ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮ–ಸಡಗರದಿಂದ ಆಚರಿಸಲು ನಗರದ ಜನತೆ ಸಿದ್ಧವಾಗಿದ್ದು, ಬುಧವಾರ ಬೆಳಿಗ್ಗೆಯಿಂದಲೇ ಹೂವು ಮತ್ತು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು. ಬೆಲೆ ಏರಿಕೆ ಬಿಸಿಯ ನಡುವೆಯೂ ಖರೀದಿ ಜೋರಾಗಿತ್ತು.
ವರಮಹಾಲಕ್ಷ್ಮಿ ಹಬ್ಬದಂದು ಮನೆಗಳಲ್ಲಿ ಲಕ್ಷ್ಮಿ ಮೂರ್ತಿಗಳನ್ನು ಕೂರಿಸಿ, ಪೂಜಿಸುವುದು ವಾಡಿಕೆ. ಈ ವೇಳೆ ಅಲಂಕಾರಕ್ಕಾಗಿ ತರಹೇವಾರಿ ಹೂಗಳು ಮತ್ತು ಹಣ್ಣುಗಳನ್ನು ಬಳಸುತ್ತಾರೆ. ಹಾಗಾಗಿ, ಪ್ರತಿ ವರ್ಷದಂತೆ ಈ ಬಾರಿಯೂ ಹೂವು ಮತ್ತು ಹಣ್ಣಿನ ದರಗಳಲ್ಲಿ ಭಾರಿ ಏರಿಕೆಯಾಗಿದೆ.
ಹೂ ದರ ಗಗನಮುಖಿ: ‘ಈ ಬಾರಿ ಹೂವಿನ ಬೇಡಿಕೆ ಹೆಚ್ಚಿದ್ದು, ದರವೂ ದುಬಾರಿಯಾಗಿದೆ. ಈ ಹಬ್ಬದಲ್ಲೇ ಹೂವಿನ ಬೆಳೆಗಾರರು ಮತ್ತು ವರ್ತಕರು ಲಾಭ ಕಾಣುತ್ತಾರೆ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕರಾದ ಮಂಜುನಾಥ್ ಮತ್ತು ಪ್ರದೀಪ್ ಮಾಹಿತಿ ನೀಡಿದರು.
‘ಮಲ್ಲಿಗೆ ಹೂವಿನ ದರ ಕೆ.ಜಿ.ಗೆ ₹1,600 ಮತ್ತು ಕನಕಾಂಬರದ ಗರಿಷ್ಠ ದರ ಪ್ರತಿ ಕೆ.ಜಿ.ಗೆ ₹4 ಸಾವಿರ ತಲುಪಿದೆ. ಪ್ರತಿ ಕೆ.ಜಿಗೆ ಸೇವಂತಿಗೆ ₹300, ಗುಲಾಬಿ ₹350, ಸುಗಂಧರಾಜ ₹400, ಚೆಂಡು ಹೂ ₹80ರಂತೆ ಮಾರಾಟವಾಗುತ್ತಿವೆ. ಹಿಂದಿನ ದಿನಗಳಿಗೆ ಹೋಲಿಸಿದರೆ ವರ ಮಹಾಲಕ್ಷ್ಮಿ ಹಬ್ಬ ಸಮೀಪಿಸಿದ ಬಳಿಕ ಹೂವುಗಳ ದರದಲ್ಲಿ ಭಾರಿ ಏರಿಕೆಯಾಗಿದೆ’ ಎಂದು ತಿಳಿಸಿದರು.
ಬೇಡಿಕೆ ಹೆಚ್ಚಾದಂತೆ ಹಣ್ಣುಗಳ ದರದಲ್ಲೂ ಸ್ವಲ್ಪ ಏರಿಕೆಯಾಗಿದೆ. ತರಕಾರಿ ದರಗಳು ಸ್ಥಿರವಾಗಿವೆ. ಸೊಪ್ಪಿನ ಬೆಲೆಯೂ ಕಡಿಮೆಯಾಗಿದೆ.
‘ಬೆಂಗಳೂರು ಗ್ರಾಮಾಂತರ, ತುಮಕೂರು, ಕುಣಿಗಲ್, ಗೌರಿಬಿದನೂರು, ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಿಂದ ನಗರದ ಮಾರುಕಟ್ಟೆಗಳಿಗೆ ಹೂವು ಪೂರೈಕೆಯಾಗುತ್ತದೆ. ತಮಿಳುನಾಡಿನ ವಿವಿಧೆಡೆಯಿಂದಲೂ ಹೂವು ಪೂರೈಕೆಯಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಮಳೆ ಇಳಿಮುಖವಾಗಿರುವುದರಿಂದ ಹೂವುಗಳ ಆವಕ ಹೆಚ್ಚಿದೆ. ಜೊತೆಗೆ ತಾಜಾ ಹೂವಿನ ಪೂರೈಕೆ ಆಗುತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವ್ಯಾಪಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.