ಸಂರಕ್ಷಿತ ಕಾಡಿನ ಮೇಲೆ ನಗರೀಕರಣದ ಕರಿಛಾಯೆ

7
ತುರಹಳ್ಳಿ ಅರಣ್ಯ: ಸಹಜ ಸೊಬಗು ಮಾಯ l ಜನರ ಓಡಾಟ ಹೆಚ್ಚಳ l ವನ್ಯಜೀವಿ ಮುಕ್ತಸಂಚಾರಕ್ಕೆ ಕುತ್ತು

ಸಂರಕ್ಷಿತ ಕಾಡಿನ ಮೇಲೆ ನಗರೀಕರಣದ ಕರಿಛಾಯೆ

Published:
Updated:
Deccan Herald

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅತಿದೊಡ್ಡ ನೈಸರ್ಗಿಕ ಕಾಡುಗಳಲ್ಲಿ ಒಂದಾದ ತುರಹಳ್ಳಿ ಸಂರಕ್ಷಿತ ಅರಣ್ಯದಲ್ಲೀಗ ಮೊದಲಿನ ಪ್ರಶಾಂತ ವಾತಾವರಣವಿಲ್ಲ. ಮಳೆಗಾಲದಲ್ಲಿ ಕೇಳಿ ಬರುತ್ತಿದ್ದ ನವಿಲುಗಳ ಕೇಕೆ ಸದ್ದೂ ಕಡಿಮೆಯಾಗಿದೆ. ವನ್ಯಜೀವಿಗಳ ಓಡಾಟ, ಹಕ್ಕಿಗಳ ಚಿಲಿಪಿಲಿಯಿಂದ ಕೂಡಿದ್ದ ಈ ಪ್ರದೇಶದ ಮೇಲೆ ನಗರೀಕರಣದ ಕರಿನೆರಳು ವ್ಯಾಪಿಸಿದೆ.   

ನಗರದ ಸೆರಗಿನಲ್ಲೇ ಇರುವ ಈ ಪ್ರದೇಶದಲ್ಲಿ ಜನರ ಓಡಾಟ ಹೆಚ್ಚುತ್ತಿದ್ದು, ಇಲ್ಲಿನ ವನ್ಯಜೀವಿಗಳು ಅಪಾಯ ಎದುರಿಸುತ್ತಿವೆ. ಇಲ್ಲಿ ಜನರ ಓಡಾಟವನ್ನು ನಿರ್ಬಂಧಿಸಬೇಕು. ಇದನ್ನು ‘ಜೀವವೈವಿಧ್ಯ ತಾಣ’ ಎಂದು ಗುರುತಿಸಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಪರಿಸರ ಪ್ರೇಮಿಗಳ ಒತ್ತಾಯ.

ಈ ಕಾಡಿನಂಚಿಗೆ ಹೊಂದಿಕೊಂಡು ಬನಶಂಕರಿಯಲ್ಲಿ ಬಿಡಿಎ ಬಡಾವಣೆ ಅಭಿವೃದ್ಧಿಗೊಂಡ ಬಳಿಕ ಇಲ್ಲಿ ಅನೇಕ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, ಮನೆಗಳು ತಲೆಎತ್ತಿವೆ. ಇಲ್ಲಿನ ನಿವಾಸಿಗಳು ವಾರಾಂತ್ಯಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

‘ಈ ಪ್ರದೇಶದಲ್ಲಿ ನವಿಲುಗಳು ಹೇರಳವಾಗಿದ್ದವು. ಎರಡು ವರ್ಷಗಳ ಹಿಂದಿನವರೆಗೂ ಮಳೆಗಾಲ ಆರಂಭವಾಗುವ ಸಮಯದಲ್ಲಿ ಇಲ್ಲಿ ನವಿಲುಗಳ ಕೇಕೆ ಕೇಳಿಸುತ್ತಿತ್ತು. ನಗರದಲ್ಲಿದ್ದರೂ ನಾವು ಯಾವುದೋ ದಟ್ಟ ಅರಣ್ಯಕ್ಕೆ ಸಮೀಪದಲ್ಲಿದ್ದಂತೆ ಭಾಸವಾಗುವ ವಾತಾವರಣ ಇಲ್ಲಿತ್ತು. ಆದರೆ, ಈ ಕಾಡಿಗೆ ವಾರಾಂತ್ಯದಲ್ಲಿ ಭೇಟಿ ನೀಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ತುಂಬಾ ಜಾಸ್ತಿ ಆಗಿದೆ. ಹಾಗಾಗಿ ನವಿಲುಗಳ ಓಡಾಟ ಕಡಿಮೆ ಆಗಿದೆ’ ಎಂದು ಸ್ಥಳೀಯ ನಿವಾಸಿ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

‘ಈ ಪ್ರದೇಶದಲ್ಲಿ ಮುನೇಶ್ವರ ಸ್ವಾಮಿ ಹಾಗೂ ಶನೈಶ್ವರ ಸ್ವಾಮಿ ದೇವಾಲಯಗಳಿವೆ. ಕೆಲವು ವರ್ಷಗಳ ಹಿಂದೆ ಇಲ್ಲಿನ ದೇವಸ್ಥಾನಗಳಿಗೆ ಜನ ಹೆಚ್ಚಾಗಿ ಬರುತ್ತಿರಲಿಲ್ಲ. ಆದರೆ, ಸುತ್ತಮುತ್ತ ಜನವಸತಿ ಬೆಳೆದಂತೆ ಇಲ್ಲಿಗೆ ಬರುವವರ ಸಂಖ್ಯೆಯೂ ಹೆಚ್ಚಿದೆ. ಅವರು ಕಾಡನ್ನೂ ಪ್ರವೇಶಿಸುತ್ತಿದ್ದಾರೆ. ಜನ ಸುಮ್ಮನೆ ಬಂದು ಹೋದರೆ ಏನೂ ಅಡ್ಡಿ ಇಲ್ಲ. ಆದರೆ, ಅವರು ಉಪಾಹಾರವನ್ನು ತಂದು ಇಲ್ಲಿ ಸೇವಿಸುತ್ತಾರೆ. ಪ್ಲಾಸ್ಟಿಕ್‌ ಎಸೆಯುತ್ತಾರೆ. ಕೆಲವರಂತೂ ಮದ್ಯಪಾನಕ್ಕೂ ಈ ಸ್ಥಳವನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಅವರು ದೂರಿದರು.

‘ಈ ಪರಿಸರದಲ್ಲಿ ಈಶಾನ್ಯ ರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಕಾಡಿನೊಳಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ’ ಎಂದು ತಿಳಿಸಿದರು.

ಅರಣ್ಯ ಇಲಾಖೆ ಈ ಸಂರಕ್ಷಿತ ಅರಣ್ಯಕ್ಕೆ ಬೇಲಿ ಹಾಕುವ ಮೂಲಕ ಜನರ ಓಡಾಟ ನಿರ್ಬಂಧಿಸುವ ಪ್ರಯತ್ನ ಮಾಡಿದೆ. ಆದರೆ, ಕೆಲವು ಯುವಕರು ಬೇಲಿಯನ್ನು ಜಿಗಿದು ಇಲ್ಲಿನ ಗುಡ್ಡ ಗಾಡು ಪ್ರದೇಶದೊಳಗೆ ನುಗ್ಗುತ್ತಾರೆ ಎಂದು ಬೇಸರ ತೋಡಿಕೊಳ್ಳುತ್ತಾರೆ ಸ್ಥಳೀಯರು.

‘ಈ ಕಾಡಿನ ಸಹಜ ಸೌಂದರ್ಯವನ್ನು ಉಳಿಸುವ ನಿಟ್ಟಿನಲ್ಲಿ ನಾವೂ ಕಾರ್ಯಪ್ರವೃತ್ತರಾಗಿದ್ದೇವೆ. ಇಲ್ಲಿನ ಒತ್ತುವರಿ ತೆರವುಗೊಳಿಸಿದ್ದೇವೆ. ಈ ಅರಣ್ಯಕ್ಕೆ ಬೇಲಿ ಹಾಕುವ ಕಾರ್ಯ ಶೇ 50ರಷ್ಟು ಪೂರ್ಣಗೊಂಡಿದೆ. ನಮ್ಮ ಇಲಾಖೆ ಸಿಬ್ಬಂದಿ ಇಲ್ಲಿ ಗಸ್ತು ತಿರುಗುತ್ತಾರೆ. ಇಲ್ಲಿಗೆ ಪಹರೆ ಕಾಯಲು ಗೃಹರಕ್ಷಕ ಸಿಬ್ಬಂದಿಯ ನೆರವನ್ನೂ ಪಡೆಯುತ್ತಿದ್ದೇವೆ. ಇಲ್ಲಿಗೆ ಇನ್ನಷ್ಟು ಭದ್ರತೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭೀಮನ ಅಮಾವಾಸ್ಯೆ ದಿನ ಇಲ್ಲಿಗೆ ಅನೇಕರು ಕಾಡಿನೊಳಗೆ ಬಂದು ಮಾಂಸದ ಅಡುಗೆ ಮಾಡಿ ಇಲ್ಲಿ ಊಟ ಮಾಡಿಹೋಗುತ್ತಿದ್ದರು. ಎರಡು ವರ್ಷಗಳಿಂದ ಇದಕ್ಕೆ ನಾವು ಅವಕಾಶ ಕಲ್ಪಿಸಿಲ್ಲ. ಶನಿವಾರವೂ ನಾವು ಇಲ್ಲಿಗೆ ಬಂದ ಅನೇಕರನ್ನು ಹಿಂದಕ್ಕೆ ಕಳುಹಿಸಿದ್ದೇವೆ’ ಎಂದರು.

**

ಆನೆ ಕಾರಿಡಾರ್ ಛಿದ್ರ

ತುರಹಳ್ಳಿ ಅರಣ್ಯವೂ ಆನೆ ಕಾರಿಡಾರ್‌ನ ಒಂದು ಭಾಗ. ಬನ್ನೇರುಘಟ್ಟದಿಂದ ಇಲ್ಲಿಗೆ ಇಲ್ಲಿಂದ ಮಂಚಬೆಲೆಗೆ, ಅಲ್ಲಿಂದ ಸಾವನದುರ್ಗಕ್ಕೆ ಆನೆಗಳು ಅಡ್ಡಾಡುತ್ತಿದ್ದವು. ಆದರೆ, ಇಲ್ಲಿ ರಸ್ತೆಗಳು ಅಭಿವೃದ್ಧಿ ಆದ ಬಳಿಕ ವನ್ಯಜೀವಿಗಳ ಸಂಚಾರಕ್ಕೆ ಸಂಚಕಾರ ಎದುರಾಗಿದೆ ಎಂದು ಪ್ರಸನ್ನ ಕುಮಾರ್‌ ತಿಳಿಸಿದರು.

‘100 ಅಡಿ ರಸ್ತೆ ಮತ್ತು ನೈಸ್‌ ರಸ್ತೆ ಇಲ್ಲಿನ ಕಾಡನ್ನು ಭಾಗ ಮಾಡಿತು. ಆ ಬಳಿಕ ಇಲ್ಲಿನ ವನ್ಯಜೀವಿಗಳ ಮುಕ್ತಸಂಚಾರಕ್ಕೆ ಆತಂಕ ಎದುರಾಗಿದೆ. ಮೂರು ವರ್ಷಗಳ ಹಿಂದೆ ಇಲ್ಲಿ ವಾಹನ ಡಿಕ್ಕಿ ಹೊಡೆದು ಎರಡು ಚಿರತೆಗಳು ಸತ್ತಿದ್ದವು. ಅನೇಕ ನವಿಲುಗಳು ಇಲ್ಲಿ ರಸ್ತೆ ಅಪಘಾತದಿಂದಾಗಿ ಕೊನೆಯುಸಿರೆಳೆದಿವೆ. ಈ ಮಳೆಗಾಲದಲ್ಲಿ ವಾಹನ ಡಿಕ್ಕಿ ಹೊಡೆದು ಒಂದು ನೀರುಕಾಗೆ ಹಾಗೂ ಗಿಡುಗ ಸತ್ತಿದ್ದವು. ಈ ರಸ್ತೆಗಳಲ್ಲಿ ಹಾವುಗಳು ಸಾಯುವುದು ಮಾಮೂಲಿ ಎಂಬಂತಾಗಿದೆ’ ಎಂದರು.

**

‘ನವಿಲು ಧಾಮವನ್ನಾಗಿ ಅಭಿವೃದ್ಧಿಪಡಿಸಿ’

ನವಿಲುಗಳು ಇಲ್ಲಿ ಹೇರಳವಾಗಿವೆ. ಹಾಗಾಗಿ ಇದನ್ನು ನವಿಲುಧಾಮವನ್ನಾಗಿ ಅಭಿವೃದ್ಧಿಪಡಿಸಬಹುದು ಎಂದು ಜಿಲ್ಲಾ ವನ್ಯಜೀವಿ ವಾರ್ಡನ್‌ ಎ.ಪ್ರಸನ್ನ ಕುಮಾರ್‌ ಸಲಹೆ ನೀಡಿದರು.

‘ಈ ಬಗ್ಗೆ ಅರಣ್ಯ ಇಲಾಖೆಗೆ 2016ರಲ್ಲಿ ನಾನು ಪ್ರಸ್ತಾವ ಸಲ್ಲಿಸಿದ್ದೆ. ಆದರೆ ಇ ಬಗ್ಗೆ ಏನೂ ಕ್ರಮ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತುರಹಳ್ಳಿ ಪ್ರದೇಶ ಪುಟ್ಟ ಪಕ್ಷಿಧಾಮವಿದ್ದಂತೆ. ಇಲ್ಲಿ 59 ಪ್ರಭೇದಗಳ ಹಕ್ಕಿಗಳನ್ನು ನಾವು ಗುರುತಿಸಿದ್ದೇವೆ. ನೀಲಕಂಠ (ಇಂಡಿಯನ್‌ ರೋಲರ್‌), ಬಾಲದಂಡೆ ಹಕ್ಕಿ (ಏಷಿಯನ್‌ ಪ್ಯಾರಡೈಸ್ ಫ್ಲೈಕ್ಯಾಚರ್‌), ನವರಂಗಿ (ಇಂಡಿಯನ್‌ ಪಿಟ್ಟ), ನಾಲ್ಕು ಪ್ರಭೇದಗಳ ಗೂಬೆಗಳು, ಗಿಡುಗಗಳು (ಸರ್ಪಂಟೈನ್‌ ಈಗಲ್‌, ಹನಿ ಬಜಾರ್ಡ್‌) ಇಲ್ಲಿ ಕಾಣಸಿಗುತ್ತವೆ.

ವಿವಿಧ ಜಾತಿಯ ಹಾವುಗಳು ಸೇರಿ ಅನೇಕ ಬಗೆಯ ಸರೀಸೃಪಗಳು ಇಲ್ಲಿವೆ. ಕಾಡುಪಾಪ ದಂತಹ ಅಪರೂಪದ ಸಸ್ತನಿಗಳೂ ಇಲ್ಲಿವೆ. ಮೂರು ತಿಂಗಳ ಹಿಂದೆ ಈ ಪ್ರದೇಶದಲ್ಲಿ ಜಿಂಕೆಯನ್ನೂ ನೋಡಿದ್ದೇನೆ. ಕಾಡುಹಂದಿ, ಮುಳ್ಳುಹಂದಿ, ಮರ ಇಲಿ ಇಲ್ಲಿ ಕಾಣಸಿಗುತ್ತವೆ’ ಎಂದು ಅವರು ತಿಳಿಸಿದರು.

**

ಅಂಕಿ–ಅಂಶ

550 ಎಕರೆ: ತುರಹಳ್ಳಿ ಸಂರಕ್ಷಿತ ಅರಣ್ಯದ ವಿಸ್ತೀರ್ಣ

59: ಪ್ರಭೇದಗಳ ಹಕ್ಕಿಗಳು ಇಲ್ಲಿವೆ

22: ಸರೀಸೃಪ ಪ್ರಭೇದಗಳಿವೆ

*

ತುರಹಳ್ಳಿ ಅರಣ್ಯ

100 ಅಡಿ ರಸ್ತೆ, 80 ಅಡಿ ರಸ್ತೆ, ಚನ್ನಸಂದ್ರ, ಲಿಂಗಧೀರಹಳ್ಳಿ, ನೈಸ್‌ ರಸ್ತೆ, ಬನಶಂಕರಿ 2ನೇ ಬ್ಲಾಕ್‌, 5ನೇ ಬ್ಲಾಕ್‌,

**

ಬೆಂಗಳೂರಿನ ಪಾಲಿಗೆ ತುರಹಳ್ಳಿ ಕಾಡು ಆಮ್ಲಜನಕದ ಕಾರ್ಖಾನೆ ಇದ್ದಂತೆ. ಇಲ್ಲಿನ ನೈಸರ್ಗಿಕ ವಾತಾವರಣವನ್ನು ಉಳಿಸಿಕೊಳ್ಳುವ ಜರೂರತ್ತು ಇದೆ.

-ಎ.ಪ್ರಸನ್ನ ಕುಮಾರ್‌, ಜಿಲ್ಲಾ ವನ್ಯಜೀವಿ ವಾರ್ಡನ್‌

ಬರಹ ಇಷ್ಟವಾಯಿತೆ?

 • 22

  Happy
 • 1

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !