ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರ ವಿಕೇಂದ್ರೀಕರಣದಿಂದ ಪರಿಹಾರ: ನಿವೃತ್ತ ಐಎಎಸ್ ಅಧಿಕಾರಿ ಎ.ರವೀಂದ್ರ ಅಭಿಮತ

 ‘ಗವರ್ನಿಂಗ್‌ ಅರ್ಬನ್‌ ಇಂಡಿಯಾ, ಪಾಲಿಸಿ ಆ್ಯಂಡ್‌ ಪ್ರಾಕ್ಟೀಸ್‌’ ಕೃತಿ ಬಿಡುಗಡೆ
Published 15 ಜೂನ್ 2024, 3:36 IST
Last Updated 15 ಜೂನ್ 2024, 3:36 IST
ಅಕ್ಷರ ಗಾತ್ರ

ಬೆಂಗಳೂರು: ‘ಅವೈಜ್ಞಾನಿಕ ನಗರೀಕರಣದಿಂದ ಮೂಲಸೌಕರ್ಯ ಸೇರಿ ವಿವಿಧ ಸಮಸ್ಯೆಗಳು ಬೆಂಗಳೂರಿನಂತಹ ನಗರಗಳನ್ನು ಕಾಡುತ್ತಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರ ವಿಕೇಂದ್ರೀಕರಿಸಿ, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಎ. ರವೀಂದ್ರ ತಿಳಿಸಿದರು. 

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟ್ಲ್‌ಮೆಂಟ್ಸ್‌ (ಐಐಎಚ್‌ಎಸ್) ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ‘ಗವರ್ನಿಂಗ್‌ ಅರ್ಬನ್‌ ಇಂಡಿಯಾ, ಪಾಲಿಸಿ ಆ್ಯಂಡ್‌ ಪ್ರಾಕ್ಟೀಸ್‌’ ಕೃತಿ ಬಿಡುಗಡೆಯಾಯಿತು. ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ದೇಶ ಹಾಗೂ ರಾಜ್ಯದಲ್ಲಿ ನಗರೀಕರಣ ಹೆಚ್ಚಾಗುತ್ತಿದೆ. ಇದರ ಜತೆಗೆ ನಗರದ ಸಮಸ್ಯೆಗಳು ಜಾಸ್ತಿ ಆಗುತ್ತಿವೆ. ನಗರಗಳ ಹೊರವಲಯದಲ್ಲಿನ ಹಳ್ಳಿಗಳು ನಗರವಾಗಿ ಪರಿವರ್ತನೆಯಾಗುತ್ತಿವೆ. ಇದರಿಂದಾಗಿ ರಸ್ತೆ, ನೀರು, ಸಾರಿಗೆ ಸೇರಿ ವಿವಿಧ ಮೂಲ ಸೌಕರ್ಯಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಆ ಬೇಡಿಕೆಯನ್ನು ಈಗಿನ ವ್ಯವಸ್ಥೆಯಲ್ಲಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ವ್ಯವಸ್ಥೆಯೇ ಮುಖ್ಯ ಕಾರಣ’ ಎಂದರು.

‘ಆರ್ಥಿಕ ಸಂಪನ್ಮೂಲದ ಕೊರತೆಯಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ಮೂಲಸೌಕರ್ಯ ವೃದ್ಧಿ ಸಾಧ್ಯವಾಗುತ್ತಿಲ್ಲ. ಆಸ್ತಿ ತೆರಿಗೆ ಮಾತ್ರ ಆದಾಯವಾಗಿದೆ. ಸ್ಥಳೀಯ ಸಂಸ್ಥೆಗಳನ್ನು ಸರ್ಕಾರಗಳೇ ನಿಯಂತ್ರಿಸುತ್ತಿವೆ. ಆದ್ದರಿಂದ ಅಧಿಕಾರ ವಿಕೇಂದ್ರೀಕರಿಸಿ, ಹೆಚ್ಚಿನ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ನಗರ ಆಡಳಿತ ಸುಧಾರಣೆಗೆ ಕಾಲಕಾಲಕ್ಕೆ ಚುನಾವಣೆ ನಡೆಸಿ, ಮಹಾಪೌರರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು. ಚೀನಾದಲ್ಲಿ ಮೇಯರ್‌ಗಳಿಗೆ ಹೆಚ್ಚಿನ ಅಧಿಕಾರವಿದ್ದು, ಹೂಡಿಕೆದಾರರ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಇದರಿಂದ ಚೀನಾದ ನಗರಗಳು ಉತ್ತಮವಾಗಿ ಬೆಳವಣಿಗೆ ಹೊಂದುತ್ತಿವೆ’ ಎಂದು ಹೇಳಿದರು. 

‘ನಗರ ಆರ್ಥಿಕವಾಗಿ ಮುನ್ನಡೆಯಬೇಕು. ಉದ್ಯೋಗಾವಕಾಶಗಳ ಸೃಷ್ಟಿಯೂ ಮುಖ್ಯ. ಆದ್ದರಿಂದ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ವಿವಿಧ ದೇಶಗಳ ನಗರಗಳ ಆಡಳಿತ ವ್ಯವಸ್ಥೆ ಹಾಗೂ ಅವು ಹೊಂದಿದ ಬೆಳವಣಿಗೆಯ ಬಗ್ಗೆ ಅಧ್ಯಯನ ನಡೆಸಿ, ಈ ಪುಸ್ತಕ ಬರೆಯಲಾಗಿದೆ. ಇಲ್ಲಿನ ಆಡಳಿತ ಅನುಭವವು ಇದಕ್ಕೆ ನೆರವಾಗಿದೆ’ ಎಂದು ವಿವರಿಸಿದರು. 

ಆರ್ಥಿಕ ತಜ್ಞ ವಿಜಯ್‌ ಕೇಳ್ಕರ್‌, ‘ಯೋಜನಾಬದ್ಧ ನಗರಗಳ ನಿರ್ಮಾಣಕ್ಕೆ ಆರ್ಥಿಕ ಬೆಂಬಲ ಅಗತ್ಯ. ಮೂಲಸೌಕರ್ಯ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಕಡಿಮೆ ಮಾಡಬೇಕಿದೆ. ಇದಕ್ಕೆ ಹಣಕಾಸಿನ ಬೆಂಬಲ ಅಗತ್ಯ. ಸಂಗ್ರಹಿಸಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‍ಟಿ) ಸ್ಥಳೀಯ ಸಂಸ್ಥೆಗಳಿಗೂ ಹಂಚಿಕೆ ಮಾಡಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು’ ಎಂದು ಹೇಳಿದರು. 

ಐಐಎಚ್‌ಎಸ್ ನಿರ್ದೇಶಕ ಅರೋಮರ್ ರೇವಿ ಸಂವಾದ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT