ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ನಗರೋತ್ಥಾನ ಯೋಜನೆ | ಅರ್ಹ ಗುತ್ತಿಗೆದಾರರ ಕಡೆಗಣನೆ: ದೂರು

ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ₹90 ಕೋಟಿ ಪ್ಯಾಕೇಜ್‌
Last Updated 18 ಜನವರಿ 2023, 23:20 IST
ಅಕ್ಷರ ಗಾತ್ರ

ಬೆಂಗಳೂರು: ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯ ಟೆಂಡರ್‌ ಮಂಜೂರಾತಿಯಲ್ಲಿ ಅಕ್ರಮ ನಡೆದಿದ್ದು, ಅರ್ಹ ಗುತ್ತಿಗೆದಾರರನ್ನು ಕಡೆಗಣಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಲಾಗಿದೆ.

ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ₹90 ಕೋಟಿ ಅನುದಾನದ ಕಾಮಗಾರಿಗಳಿಗೆ 6 ಪ್ಯಾಕೇಜ್‌ನಲ್ಲಿ (ಕೆಡಬ್ಲ್ಯು–4) 2022ರ ಜುಲೈ 11ರಂದು ಟೆಂಡರ್‌ ಕರೆಯಲಾಗಿತ್ತು. ಎಂಟು ಗುತ್ತಿಗೆದಾರರು ಈ ಟೆಂಡರ್‌ನಲ್ಲಿ ಭಾಗವಹಿಸಿದ್ದರು. ಇ–ಪ್ರೊಕ್ಯೂರ್‌ಮೆಂಟ್‌ನಲ್ಲಿ ದಾಖಲೆಗಳನ್ನೂ ಸಲ್ಲಿಸಿದ್ದರು. ಅ.17ರಂದು ತಾಂತ್ರಿಕ ಅಂಶಗಳನ್ನು ಪರಿಶೀಲಿಸಿದ್ದಾರೆ. ಅ.29ರಂದು ಮುಖ್ಯ ಆಯುಕ್ತರ ಅಧ್ಯಕ್ಷತೆಯ ಸಭೆಯಲ್ಲಿ ಟೆಂಡರ್‌ ಪ್ರಕ್ರಿಯೆ ರದ್ದುಪಡಿಸಿ ಮರು ಟೆಂಡರ್‌ಗೆ ನಿರ್ಣಯಿಸಲಾಗಿದೆ.

ಅರ್ಹತೆ ಹೊಂದಿರುವ ಗುತ್ತಿಗೆದಾರರು ತಮ್ಮನ್ನು ಏಕೆ ನಿರ್ಲಕ್ಷಿಸಲಾಗಿದೆ ಹಾಗೂ ಟೆಂಡರ್‌ ರದ್ದು ಪಡಿಸಿರುವ ಕಾರಣ ಎಂದು ಇ–ಪ್ರೊಕ್ಯೂರ್‌ಮೆಂಟ್‌ ಮೂಲಕವೇ ಮನವಿ ಸಲ್ಲಿಸಿದ್ದಾರೆ. ಆದರೆ ಈವರಗೆ ಅದಕ್ಕೆ ಉತ್ತರ ಬಂದಿಲ್ಲ. ನ.8ರಂದು ಮರು ಟೆಂಡರ್‌ ಕರೆಯಲಾಗಿದ್ದು, ಏಳು ಗುತ್ತಿಗೆದಾರರು ಭಾಗವಹಿಸಿದ್ದರು. ಡಿ.29ರಂದು ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಸ ಸಭೆಯಲ್ಲಿ ತಲಾ ಎರಡು ಪ್ಯಾಕೇಜ್‌ ಅನ್ನು ಇಬ್ಬರು ಗುತ್ತಿಗೆದಾರರು, ಇನ್ನೆರಡನ್ನು ಇಬ್ಬರಿಗೆ ಮಂಜೂರು ಮಾಡಲಾಗಿದೆ.

