ಭಾನುವಾರ, ಅಕ್ಟೋಬರ್ 25, 2020
22 °C

ಮಳೆಯಿಂದ ಹಾನಿ: ಬೀನ್ಸ್, ಕ್ಯಾರೆಟ್ ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ತರಕಾರಿ ಬೆಳೆಗಳಿಗೆ ಭಾರಿ ಹಾನಿಯಾಗಿವೆ. ಮಾರುಕಟ್ಟೆಗಳಲ್ಲಿ ಆವಕ ಪ್ರಮಾಣ ಕಡಿಮೆ ಆಗಿರುವುದರಿಂದ ಬೀನ್ಸ್ ಹಾಗೂ ಕ್ಯಾರೆಟ್ ದರ ₹100ರ ಗಡಿಯಲ್ಲಿದೆ.

ಕಳೆದ ವಾರ ತರಕಾರಿಗಳ ದರ ಕಡಿಮೆ ಇತ್ತು. ಗುಣಮಟ್ಟದ ಬೀನ್ಸ್ ಪ್ರತಿ ಕೆ.ಜಿಗೆ ಗರಿಷ್ಠ ₹ 60ರಂತೆ ಮಾರಾಟವಾಗುತ್ತಿತ್ತು. ಆದರೆ, ಸಗಟು ಮಾರುಕಟ್ಟೆಯಲ್ಲೇ ಕೆ.ಜಿ.ಗೆ ₹90ರ ಮೇಲ್ಪಟ್ಟು ಶುಕ್ರವಾರ ಮಾರಾಟ ಆಗಿದೆ. ಪ್ರತಿ ಕೆ.ಜಿ.ಗೆ ₹ 70ರಷ್ಟಿದ್ದ ಕ್ಯಾರೆಟ್ ದರ ಈಗ ₹100ಕ್ಕೆ ಏರಿದೆ. ಟೊಮೆಟೊ ಹಾಗೂ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ತಲಾ ₹10ರಂತೆ ಏರಿಕೆಯಾಗಿದೆ.

ಬಟಾಣಿ, ಬೆಳ್ಳುಳ್ಳಿ, ಬೀನ್ಸ್, ಕ್ಯಾರೆಟ್, ಟೊಮೆಟೊ ಹಾಗೂ ಈರುಳ್ಳಿ ದುಬಾರಿಯಾಗಿವೆ. ಮೂಲಂಗಿ, ಎಲೆಕೋಸು, ಆಲೂಗಡ್ಡೆ, ಬೀಟ್‍ರೂಟ್ ದರ ಕಡಿಮೆ ಇವೆ.

'ಮಳೆಗಾಲದಲ್ಲಿ ತರಕಾರಿ ಬೆಳೆಗಳಿಗೆ ಹೆಚ್ಚು ಹಾನಿಯಾಗುತ್ತದೆ. 15 ದಿನಗಳಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಯಿತು. ಇದರಿಂದ ಬಹುತೇಕ ತರಕಾರಿಗಳಿಗೆ ಹಾನಿಯಾಗಿದೆ. ಒಂದು ವಾರದಿಂದ ಗುಣಮಟ್ಟದ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಹಾಗಾಗಿ, ಕ್ಯಾರೆಟ್, ಬೀನ್ಸ್ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ' ಎಂದು ಯಶವಂತಪುರ ಎಪಿಎಂಸಿ ಪ್ರಾಂಗಣದ ಕೆಂಪೇಗೌಡ ತರಕಾರಿ ಮಾರುಕಟ್ಟೆಯ ಅಧ್ಯಕ್ಷ ಗೋವಿಂದಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.

'ಕ್ಯಾರೆಟ್ ಹಾಗೂ ಟೊಮೆಟೊ ಬೇಗ ಕೊಳೆಯುವ ಸ್ಥಿತಿ ತಲುಪುತ್ತವೆ. ಹಾಗಾಗಿ, ಹೆಚ್ಚು ದಿನಗಳ ಕಾಲ ದಾಸ್ತಾನು ಮಾಡಿಕೊಳ್ಳಲು ಆಗುವುದಿಲ್ಲ. ಈಗ ನಾಟಿ ಕ್ಯಾರೆಟ್ ಕೊರತೆ ಉಂಟಾಗಿದೆ. ಒಂದು ತಿಂಗಳವರೆಗೆ ತರಕಾರಿ ದರಗಳು ಮತ್ತಷ್ಟು ಏರುವ ನಿರೀಕ್ಷೆ ಇದೆ' ಎಂದು ದಾಸನಪುರ ಎಪಿಎಂಸಿ ಮಾರುಕಟ್ಟೆಯ ತರಕಾರಿ ಮತ್ತು ಸೊಪ್ಪಿನ ವ್ಯಾಪಾರಿ ಕುಮಾರ್ ವಿವರಿಸಿದರು.

'ರಾಜ್ಯದಲ್ಲಿ ಬೆಳೆದಿರುವ ಈರುಳ್ಳಿ ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿಲ್ಲ. ಮಹಾರಾಷ್ಟ್ರದಿಂದ ಆವಕ ಹೆಚ್ಚಾಗಿದೆ. ಹೊಸ ಕೊಯ್ಲಿನ ನಂತರ ನಿರೀಕ್ಷಿತ ಪ್ರಮಾಣದ ಈರುಳ್ಳಿ ಪೂರೈಕೆಯಾದರೆ, ಬೆಲೆ ಸ್ಥಿರವಾಗಲಿದೆ. ಇಲ್ಲದಿದ್ದರೆ, ದರ ಇನ್ನಷ್ಟು ಏರಿಕೆಯಾಗಲಿದೆ' ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯಶಂಕರ್ ತಿಳಿಸಿದರು. 

ಸೊಪ್ಪಿನ ದರ ತುಸು ಏರಿಕೆ: ಪ್ರತಿ ಕಟ್ಟಿಗೆ ₹10ರ ಆಸುಪಾಸಿನಲ್ಲಿದ್ದ ಸೊಪ್ಪಿನ ದರಗಳು ತುಸು ಏರಿಕೆ ಕಂಡಿವೆ. ಕೊತ್ತಂಬರಿ ಸೊಪ್ಪು ದುಬಾರಿಯಾಗಿದ್ದು, ಸಗಟು ದರದಲ್ಲಿ ಪ್ರತಿ ಕಟ್ಟಿಗೆ ₹20ರಂತೆ ಮಾರಾಟವಾಗುತ್ತಿದೆ. ಮೆಂತ್ಯೆ, ಪಾಲಕ್, ಸಬ್ಬಕ್ಕಿ, ದಂಟಿನ ಸೊಪ್ಪುಗಳ ದರವೂ ಏರಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು