ್‌ ನಿರ್ಣಯದಂತೆ 104 ಕಟ್ಟಡಗಳ ಸರ್ವೆ ಪೂರ್ಣಗೊಂಡಿದೆ. ಕಟ್ಟಡ ಮಾಲೀಕರ ಸ್ವಯಂಘೋಷಿತ ದಾಖಲೆಗೂ ವಾಸ್ತವ ವಿಸ್ತೀರ್ಣಕ್ಕೂ ವ್ಯತ್ಯಾಸ ಕಂಡುಬಂದಿತ್ತು. ಈ ವ್ಯತ್ಯಾಸದ ಪ್ರಮಾಣಕ್ಕೆ ಆಸ್ತಿ ತೆರಿಗೆಯನ್ನು ಬಡ್ಡಿ ಸಮೇತ ವಸೂಲಿ ಮಾಡುವಂತೆ ಆಯಾ ವಲಯಗಳ ಜಂಟಿ ಆಯುಕ್ತರಿಗೆ ನಿರ್ದೇಶನ ನೀಡಿದ್ದೇವೆ’ ಎಂದು ಆಯುಕ್ತರು ತಿಳಿಸಿದರು.

ಟೋಟಲ್‌ ಸ್ಟೇಷನ್‌ ಸರ್ವೆ ವರದಿಯನ್ನು ಒಪ್ಪಿರುವ ಪಾಲಿಕೆ ಕೌನ್ಸಿಲ್‌, ಪಾಲಿಗೆ ನಷ್ಟ ಉಂಟುಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ನಿರ್ಣಯ ಅಂಗೀಕರಿಸಿದೆ.

ಪಾಲಿಕೆ ಸದಸ್ಯ ಪದ್ಮನಾಭರೆಡ್ಡಿ ಅವರು ಈ ಕುರಿತ ಸಮಗ್ರ ವರದಿ ಮಂಡಿಸುವಂತೆ ಹಿಂದಿನ ಕೌನ್ಸಿಲ್‌ ಸಭೆಯಲ್ಲಿ ಒತ್ತಾಯಿಸಿದ್ದರು. ಈ ಬಗ್ಗೆ ಈ ಹಿಂದಿನ ಸಭೆಗಳಲ್ಲಿ ಮೂರು ಬಾರಿ ಆಂಶಿಕ ವರದಿಯನ್ನು ಮಂಡಿಸಿದ್ದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಮಗ್ರ ವರದಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ‘ಈ ವರದಿ ಒಪ್ಪುವ ರೀತಿ ಇದೆ’ ಎಂದರು.

‘ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುತ್ತೇನೆ. ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ಪ್ರಕರಣ ದಾಖಲಿಸುವಂತೆಯೂ ಶಿಫಾರಸು ಮಾಡುತ್ತೇನೆ’ ಎಂದು ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT