ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ‘ನಾಯಕರ’ ಶಕ್ತಿ ಪ್ರದರ್ಶನ

ಮೀಸಲಾತಿ ಪ್ರಮಾಣ ಹೆಚ್ಚಿಸದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ, ರಸ್ತೆಯಲ್ಲೇ ಪ್ರತಿಭಟನೆ, ಸಂಚಾರ ದಟ್ಟಣೆ
Last Updated 25 ಜೂನ್ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು:ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸಿದ ಪರಿಶಿಷ್ಟ ಪಂಗಡದವರ ಶಕ್ತಿ ಪ್ರದರ್ಶನಕ್ಕೆ ಮಂಗಳವಾರ ನಗರ ಸಾಕ್ಷಿಯಾಯಿತು. ವಿಧಾನಸೌಧದಿಂದ ಸ್ವಾತಂತ್ರ್ಯ ಉದ್ಯಾನದವರೆಗಿನ ಮಾರ್ಗದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು.

ಹರಿಹರದ ರಾಜನಹಳ್ಳಿಯಿಂದ ಜೂನ್‌ 9ರಿಂದವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ಹೊರಟಿದ್ದ ಪಾದಯಾತ್ರೆ ಮಂಗಳವಾರ ನಗರವನ್ನು ತಲುಪಿತು.

ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸ್ವಾಮೀಜಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ನಂತರ, ಪ್ರತಿಭಟನಾಕಾರರು ಸ್ವಾತಂತ್ರ್ಯ ಉದ್ಯಾನದತ್ತ ತೆರಳಿದರು.

ರಾಜನಹಳ್ಳಿ, ಜಗಳೂರು, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಶಿರಾ, ತುಮಕೂರು, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಶಿಡ್ಲಘಟ್ಟ, ಹೊಸಕೋಟೆ ಹಾಗೂ ಕೆ.ಆರ್. ಪುರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ವಾಲ್ಮೀಕಿ ಸಮುದಾಯದವರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

‘ಜಾತಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿ’, ‘ಕೇಂದ್ರ ಕೊಟ್ಟರೂ ರಾಜ್ಯ ಕೊಡುತ್ತಿಲ್ಲ, ನಾಯಕರ ಶಕ್ತಿ ನಿಮಗೆ ಗೊತ್ತಿಲ್ಲ’ ಎಂಬಿತ್ಯಾದಿ ಸಾಲುಗಳನ್ನು ಹೊಂದಿದ್ದ ಫಲಕಗಳನ್ನು ಪ್ರದರ್ಶಿಸಿದರು.

ಶಾಸಕ ಬಿ. ಶ್ರೀರಾಮುಲು ಮಾತನಾಡಿ, ‘ವಾಲ್ಮೀಕಿ ಸ್ವಾಮೀಜಿಗಳು ನೀಡಿದ ಭಿಕ್ಷೆಯಿಂದ ನಾವು ಜನಪ್ರತಿನಿಧಿಗಳಾಗಿದ್ದೇವೆ. ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸುವವರೆಗೆ ಹೋರಾಟ ಕೈಬಿಡುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧ’ ಎಂದರು.

‘ನಮ್ಮ ಸಮುದಾಯವನ್ನು ಎದುರು ಹಾಕಿಕೊಂಡವರು ರಾಜಕೀಯವಾಗಿ ಅಭಿವೃದ್ಧಿಯಾಗಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಆಲಿಸಬೇಕು’ ಎಂದು ಒತ್ತಾಯಿಸಿದರು.

ಆಂಜನೇಯಗೆ ಮುಜುಗರ:‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ನಡೆಯುತ್ತಿರುವ ಈ ಹೋರಾಟ ಶಾಂತಿಯುತವಾಗಿರಬೇಕು. ನಾನು ನಿಮ್ಮ ಪ್ರತಿನಿಧಿಯಾಗಿ ಇಲ್ಲಿದ್ದೇನೆ. ಮೀಸಲಾತಿ ಪ್ರಮಾಣ ಹೆಚ್ಚಾಗಲೇಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎಚ್. ಆಂಜನೇಯ ಹೇಳಿದರು.

‘ಈ ಹಿಂದೆ ಕಾಂಗ್ರೆಸ್‌ ಸರ್ಕಾರವಿತ್ತು. ತಾವು ಮಂತ್ರಿಯೂ ಆಗಿದ್ದಿರಿ. ಆಗಲೇ ಈ ಬೇಡಿಕೆ ಈಡೇರಿಸಬಹು
ದಿತ್ತಲ್ಲ’ ಎಂದು ಸ್ವಾಮೀಜಿ, ವೇದಿಕೆಯ ಮೇಲೆಯೇ ಆಂಜನೇಯರನ್ನು ಪ್ರಶ್ನಿಸಿದರು. ಆಂಜನೇಯ ನಿರುತ್ತರರಾದರು.

‘ನಾವೇನೂ ಮುಖ್ಯಮಂತ್ರಿ ಸ್ಥಾನ ಕೇಳುತ್ತಿಲ್ಲ. ಮೀಸಲಾತಿ ಕೇಳುತ್ತಿದ್ದೇವೆ. ಬಿಜೆಪಿ ಸರ್ಕಾರ ಬಂದರೂ ಸಚಿವ ಸ್ಥಾನ ಕೇಳುವುದಿಲ್ಲ. ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಷ್ಟೇ’ ಎಂದು ಶಾಸಕ ರಾಜುಗೌಡ ಆಗ್ರಹಿಸಿದರು.

ನಟ ಶಶಿಕುಮಾರ್ ಮಾತನಾಡಿ,‘ನಾಯಕ ಸಮಾಜಕ್ಕೆ ಅನುಕೂಲ ಒದಗಿಸುವ ದೃಷ್ಟಿಯಿಂದ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ಈ ಹೋರಾಟವನ್ನು ಬೆಂಬಲಿಸಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಏರಿಸಬೇಕು. ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ’ ಎಂದು ಅಭಿಪ್ರಾಯಪಟ್ಟರು.

ಪರಿಶಿಷ್ಟ ಪಂಗಡದ ಶಾಸಕರು ಪಕ್ಷಾತೀತವಾಗಿ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿದರು.ಸ್ಥಳಕ್ಕೆ ಬಾರದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು. ನಾಯಕ ಸಮುದಾಯದ ನಟ ಸುದೀಪ್‌ ಕೂಡ ಪ್ರತಿಭಟನೆಗೆ ಬಾರದ ಬಗ್ಗೆಯೂ ಪ್ರಸ್ತಾಪಿಸಲಾಯಿತು. ‘ಚಿತ್ರೀಕರಣದಲ್ಲಿ ಭಾಗವಹಿಸಿದ್ದರಿಂದ ಸುದೀಪ್‌ ಸ್ಥಳಕ್ಕೆ ಬರಲಾಗಿಲ್ಲ. ಅವರು ಈ ಕುರಿತು
ಟ್ವೀಟ್‌ ಮಾಡಿದ್ದಾರೆ’ ಎಂದು ಸ್ವಾಮೀಜಿ ಜನರ ಗಮನಕ್ಕೆ ತಂದರು.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪ್ರತಿಭಟನಾಕಾರರಿಗೆ ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಂಚಾರ ದಟ್ಟಣೆ ಬಿಸಿ

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿಯೇ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ವಾಹನ ಸವಾರರು ತಾಸುಗಟ್ಟಲೇ ರಸ್ತೆಯಲ್ಲಿಯೇ ಇರಬೇಕಾಯಿತು.

ಮೊದಲು, ವಿಧಾನಸೌಧದ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜಮಾಯಿಸಿದರು. ನಂತರ, ಪೂರ್ವದ್ವಾರವನ್ನು ಬಂದ್‌ ಮಾಡಿದರು. ಅಲ್ಲದೆ, ಹೈಕೋರ್ಟ್‌ ಮತ್ತು ವಿಧಾನಸೌಧದ ನಡುವಿನ ರಸ್ತೆಯುದ್ದಕ್ಕೂ ಜಮಾಯಿಸಿದರು. ಪರಿಣಾಮಸ್ವಾತಂತ್ರ್ಯ ಉದ್ಯಾನ, ಆನಂದ್ ರಾವ್ ವೃತ್ತ, ಕಾರ್ಪೋರೇಷನ್ ವೃತ್ತದಲ್ಲಿ ಸಂಪೂರ್ಣ ಸಂಚಾರ ದಟ್ಟಣೆ ಉಂಟಾಯಿತು.

ಮೆಟ್ರೊದಲ್ಲಿ ತೆರಳಿದ ಡಿಕೆಶಿ

ಸಂಚಾರ ದಟ್ಟಣೆಯ ಬಿಸಿ ಸಚಿವ ಡಿ.ಕೆ. ಶಿವಕುಮಾರ ಅವರಿಗೂ ತಟ್ಟಿತು. ವಿಧಾನಸೌಧದಲ್ಲಿ ಇದ್ದ ಅವರು ಪ್ರಜಾಪ್ರತಿನಿಧಿ ಕೋರ್ಟ್‌ಗೆ ತೆರಳಬೇಕಿತ್ತು.

ರಸ್ತೆಯಲ್ಲಿ ಸಂಚಾರ ಬಂದ್‌ ಆಗಿದ್ದರಿಂದ, ಕಾರು ಇಳಿದು ವಿಧಾನಸೌಧ ಮೆಟ್ರೊ ನಿಲ್ದಾಣಕ್ಕೆ ಬಂದ ಅವರು, ಸೆಂಟ್ರಲ್‌ ಕಾಲೇಜಿನವರೆಗೆ ಮೆಟ್ರೊದಲ್ಲಿ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT