ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಿಂದ ಸ್ಮರಣೆಗೆ ನಗರ ಸಜ್ಜು

ವೈಕುಂಠ ಏಕಾದಶಿ
Last Updated 18 ಡಿಸೆಂಬರ್ 2018, 2:05 IST
ಅಕ್ಷರ ಗಾತ್ರ

ವೈಕುಂಠ ಏಕಾದಶಿ ಪ್ರಯುಕ್ತ ನಗರದ ವಿವಿಧೆಡೆಯಿರುವ ವೆಂಕಟೇಶ್ವರ, ಶ್ರೀನಿವಾಸ, ಕೋದಂಡರಾಮ ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜೆ ಮತ್ತು ಉತ್ಸವಗಳು ನಡೆಯಲಿವೆ. ಈ ಪುಣ್ಯದಿನದಂದು ದೇವರ ದರ್ಶನಕ್ಕೆ ಭಕ್ತರು ಮುಂಜಾನೆ 4 ಗಂಟೆಯಿಂದಲೇ ದೇವಾಲಯಗಳ ಮುಂದೆ ಸಾಲುಗಟ್ಟಿ ನಿಂತು, ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

ಈ ದೇವಾಲಯಗಳಲ್ಲಿ ವೈಕುಂಠ ದ್ವಾರಗಳನ್ನು ನಿರ್ಮಿಸುವ ಮತ್ತು ಇಡೀ ದೇವಾಲಯವನ್ನು ವಿಶೇಷವಾಗಿ ಹೂವಿನಿಂದ ಸಿಂಗರಿಸುವ ಕಾರ್ಯ ಸೋಮವಾರ ನಡೆಯುತ್ತಿತ್ತು. ಮಂಗಳವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿಶೇಷ ಪೂಜೆಗಳು ನೆರವೇರುತ್ತವೆ. ದೇವರ ಮೂರ್ತಿಯನ್ನು ಆಭರಣ ಮತ್ತು ಹೂವಿನಿಂದ ಅಲಂಕರಿಸಲಾಗಿರುತ್ತದೆ. ದೇವರ ದರ್ಶನ ಪಡೆಯುವ ಭಕ್ತರಿಗೆ ದೇವಾಲಯಗಳಲ್ಲಿ ಪ್ರಸಾದ ವಿನಿಯೋಗವೂ ಇರುತ್ತದೆ. ವೈಕುಂಠ ಏಕಾದಶಿಯಂದು ಕೆಲವರು ದಿನವಿಡೀ ಉಪವಾಸದ ವ್ರತ ಆಚರಿಸುತ್ತಾರೆ.

ಇಸ್ಕಾನ್‌ ದೇವಾಲಯ

ರಾಜಾಜಿನಗರದ ಇಸ್ಕಾನ್‌ನಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಗಳು ನೆರವೇರಲಿವೆ. ಸುಪ್ರಭಾತ ಸೇವೆ, ಧೂಪ, ದೀಪ, ಚಾಮರ, ವ್ಯಂಜನ ಸೇವೆ, ಅಭಿಷೇಕ ನಡೆಯಲಿದೆ. ದೇವಾಲಯದಲ್ಲಿ ವೈಕುಂಠದ ವಾತಾವರಣ ಸೃಷ್ಟಿಸಿ, ವಿಶೇಷವಾಗಿ ಅಲಂಕರಿಸಲಾಗಿರುತ್ತದೆ. ಬೆಳಿಗ್ಗೆ 8ರಿಂದ ರಾತ್ರಿ 11 ಗಂಟೆಯವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶ್ರೀನಗರದಲ್ಲಿ ‘ವಿಶ್ವರೂಪ ದರ್ಶನ’

ಶ್ರೀನಗರದ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 4.30ರಿಂದಲೇ ವಿಶ್ವರೂಪ ದರ್ಶನಕ್ಕೆ ಅವಕಾಶ ದೊರೆಯಲಿದೆ. ವೈಕುಂಠ ದ್ವಾರದ ಮೂಲಕ ಬರುವ ಭಕ್ತರಿಗೆ ದಿನಪೂರ್ತಿ ಸ್ವಾಮಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಭಕ್ತರೆಲ್ಲರಿಗೂ ಪ್ರಸಾದ ವಿನಿಯೋಗ ಇರುತ್ತದೆ.

