ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಿಸಿಇ: ₹49 ಲಕ್ಷದ ಉದ್ಯೋಗ

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಾಧನೆ
Last Updated 4 ಡಿಸೆಂಬರ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ನ 7ನೇ ಸೆಮಿಸ್ಟರ್‌ನಇಬ್ಬರು ವಿದ್ಯಾರ್ಥಿಗಳಾದ ಅಭಿಷೇಕ್ ಕುಮಾರ್ ರೈ ಮತ್ತು ಯಶ್‌ ಎಂ.ಕೊಠಾರಿ ಅವರಿಗೆ ಆಸ್ಟ್ರೇಲಿಯಾ ಮೂಲದ ಸಾಫ್ಟ್‌ವೇರ್‌ ಕಂಪನಿಯಲ್ಲಿ ವಾರ್ಷಿಕ ₹ 49.75 ಲಕ್ಷ ವೇತನದ ಉದ್ಯೋಗ ಲಭಿಸಿದೆ.

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಇಷ್ಟು ದೊಡ್ಡ ಮೊತ್ತದ ಉದ್ಯೋಗ ದೊರೆತಿರುವುದು ಅಪರೂಪ ಎನ್ನಲಾಗುತ್ತಿದೆ. ಕಳೆದ ವರ್ಷ ಇದೇ ಕಾಲೇಜಿನ ವಿದ್ಯಾರ್ಥಿಯೊಬ್ಬರಿಗೆ ಮೈಕ್ರೋಸಾಫ್ಟ್‌ ಕಂಪನಿಯಲ್ಲಿ ₹ 34 ಲಕ್ಷದ ಉದ್ಯೋಗ ಲಭಿಸಿತ್ತು.

ಬೆಂಗಳೂರಿನಲ್ಲೂ ಕಚೇರಿ ಹೊಂದಿರುವ ಆಸ್ಟ್ರೇಲಿಯಾದ ಈ ಸಾಫ್ಟ್‌ವೇರ್ ಕಂಪನಿ ಯುವಿಸಿಇ ಕ್ಯಾಂಪಸ್‌ ಸಂದರ್ಶನಕ್ಕೆ ಬಂದದ್ದು ಇದೇ ಪ್ರಥಮ ಬಾರಿಗೆ. ವ್ಯಾಸಂಗ ಕೊನೆಗೊಂಡ ತಕ್ಷಣಇಬ್ಬರೂ ಬೆಂಗಳೂರಿನಲ್ಲೇ ಉದ್ಯೋಗಕ್ಕೆ ಸೇರಿಕೊಳ್ಳಲಿದ್ದಾರೆ.

‘ನಮ್ಮ ಕಾಲೇಜಿನ ಮೂಲಸೌಲಭ್ಯಗಳು ಅಂತಹ ಗುಣಮಟ್ಟದಲ್ಲಿ ಇಲ್ಲದೆ ಇರಬಹುದು, ಆದರೆ ಬೋಧನಾ ವರ್ಗದ ಕೌಶಲವನ್ನು ಯಾರೂ ಪ್ರಶ್ನಿಸುವುದು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಇವರ ಪಾತ್ರ ಬಹಳ ದೊಡ್ಡದಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕಂಪನಿಗಳಿಂದ ಉತ್ತಮ ಉದ್ಯೋಗದ ಕೊಡುಗೆ ಸಿಗುವ ಅವಕಾಶ ನಿರೀಕ್ಷಿಸಲಾಗಿದೆ’ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ಅಧಿಕಾರಿ ಡಾ.ಬಿ.ಎಂ.ರಾಜಪ್ರಕಾಶ್‌ ತಿಳಿಸಿದರು. ಯಶ್‌ ಕೊಠಾರಿ ಬೆಂಗಳೂರಿನವರೇ ಆಗಿದ್ದು, ಅವರ ತಂದೆ ಮನೋಜ್‌ ಚಿಕ್ಕಪೇಟೆಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಅವರ ತಾಯಿ ಗೃಹಿಣಿ. ಅಭಿಷೇಕ್‌ ರೈ ಅವರ ತಂದೆ ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ.

* 350 – ಕಾಲೇಜಿನಲ್ಲಿನ ಸಂದರ್ಶನಕ್ಕೆ ಅರ್ಹ ವಿದ್ಯಾರ್ಥಿಗಳು

* 199 – ವಿದ್ಯಾರ್ಥಿಗಳಿಗೆ ಬಂದಿವೆ350 ಉದ್ಯೋಗದ ಕೊಡುಗೆಗಳು

* 60 – ಸಂದರ್ಶನಕ್ಕಾಗಿಕಾಲೇಜಿಗೆ ಭೇಟಿ ಕೊಟ್ಟಿರುವ ಕಂಪನಿಗಳು

***

ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗಿಂತ ನಾವು ಕಡಿಮೆ ಇಲ್ಲ ಎಂಬುದು ಸಾಬೀತಾಗಿದೆ. ನಮ್ಮ ಪ್ರಯತ್ನ ಇದೇ ರೀತಿ ಮುಂದುವರಿಯಲಿದೆ

– ಪ್ರೊ.ಕೆ.ಆರ್.ವೇಣುಗೋಪಾಲ್‌, ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

ಮೂರು ಸುತ್ತಿನ ಆಯ್ಕೆ ಪ್ರಕ್ರಿಯೆ ಇತ್ತು. ಎಚ್‌ಆರ್ ರೌಂಡ್‌ನಲ್ಲಿ ಪಾಸಾಗುವ ಭರವಸೆ ಇರಲಿಲ್ಲ. ಆದರೆ, ಅಂತಿಮವಾಗಿ ಆಯ್ಕೆಯಾದಾಗ ಸಂತೋಷಕ್ಕೆ ಮಿತಿಯೇ ಇಲ್ಲ

– ಯಶ್‌ ಎಂ.ಕೊಠಾರಿ, ವಿದ್ಯಾರ್ಥಿ

ಹ್ಯಾಕಥಾನ್‌ಗಳು, ತಂತ್ರಜ್ಞಾನ ಕುರಿತ ಸೆಳೆತ ಬಹಳ ಸಹಾಯ ಮಾಡಿದೆ. ಅಧ್ಯಾಪಕರ ಬೋಧನೆ ಪ್ರಭಾವ ದೊಡ್ಡದಿದೆ

– ಅಭಿಷೇಕ್‌ ಕುಮಾರ್ ರೈ, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT