ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಬೆತ್ತಲೆ ವಿಡಿಯೊ ಕರೆ ಮಾಡಿ ವಕೀಲರಿಗೆ ಬ್ಲ್ಯಾಕ್‌ಮೇಲ್

Published 13 ಜುಲೈ 2023, 15:37 IST
Last Updated 13 ಜುಲೈ 2023, 15:37 IST
ಅಕ್ಷರ ಗಾತ್ರ

ಬೆಂಗಳೂರು: ಕಕ್ಷಿದಾರರ ಹೆಸರಿನಲ್ಲಿ ವಿಡಿಯೊ ಕರೆ ಮಾಡಿ ಬೆತ್ತಲಾಗಿದ್ದ ಯುವತಿಯೊಬ್ಬರು ವಕೀಲರ ವಿಡಿಯೊ ಚಿತ್ರೀಕರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಥಳೀಯ ನಿವಾಸಿಯಾಗಿರುವ ವಕೀಲರೊಬ್ಬರು ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳಾದ ಕವಿತಾ ಶರ್ಮಾ, ವಿಕ್ರಮ್ ರಾಥೋರೆ ಹಾಗೂ ರಾಹುಲ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜೂನ್ 26ರಂದು ರಾತ್ರಿ ಕವಿತಾ ಶರ್ಮಾ ಹೆಸರಿನಲ್ಲಿ ವಕೀಲರಿಗೆ ಕರೆ ಮಾಡಿದ್ದ ಯುವತಿ, ‘ನನ್ನದೊಂದು ಮೊಕದ್ದಮೆ ಇದೆ. ನಿಮ್ಮ ಜೊತೆ ಮಾತನಾಡಬೇಕು’ ಎಂದಿದ್ದರು. ಮರುದಿನ ಕಚೇರಿಗೆ ಬಂದು ಭೇಟಿಯಾಗುವಂತೆ ದೂರುದಾರ ಹೇಳಿದ್ದರು.’

‘ಜೂನ್ 27ರಂದು ಬೆಳಿಗ್ಗೆ ವಿಡಿಯೊ ಕರೆ ಮಾಡಿದ್ದ ಯುವತಿ, ಸಲುಗೆಯಿಂದ ಮಾತನಾಡಿದ್ದರು. ಏಕಾಏಕಿ ಬಟ್ಟೆಗಳನ್ನು ಬಿಚ್ಚಿ ಬೆತ್ತಲಾಗಿದ್ದರು. ಯುವತಿ ವರ್ತನೆ ಗಮನಿಸಿ ಅನುಮಾನಗೊಂಡಿದ್ದ ವಕೀಲ, ಕರೆ ಕಡಿತಗೊಳಿಸಿದ್ದರು. ಇದೇ ಸಂದರ್ಭದಲ್ಲಿ ಯುವತಿ, ತನ್ನ ಬೆತ್ತಲೆ ವಿಡಿಯೊ ಜೊತೆ ವಕೀಲರ ವಿಡಿಯೊವನ್ನು ಚಿತ್ರೀಕರಿಸಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಸಿಬಿಐ ಅಧಿಕಾರಿ ಹೆಸರಿನಲ್ಲಿ ಕರೆ

‘ಜುಲೈ 1ರಂದು ವಕೀಲರಿಗೆ ಕರೆ ಮಾಡಿದ್ದ ಆರೋಪಿ ವಿಕ್ರಮ್, ‘ನಾನು ಸಿಬಿಐ ಅಧಿಕಾರಿ. ಲೈಂಗಿಕ ಕಿರುಕುಳ ಸಂಬಂಧ ಯುವತಿಯೊಬ್ಬರು ನಿಮ್ಮ ಮೇಲೆ ದೂರು ನೀಡಿದ್ದಾರೆ. ನಿಮ್ಮ ಹಾಗೂ ಯುವತಿಯ ಬೆತ್ತಲೆ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿಡಿಯೊ ತೆಗೆಸಲು ರಾಹುಲ್‌ ಶರ್ಮಾ ಎಂಬಾತನನ್ನು ಸಂಪರ್ಕಿಸಿ’ ಎಂದಿದ್ದ. ಬಳಿಕ, ರಾಹುಲ್‌ಗೆ ದೂರುದಾರ ಕರೆ ಮಾಡಿದ್ದರು.’

‘ಯೂಟ್ಯೂಬ್‌ನಲ್ಲಿರುವ ಫೋಟೊ ಹಾಗೂ ವಿಡಿಯೊ ತೆಗೆಯಲು ₹ 11,500 ನೀಡುವಂತೆ ರಾಹುಲ್ ಒತ್ತಾಯಿಸಿದ್ದ. ತನ್ನ ಬ್ಯಾಂಕ್ ಖಾತೆ ವಿವರ ಸಹ ನೀಡಿದ್ದ. ದೂರುದಾರ ಹಣ ಹಾಕಿರಲಿಲ್ಲ. ಹಣ ಹಾಕುವಂತೆ ಆರೋಪಿ ಹಲವು ಬಾರಿ ಕರೆ ಮಾಡಿ ಪೀಡಿಸಿದ್ದ. ಇದೊಂದು ವ್ಯವಸ್ಥಿತ ಜಾಲದ ಕೃತ್ಯವೆಂಬುದು ತಿಳಿಯುತ್ತಿದ್ದಂತೆ ವಕೀಲ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT