ಬೆಂಗಳೂರು: ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಂಧ್ರಪ್ರದೇಶದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕಾರ್ತಿಕ್ (23) ಮತ್ತು ಭಗೀರಥ ರೆಡ್ಡಿ (17) ಮೃತ ವಿದ್ಯಾರ್ಥಿಗಳು.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬೊಮ್ಮನಹಳ್ಳಿಯ ಕಾರ್ತಿಕ್ ಬಿ.ಇ ಪದವೀಧರ. ಕೋರಮಂಗಲದ ಪಿಜಿಯಲ್ಲಿದ್ದರು. ಸಾಫ್ಟ್‌ವೇರ್ ಕೋರ್ಸ್‌ನ ತರಬೇತಿ ಪಡೆಯುತ್ತಿದ್ದರು. ರೆಡ್ಡಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ನಿವಾಸಿ. ಕೋರಮಂಗಲ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಂಜಾನೆ 4.30ರ ಸಮಯದಲ್ಲಿ ಇಬ್ಬರೂ ಕಾರಿನಲ್ಲಿ ಅಗ್ರಹಾರದ ಕಡೆಗೆ ತೆರಳುತ್ತಿದ್ದರು. ಕಾರ್ತಿಕ್ ಕಾರು ಚಾಲನೆ ಮಾಡುತ್ತಿದ್ದರು. ವೇಗವಾಗಿ ತೆರಳುತ್ತಿದ್ದ ಕಾರು, ಸಿಲ್ಕ್ ಬೋರ್ಡ್ ಬಳಿ ನಿಯಂತ್ರಣ ಕಳೆದುಕೊಂಡು ವಿಭಜಕಕ್ಕೆ ಡಿಕ್ಕಿಯಾಗಿದೆ. ಬಳಿಕ ಎದುರು ಬರುತ್ತಿದ್ದ ತಮಿಳುನಾಡಿನ ಬಸ್‌ಗೂ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಡಿವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.