ಬುಧವಾರ, ಜನವರಿ 29, 2020
27 °C
ಆಚರಣೆಗೆ ಸಜ್ಜಾಗಿದೆ ನಗರ * ಉಪವಾಸ ವ್ರತ ಆಚರಿಸಲಿದ್ದಾರೆ ಶ್ರೀಹರಿಭಕ್ತರು

ಇಂದು ವೈಕುಂಠ ಏಕಾದಶಿ: ಶ್ರೀಮನ್ನಾರಾಯಣ ದೇವರ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೈಕುಂಠ ಏಕಾದಶಿ ಆಚರಣೆಗೆ ನಗರದ ವೆಂಕಟೇಶ್ವರ ದೇವಾಲಯಗಳು ತಳಿರು ತೋರಣಗಳಿಂದ ಸಿಂಗಾರಗೊಂಡು ಸಜ್ಜಾಗಿವೆ. ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜೆ ಹಾಗೂ ಉತ್ಸವಗಳು ನಡೆಯಲಿದ್ದು, ಶ್ರಿಮನ್ನಾರಾಯಣ ದೇವರ ಸ್ಮರಣೆಗೆ ಭಕ್ತರು ಸಿದ್ಧತೆ ನಡೆಸಿದ್ದಾರೆ.

ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿ ವೈಕುಂಠ ಏಕಾದಶಿ ಎಂದೇ ಪ್ರಸಿದ್ಧ. ಈ ಶುಭ ದಿನದಂದು ವೈಕುಂಠದ ಉತ್ತರದ ಬಾಗಿಲಿನ ಮೂಲಕ ಶ್ರೀಮನ್ನಾರಾಯಣ ದೇವರು ಮೂರು ಕೋಟಿ ದೇವಾನುದೇವತೆಗಳಿಗೆ ದರುಶನ ಭಾಗ್ಯ ಕರುಣಿಸುತ್ತಾನೆ ಎಂಬುದು ಭಕ್ತರ ನಂಬಿಕೆ. ಈ ಶುಭ ದಿನದಂದು ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಿ, ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಇಸ್ಕಾನ್‌ ದೇವಸ್ಥಾನ, ವೈಯಾಲಿಕಾವಲ್‌ ಟಿಟಿಡಿ, ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಶ್ರೀನಿವಾಸ ದೇವಸ್ಥಾನ, ಕೋಟೆ ವೆಂಕಟೇಶ್ವರಸ್ವಾಮಿ, ಶ್ರೀನಿವಾಸನಗರದ ಲಕ್ಷ್ಮೀವೆಂಕಟೇಶ್ವರ ದೇವಾಲಯ, ಜೆ.ಪಿ.ನಗರ ತಿರುಮಲಗಿರಿ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯ ಎಂ.ಜಿ.ರೈಲ್ವೆ ಕಾಲೊನಿಯ ವೆಂಕಟೇಶ್ವರಸ್ವಾಮಿ ದೇವಸ್ಥಾನ, ಕೆಂಗೇರಿಯ ಬೆಟ್ಟನಪಾಳ್ಯದ ಸ್ತಂಭದ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯಗಳಲ್ಲಿ ಏಕಾದಶಿ ಆಚರಣೆ ವೈಭವೋಪೇತವಾಗಿ ನಡೆಯಲಿದೆ.

ವೆಂಕಟೇಶ್ವರನ ಮೂರ್ತಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವೈಕುಂಠ ದ್ವಾರದ ಪೂಜೆ, ಅಷ್ಟೋತ್ತರ ಶತನಾಮಾವಳಿ ಸೇವೆ, ಮಂತ್ರ ಪುಷ್ಪ ಸೇವೆ, ಅಷ್ಟಾವಧಾನ ಸೇವೆಗಳನ್ನು ಮಾಡಲಾಗುತ್ತದೆ. ವೆಂಕಟರಮಣನ ಕುರಿತು ಕೀರ್ತನೆ, ದೇವರನಾಮ ಗಾಯನ ಕಾರ್ಯಕ್ರಮಗಳು ನಡೆಯಲಿವೆ.

ಇಸ್ಕಾನ್ ದೇವಸ್ಥಾನದಲ್ಲಿ ಬೆಳಿಗ್ಗೆ 3 ಗಂಟೆಯಿಂದ ವೈಕುಂಠ ಏಕಾದಶಿ ಪೂಜೆಗಳು ಆರಂಭವಾಗಲಿವೆ. ಬೆಳಿಗ್ಗೆ 8ರಿಂದ 11ಗಂಟೆ ತನಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದೆ. ದೇವರ ದರ್ಶನ ಮತ್ತು ‘ವೈಕುಂಠ ದ್ವಾರ’ ಪ್ರವೇಶಿಸಲು ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಬರುವ ನಿರೀಕ್ಷೆ ಇದೆ ಎಂದು ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ.

ವಿಶೇಷ ಉಪವಾಸ: ಎಲ್ಲ ಏಕಾದಶಿಯಲ್ಲೂ ಉಪವಾಸ ವ್ರತ ಆಚರಿಸಲಾಗುತ್ತದೆ. ಆದರೆ, ವೈಕುಂಠ ಏಕಾದಶಿಯಂದು ನಡೆಸುವ ಉಪವಾಸ ವ್ರತ ನೂರ್ಮಡಿಗಳಷ್ಟು ಹೆಚ್ಚೂ ಫಲ ನೀಡುತ್ತದೆ ಎಂಬ ನಂಬಿಕೆ ಭಕ್ತರದು. ದೈಹಿಕವಾಗಿ ಅಶಕ್ತರಾದವರು ದ್ರವಾಹಾರ ಅಥವಾ ಫಲಾಹಾರ ಮಾತ್ರ ಸೇವಿಸಿ ವ್ರತ ಆಚರಿಸುತ್ತಾರೆ.

ವೈಕುಂಠದ ಮಾದರಿ: ಹನುಮಂತನಗರದ ಶಿವ–ಪಾರ್ವತಿ, ವೆಂಕಟೇಶ್ವರ–ಪದ್ಮಾವತಿ, ದತ್ತಾತ್ರೇಯ, ನವಗ್ರಹ ದೇವಸ್ಥಾನವನ್ನು ವೈಕುಂಠದ ಮಾದರಿಯಲ್ಲಿ ಅಲಂಕಾರ ಮಾಡಲಾಗಿದೆ. ಗಣೇಶಮೂರ್ತಿಗೆ ಗೋಡಂಬಿ, ದ್ರಾಕ್ಷಿ, ಸ್ಟ್ರಾಬೆರಿ ಹಣ್ಣು, ಬಾಳೆದಿಂಡು, ಕಬ್ಬಿನ ಅಲಂಕಾರವನ್ನು ಮಾಡಲಾಗಿದೆ. ಈಶ್ವರಸ್ವಾಮಿಯನ್ನು ಅವರೇಕಾಯಿ, ಅವರೇಕಾಳು, ದಾಳಿಂಬೆ, ಸೇಬು, ನವಿಲುಗರಿ ಹಾಗೂ ಒಡವೆಗಳಿಂದ ಸಿಂಗರಿಸಲಾಗಿದೆ.

ವೈಯಾಲಿಕಾವಲ್‌ ಟಿಟಿಡಿಯಲ್ಲಿ ವಿಶೇಷ ವ್ಯವಸ್ಥೆ

ವೈಕುಂಠ ಏಕಾದಶಿ ಅಂಗವಾಗಿ ಸಮವಾರ ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಟಿಟಿಡಿ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಡಿ.ಕುಪೇಂದ್ರ ರೆಡ್ಡಿ ತಿಳಿಸಿದರು.

‘ಸುಮಾರು 60 ಸಾವಿರಕ್ಕೂ ಹೆಚ್ಚು ಭಕ್ತರು ವೆಂಕಟೇಶ್ವರ ಸ್ವಾಮಿಯ ದರುಶನ ಪಡೆಯುವ ನಿರೀಕ್ಷೆ ಇದೆ. ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ತಿರುಪತಿಯ ದರ್ಶನದ ಮಾದರಿಯಲ್ಲಿ ಇಲ್ಲೂ ವ್ಯವಸ್ಥೆ ಮಾಡಲಾಗಿದೆ. ವೃದ್ಧರು, ಅಂಗವಿಕಲರು ಮತ್ತು ಗರ್ಭಿಣಿಯರಿಗೆ ವಿಶೇಷ ಪಾಸ್‌ಗಳನ್ನು ನೀಡಲಾಗುವುದು. ಇವರಿಗೆ ನೇರ ದರ್ಶನದ ವ್ಯವಸ್ಥೆ ಇರುತ್ತದೆ’ ಎಂದರು.

‘ಚೌಡಯ್ಯ ಸ್ಮಾರಕ ಭವನ ಮತ್ತು ವೈಯ್ಯಾಲಿಕಾವಲ್‌ ಎಜುಕೇಷನ್‌ ಸೊಸೈಟಿ ಆವರಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ತಿರುಪತಿಯಿಂದ ತರಿಸಲಾದ ಲಡ್ಡುಗಳನ್ನು ಭಕ್ತರಿಗೆ ವಿತರಿಸಲಾಗುತ್ತದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು