ಶನಿವಾರ, ಡಿಸೆಂಬರ್ 14, 2019
24 °C

ಸ್ಕಿಮ್ಮರ್ ಬಳಸಿ ಖಾತೆಗೆ ಕನ್ನ; ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಟಿಎಂ ಘಟಕಗಳಲ್ಲಿ ಸ್ಕಿಮ್ಮರ್ ಉಪಕರಣ ಅಳವಡಿಸಿ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕದ್ದು ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಗುಜರಾತ್‌ನ ಗೌರಂಗ್ (31) ಹಾಗೂ ತಮಿಳುನಾಡು ವೆಲ್ಲೂರಿನ ಕಿರುಬಗರನ್ (56) ಬಂಧಿತರು. ಅವರ ಗ್ಯಾಂಗ್‌ನಲ್ಲಿದ್ದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

‘ಬೆಳ್ಳಂದೂರು ಹಾಗೂ ಸುತ್ತಮುತ್ತಲ ಹಲವು ಎಟಿಎಂ ಘಟಕಗಳಲ್ಲಿ ಆರೋಪಿಗಳು ಸ್ಕಿಮ್ಮರ್ ಉಪಕರಣ ಅಳವಡಿಸುತ್ತಿದ್ದರು. ಆ ಘಟಕಗಳಲ್ಲಿ ಹಣ ಡ್ರಾ ಮಾಡಿಕೊಳ್ಳಲು ಬರುತ್ತಿದ್ದ ಗ್ರಾಹಕರ ಮಾಹಿತಿ ಸ್ಕಿಮ್ಮರ್‌ನಲ್ಲಿ ಸಂಗ್ರಹವಾಗುತ್ತಿತ್ತು. ಅದನ್ನು ಬಳಸಿ ನಕಲಿ ಕಾರ್ಡ್‌ಗಳನ್ನು ಸೃಷ್ಟಿಸುತ್ತಿದ್ದರು. ಪಿಒಎಸ್ (ಪಾಯಿಂಟ್ ಆಫ್ ಸೇಲ್) ಉಪಕರಣದ ಮೂಲಕ ಗ್ರಾಹಕರ ಖಾತೆಯ ಹಣವನ್ನು ಬೇರೊಂದು ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಠಾಣೆ ಸಿಬ್ಬಂದಿಗಳಾದ ದ್ಯಾವಪ್ಪ ಹಾಗೂ ಸಿದ್ದಪ್ಪ ಇದೇ 14ರಂದು ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ಎಟಿಎಂ ಘಟಕವೊಂದರ ಬಳಿ ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅವರನ್ನು ವಿಚಾರಿಸಲು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಅಷ್ಟರಲ್ಲೇ ಆರೋಪಿಗಳು ಅಲ್ಲಿಂದ ಓಡಲಾರಂಭಿಸಿದ್ದರು. ಸಿಬ್ಬಂದಿ ಅವರನ್ನು ಬೆನ್ನಟ್ಟಿ ಹಿಡಿದರು. ಒಬ್ಬಾತ ತಪ್ಪಿಸಿಕೊಂಡ’ ಎಂದು ಪೊಲೀಸರು ತಿಳಿಸಿದರು. 

ಪ್ರತಿಕ್ರಿಯಿಸಿ (+)