‘ತಿರಸ್ಕೃತಗೊಂಡ ಗುತ್ತಿಗೆದಾರರಾದ ಎಂ.ಎಸ್‌.ವಿ ಕನ್‌ಸ್ಟ್ರಕ್ಷನ್ಸ್‌ನವರ ಇ–ಪ್ರೊಕ್ಯೂರ್‌ಮೆಂಟ್‌ ಮೂಲಕ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಮಾಹಿತಿ ನೀಡಿಲ್ಲ. ಅಲ್ಲದೆ, 6 ಪ್ಯಾಕೇಜ್‌ಗಳ ಟೆಂಡರ್‌ ಮಂಜೂರು ಮಾಡಿರುವ ಮೂವರು ಗುತ್ತಿಗೆದಾರರು ಮಾನದಂಡಗಳನ್ನು ಪೂರೈಸುವುದಿಲ್ಲ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆಯಡಿ (ಕೆಟಿಪಿಪಿ) ಬಿಡ್‌ ಕ್ಯಾಪಾಸಿಟಿಯನ್ನು ಲೆಕ್ಕ ಮಾಡಿಲ್ಲ. ಕಾಮಗಾರಿ ದೃಢೀಕರಣ ಪತ್ರದಲ್ಲಿ ವರ್ಷವಾರು ತುಲನೆ ಮಾಡಿದ ತಾಂತ್ರಿಕ ಮೌಲ್ಯಮಾಪನ ಪಡೆಯದೆ, ಉಮೇಶ್‌, ಸಿದ್ದೇಗೌಡ ಮತ್ತು ಬೆನಕ ಡೆವಲಪರ್ಸ್‌ಗೆ ಎಲ್ಲ ಮಾನದಂಡಗಳನ್ನು ಉಲ್ಲಂಘಿಸಿ ಅನುಕೂಲ ಮಾಡಿಕೊಡಲಾಗಿದೆ’ ಎಂದು ಗುತ್ತಿಗೆದಾರರ ಪರವಾಗಿ ವಕೀಲ ಕೆ.ಎನ್‌. ಪ್ರದೀಪ್‌ ಕುಮಾರ್‌ ದಾಖಲೆ ಸಹಿತ ದೂರು ಸಲ್ಲಿಸಿದ್ದಾರೆ.

‘ದಾಸರಹಳ್ಳಿ ವಲಯದ ಕಾರ್ಯಪಾಲಕ ಎಂಜಿನಿಯರ್‌ ಎಂ.ಟಿ. ಬಾಲಾಜಿ ಹಾಗೂ ಮುಖ್ಯ ಎಂಜಿನಿಯರ್‌ ಆರ್. ರಂಗನಾಥ್‌ ಅವರು ತಮ್ಮ ಪರಿಚಿತರಿಗೆ ಅನುಕೂಲ ಮಾಡಲು ಮಾನದಂಡಗಳು ಪೂರೈಸಿದ್ದಾರೆ ಎಂದು ಪ್ರಧಾನ ಎಂಜಿನಿಯರ್‌ ಹಾಗೂ ಮುಖ್ಯ ಎಂಜಿನಿಯರ್‌ ಅವರಿಗೆ ತಪ್ಪಾಗಿ ಕಡತ ಸಲ್ಲಿಸಿದ್ದಾರೆ. ಹೀಗಾಗಿ, ಟೆಂಡರ್‌ ಆದೇಶವನ್ನು ಸಂಪೂರ್ಣ ರದ್ದು ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಕಾರ್ಯಪಾಲಕ ಎಂಜಿನಿಯರ್‌ ಎಂ.ಟಿ. ಬಾಲಾಜಿ ಪ್ರತಿಕ್ರಿಯಿಸಿ, ‘ಮೊದಲ ಬಾರಿಗೆ ಈ ಟೆಂಡರ್‌ ಆಹ್ವಾನಿಸಿದಾಗ ಮೌಲ್ಯಮಾಪನ ಸರಿ ಇಲ್ಲದ ಕಾರಣ ಕೆಲವರನ್ನು ಮುಖ್ಯ ಆಯುಕ್ತರು ವರ್ಗಾಯಿಸಿದ್ದರು. ಆದ್ದರಿಂದ ಎರಡನೇ ಬಾರಿಗೆ ಟೆಂಡರ್‌ ಕರೆದು ಎಲ್ಲವನ್ನೂ ಸರಿಪಡಿಸಲಾಗಿದೆ’ ಎಂದರು. ಮುಖ್ಯ ಎಂಜಿನಿಯರ್‌ ಆರ್. ರಂಗನಾಥ್‌ ಅವರನ್ನು ಈ ಬಗ್ಗೆ ಸಂಪರ್ಕಿಸಲು ಪ್ರಯತ್ನಿಸಿದಾಗ ಪ್ರತಿಕ್ರಿಯಿಸಲಿಲ್ಲ.

‘ಎಲ್ಲೆಡೆ ಅಕ್ರಮ’
‘ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಲ್ಲಿ ₹6 ಸಾವಿರ ಕೋಟಿಯಷ್ಟು ಅನುದಾನ ನೀಡಲಾಗಿದ್ದು, ಇದರಲ್ಲಿ ವಲಯವಾರು, ಕಾರ್ಯಪಾಲಕ ಎಂಜಿನಿಯರ್‌ ಮಟ್ಟದಲ್ಲಿ ಟೆಂಡರ್‌ ಕರೆಯಲಾಗಿದೆ. ಅವರವರ ಪರಿಚಿತರಿಗೆ ಅನುವು ಮಾಡಿಕೊಡಲು ಅರ್ಹತೆ ಹೊಂದಿರುವ ಗುತ್ತಿಗೆದಾರರನ್ನು ನಿರ್ಲಕ್ಷಿಸಲಾಗಿದೆ. ಮಾನದಂಡಗಳನ್ನು ಅನುಸರಿಸಿಲ್ಲ. ಇದನ್ನು ಮುಖ್ಯ ಆಯುಕ್ತರಿಂದ ಮುಚ್ಚಿಟ್ಟು ಟೆಂಡರ್‌ ಮಂಜೂರು ಮಾಡಲಾಗಿದೆ. ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಈ ರೀತಿ ಅಕ್ರಮ ಉಂಟಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ವಹಿಸುವಂತೆ ದೂರು ಸಲ್ಲಿಸಲಾಗಿದೆ’ ಎಂದು ವಕೀಲ ಕೆ.ಎನ್‌. ಪ್ರದೀಪ್‌ಕುಮಾರ್‌ ತಿಳಿಸಿದರು.

₹72 ಕೋಟಿ ಕಾಮಗಾರಿ ರದ್ದು
ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಲ್ಲಿ ಚಾಮರಾಜಪೇಟೆ ವಿಧಾನಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ₹72.51 ಕೋಟಿ ಮೌಲ್ಯದ ಕಾಮಗಾರಿಗಳನ್ನು ಟೆಂಡರ್‌ನಲ್ಲಿ ನಿಯಮ ಪಾಲಿಸದ ಕಾರಣ ರದ್ದುಗೊಳಿಸಲಾಗಿದೆ.

ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಳ್ಳಬೇಕಾದ ಈ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿದ ಬಿಬಿಎಂಪಿ, ಆಡಳಿತಾತ್ಮಕ ಮತ್ತು ಟೆಂಡರ್‌ ಒಪ್ಪಿಗೆಗಾಗಿ ಪ್ರತ್ಯೇಕ ಕಡತವನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿತ್ತು. ಎರಡು ತಿಂಗಳ ನಂತರ ತಾಂತ್ರಿಕ ಸಮಸ್ಯೆಯ ಆಧಾರದಲ್ಲಿ ಟೆಂಡರ್‌ ನಿಯಮಗಳನ್ನು ಪಾಲಿಸಿಲ್ಲ ಎಂದು ಕಾಮಗಾರಿಗಳನ್ನು ರದ್ದುಗೊಳಿಸಿದೆ.

ಬಿಬಿಎಂಪಿ ಜ.3ರಂದು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿರುವ ಪತ್ರದಲ್ಲಿ ವಾರ್ಡ್‌ ನಂ. 135, 136, 137, 138, 139, 140ಗಳಲ್ಲಿನ ಮೂರು ಕಾಮಗಾರಿಗಳಲ್ಲಿ ಕಡಿಮೆ ಬಿಡ್‌ ಸಲ್ಲಿಸಿದ ಗುತ್ತಿಗೆದಾರರು ‘ಕಾಮಗಾರಿ ಮುಗಿದಿರುವ ಪ್ರಮಾಣಪತ್ರ’ ಸಲ್ಲಿಸಿಲ್ಲ. ನಾಲ್ಕನೇ ಕಾಮಗಾರಿ ರಸ್ತೆ ಮತ್ತು ಚರಂಡಿಯನ್ನು ಸ್ಥಳಾಂತರಿಸಿ ಕಟ್ಟಡ ನಿರ್ಮಿಸುವ ₹4.4 ಕೋಟಿ ಯೋಜನೆಯಾಗಿದೆ. ಇವುಗಳನ್ನು ನಗರಾಭಿವೃದ್ಧಿ ಇಲಾಖೆ ರದ್ದುಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT