ಬೆಂಗಳೂರು: ‘ವಚನಗಳು ಕಥೆ ಪುರಾಣಗಳಲ್ಲ; ವೈಚಾರಿಕತೆಯ ಪ್ರತಿಬಿಂಬ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ತಿಳಿಸಿದರು.
ಸಂಪಂಗಿರಾಮನಗರದಲ್ಲಿ ವೀರಶೈವ ಸದ್ಧರ್ಮ ವರ್ಧಿನಿ ಸಂಘ ಆಯೋಜಿಸಿದ್ದ ವಚನ ಶ್ರಾವಣದಲ್ಲಿ ಅವರು ಉಪನ್ಯಾಸ ನೀಡಿದರು.
ವಿಚಾರಶೀಲತೆಯೇ ವಚನಗಳ ಮೂಲ ಲಕ್ಷಣವಾಗಿದೆ. ವೈಚಾರಿಕ ನೆಲೆಗಟ್ಟಿನಲ್ಲಿ ಸಮ ಸಮಾಜವನ್ನು ನಿರ್ಮಾಣ ಮಾಡಿದ ಬಸವಣ್ಣನವರು ಸ್ತ್ರೀ ಸಮಾನತೆಯನ್ನು ಆಚರಣೆಗೆ ತಂದರು. ಶೋಷಿತರನ್ನು ಅಪ್ಪಿಕೊಂಡು, ಒಪ್ಪಿಕೊಂಡು ಜೊತೆಗೆ ಕರೆದುಕೊಂಡು ನಡೆದ ಮಹಾತ್ಮರು ಎಂದು ಬಣ್ಣಿಸಿದರು.
ವಚನ ಗಾಯನ ಸ್ಪರ್ಧೆಯಲ್ಲಿ ಅತಿ ಹೆಚ್ಚು ವಚನಗಳನ್ನು ಹಾಡುವ ಸ್ಪರ್ಧೆಯಲ್ಲಿ ಸರ್ವಾಣಿ ಪ್ರಥಮ, ಶ್ರುತಿ ದ್ವಿತೀಯ, ಜೀವಿತಾ ತೃತೀಯ ಬಹುಮಾನ ಪಡೆದರು. ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ಸಂಘದ ಅಧ್ಯಕ್ಷ ಶಿವಪ್ಪ, ಪದಾಧಿಕಾರಿಗಳಾದ ಗೌರಿಶಂಕರ್, ಪಂಚಾಕ್ಷರಿ, ಗುರುಪ್ರಸಾದ್, ರುದ್ರಪ್ಪ ಭಾಗವಹಿಸಿದ್ದರು.