ದೇವಾಲಯದ ಎಲ್ಲ ದೇವರುಗಳಿಗೆ ತೋಮಾಲೆ ಅಲಂಕಾರ, ದೇವಸ್ಥಾನದ ಆವರಣದ ಒಳಗೆ ಮತ್ತು ಹೊರಗೆ ಪೂಲಂಗಿ ಸೇವೆ, ಸಿಹಿ ಲಾಡು ವಿತರಣೆ ಇರುತ್ತದೆ. ಸಂಜೆ 6.30ರಿಂದ 7.30ರವರೆಗೆ ವಿದುಷಿ ಭ್ರಮರಾ ಗೋಪಿನಾಥ್‌ ಅವರಿಂದ ‘ತಿರುಪ್ಪಾವೈ’ ಪ್ರವಚನವಿರುತ್ತದೆ.

ಪರಮಪದ ವೈಕುಂಠ ಏಕಾದಶಿ

ಬನ್ನೇರುಘಟ್ಟ ಬಳಿಯ ನಿಸರ್ಗ ಬಡಾವಣೆಯಲ್ಲಿನ ಪ್ರಸನ್ನವರದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ‘ಪರಮಪದ ವೈಕುಂಠ ಏಕಾದಶಿ ಮಹೋತ್ಸವ’ ಜರುಗಲಿದೆ. ಸೇವಾಕರ್ತರಿಗೆ ಬೆಳಿಗ್ಗೆ 4.30ರಿಂದ ರಾತ್ರಿ 8.30ರವರೆಗೆ, ಸಾರ್ವಜನಿಕರಿಗೆ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿಗೆ ರಾತ್ರಿ 8.30ರಿಂದ ಪುಷ್ಪಯಾಗ ಸೇವೆ ನಡೆಯಲಿದೆ.

ಇದಲ್ಲದೆ ಬೆಳಿಗ್ಗೆ 10.30ಕ್ಕೆ ವೀಯೆಲ್ಲೆನ್‌ ಪ್ರಬುದ್ಧಾಲಯದ ಹಿರಿಯ ನಿವಾಸಿಗಳಿಂದ ಭಜನೆ, ಬೆಳಿಗ್ಗೆ 11.30ಕ್ಕೆ ನಿಸರ್ಗ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಎಂ. ರಾಘವೇಂದ್ರ ರಾವ್‌ ಮತ್ತು ಸಂಗಡಿಗರಿಂದ ‘ದಾಸವಾಣಿ’, ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ನಾದಲೋಕ ಸ್ಕೂಲ್‌ ಆಫ್‌ ಮ್ಯೂಸಿಕ್‌ (ಜೆ.ಪಿ ನಗರ) ಅವರಿಂದ ‘ಭಕ್ತಿ ಸಂಗೀತ’ ಹಾಗೂ ಸಂಜೆ 6 ಗಂಟೆಗೆ ಸ್ಪೂರ್ತಿ ಸ್ಕೂಲ್‌ ಆಫ್‌ ಡಾನ್ಸ್‌ವತಿಯಿಂದ ‘ವಂದೇ ವಾಸುದೇವಂ’ ನೃತ್ಯ ರೂಪಕ ಆಯೋಜಿಸಲಾಗಿದೆ. ಆರ್‌.ಟಿ.ನಗರದ ದಿಣ್ಣೂರಿನ 1ನೇ ಮುಖ್ಯರಸ್ತೆಯಲ್ಲಿ ಇರುವ ಪ್ರಸನ್ನ ಕೋದಂಡ ರಾಮಮಸ್ವಾಮಿ ದೇವಾಸ್ಥಾನದಲ್ಲಿ ವೈಕುಂಠ ದ್ವಾರ ನಿರ್ಮಿಸಲಾಗಿದೆ. ದೇವರಿಗೆ ಹೂವಿನ ಅಲಂಕಾರದ ಜತೆಗೆ ಪ್ರಸಾದ ವಿನಿಯೋಗವೂ ಇರುತ್ತದೆ. ಬೆಳಿಗ್ಗೆಯಿಂದ ರಾತ್ರಿವರೆಗೆ ವಿಶೇಷವಾಗಿ ಪೂಜಾ ಕಾರ್ಯಗಳು ನೆರವೇರಲಿವೆ.

ದಿಣ್ಣೂರು ರಸ್ತೆಯ ಕೋದಂಡರಾಮ ದೇವಸ್ಥಾನ
ದಿಣ್ಣೂರು ರಸ್ತೆಯ ಕೋದಂಡರಾಮ ದೇವಸ್ಥಾನ

ವಸಂತಪುರದ ವಸಂತ ವಲ್ಲಭರಾಯ, ಕೋಣನಕುಂಟೆಯ ಶ್ರೀನಿಧಿ ವೆಂಕಟೇಶ್ವರ, ಜೆ.ಪಿ ನಗರದ ವೆಂಕಟೇಶ್ವರ ಮತ್ತು ಶ್ರೀನಿವಾಸ ದೇವಾಲಯ, ತ್ಯಾಗರಾಜನಗರದ ಶ್ರೀನಿವಾಸ ದೇವಾಲಯ, ಗಾಂಧಿ ಬಜಾರ್‌ನ ವ್ಯಾಸರಾಯ ಮಠ, ರಾಜರಾಜೇಶ್ವರಿ ನಗರದ ವೆಂಕಟೇಶ್ವರ ದೇವಾಲಯ, ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ವೆಂಕಟೇಶ್ವರ ದೇವಾಲಯ, ವಿಜಯನಗರದ ಕೋದಂಡರಾಮ ಸ್ವಾಮಿ ದೇವಾಲಯ, ಹೊಸಕೋಟೆ, ನೆಲಮಂಗಲ, ಕೆ.ಆರ್‌. ಪೇಟೆ ಸೇರಿದಂತೆ ನಗರದ ವಿವಿಧೆಡೆ ಇರುವ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.

ವಿಷ್ಣ ಸಹಸ್ರನಾಮ ಪಾರಾಯಣ

ಮತ್ತಿಕೆರೆಯಲ್ಲಿರುವ ಪೇಸ್‌ ಎಜುಕುಲ್‌ ಶಂಕರ್‌ ಇಂಗ್ಲಿಷ್‌ ಸ್ಕೂಲ್‌ ವೈಕುಂಠ ಏಕಾದಶಿಯಂದು ವಿದ್ಯಾರ್ಥಿಗಳಿಂದ ಅಖಂಡ ವಿಷ್ಣು ಸಹಸ್ರನಾಮ ಪಾರಾಯಣವನ್ನು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಹಮ್ಮಿಕೊಂಡಿದೆ. ವಿಶ್ವದಾಖಲೆ ಮೂಲಕ ವಂಡರ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗುವ ಮಹತ್ವಾಕಾಂಕ್ಷೆಯನ್ನು ಈ ಶಾಲೆ ಹೊಂದಿದೆ.

ಮಲ್ಲೇಶ್ವರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ಮಲ್ಲೇಶ್ವರದ ಪಾಂಡುರಂಗ ವಿಷ್ಣು ಸಹಸ್ರನಾಮ ಮಂಡಳಿಯು 22ನೇ ವರ್ಷದ ‘ಶ್ರೀನಿವಾಸ ಕಲ್ಯಾಣೋತ್ಸವ’ ಹಮ್ಮಿಕೊಂಡಿದೆ. ಅದರ ಪ್ರಯುಕ್ತ ಬೃಹತ್‌ ವಿಷ್ಣುಸಹಸ್ರನಾಮ ಪಾರಾಯಣ ಮಹಾಯಜ್ಞವನ್ನೂ (27 ಗಂಟೆಗಳ) ಅದು ನಡೆಸಲಿದೆ. ಈ ಸಾಮೂಹಿಕ ಪಾರಾಯಣದಲ್ಲಿ ಬೆಂಗಳೂರಿನ ನಾನಾ ಭಾಗಗಳ ವಿಷ್ಣುಸಹಸ್ರನಾಮ ಮಂಡಳಿಗಳು ಭಾಗವಹಿಸಲಿವೆ. ಇದನ್ನು ಧಾರ್ಮಿಕ ಜಾಗೃತಿ ಅಭಿಯಾನವಾಗಿ ಮಂಡಳಿ ಆಚರಿಸಲಿದೆ. ಈ ಕಾರ್ಯಕ್ರಮದಲ್ಲಿ ಒಟ್ಟು 108 ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT