ಗುರುವಾರ , ನವೆಂಬರ್ 21, 2019
21 °C
ತಣ್ಣಗಾಗದ ಹಿರಿಯರ ಕೋಪ

ವೇಣುಗೋಪಾಲ್ ಭೇಟಿಯಿಂದ ದೂರ ಉಳಿದ ಕಾಂಗ್ರೆಸ್ ಮುಖಂಡರು

Published:
Updated:

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸೆಟೆದು ನಿಂತಿರುವ ಕಾಂಗ್ರೆಸ್ ಹಿರಿಯ ಮುಖಂಡರು, ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.

ಕೆ‍ಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹಿರಿಯ ಮುಖಂಡರ ಭೇಟಿಗೆ ಸಮಯ ನಿಗದಿಪಡಿಸಿದ್ದರು. ಆದರೆ ಬಹುತೇಕ ನಾಯಕರು ಭೇಟಿಯಿಂದ ದೂರವೇ ಉಳಿದು ತಮ್ಮ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ವೇಣುಗೋಪಾಲ್ ನೇತೃತ್ವದಲ್ಲಿ ಮಂಗಳವಾರ ಉಪಚುನಾವಣೆ ಸಿದ್ಧತೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಿತು. ಸಭೆ ನಂತರ ಸಂಜೆ ಕುಮಾರಕೃಪ ಅತಿಥಿ ಗೃಹದಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲಾಗುವುದು ಎಂದು ಅವರು ಹೇಳಿದ್ದರು. ಸಭೆ ನಂತರ ಅವರು ಅತಿಥಿಗೃಹದಲ್ಲಿ ಹಿರಿಯ ನಾಯಕರಿಗಾಗಿ ಕಾದು ಕುಳಿತರು. ಸಿದ್ದರಾಮಯ್ಯ ಬೆಂಬಲಿಗರು ಮಾತ್ರ ಭೇಟಿಯಾಗಿ ಚರ್ಚಿಸಿದರು. ಪ್ರಮುಖ ನಾಯಕರು ಭೇಟಿ ಮಾಡಲಿಲ್ಲ ಎನ್ನಲಾಗಿದೆ.

‘ಸಿದ್ದರಾಮಯ್ಯ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಬಾರದು ಎಂದು ಹೈಕಮಾಂಡ್ ಮೇಲೆ ಹಿರಿಯರು ಒತ್ತಡ ತಂದಿದ್ದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಪಕ್ಷದ ಹಿನ್ನಡೆಗೆ ಅವರೇ ಪ್ರಮುಖ ಕಾರಣ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಬಿಟ್ಟು ಬೇರೆಯವರನ್ನು ನೇಮಕ ಮಾಡಬೇಕು. ಅವರ ಅಣತಿಯಂತೆ ನಡೆಯುತ್ತಿರುವ ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸಬೇಕು’ ಎಂದು ಮನವಿ ಮಾಡಿದ್ದರು.

ತಮ್ಮ ಮಾತಿಗೆ ಮನ್ನಣೆ ನೀಡದೆ ಸಿದ್ದರಾಮಯ್ಯ ಅವರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಿದ್ದಕ್ಕೆ n ಕೋಪಗೊಂಡಿದ್ದರು. ಹಾಗಾಗಿ ವೇಣುಗೋಪಾಲ್ ಭೇಟಿಯಿಂದ ದೂರ ಉಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿಗೆ ಸಿದ್ದರಾಮಯ್ಯ:

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

ಪ್ರತಿಕ್ರಿಯಿಸಿ (+)