ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಠಾಣೆ ಪಿಎಸ್‌ಐಗೆ ಹೈಕೋರ್ಟ್ ತರಾಟೆ

Last Updated 10 ಡಿಸೆಂಬರ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ನೆಟ್ಟಗೆ ಪೊಲೀಸ್ ಕೆಲಸ ಮಾಡೋದು ಬಿಟ್ಟು ಬೇರೆ ಏನೇನೊ ಮಾಡ್ತಾರೆ’ ಎಂದು ವಿಜಯನಗರ ಠಾಣೆ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ವಿರುದ್ಧ ಹೈಕೋರ್ಟ್‌ ಕಿಡಿಕಾರಿದೆ.

‘ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ವಕೀಲರು ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ದಾಖಲಾತಿ ನೀಡಬೇಕು’ ಎಂದು ವಕೀಲ ಬಿ.ಸುಧಾಕರ್ ಅವರಿಗೆ, ವಿಜಯನಗರ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಸುಧಾಕರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿ ದಾರರ ಪರ ವಕೀಲ ರವಿ ವಾದ ಮಂಡಿಸಿ, ‘ಇದೊಂದು ಸ್ಥಿರಾಸ್ತಿ ಪ್ರಕರಣ. ಇದರಲ್ಲಿ ಅರ್ಜಿದಾರರರು ದಾನಪತ್ರ ತಯಾರಿಸಲು ವೃತ್ತಿಪರ ವಕೀಲ ರಾಗಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ಇದೇ 7ರಂದು ನೋಟಿಸ್ ನೀಡಿ ಸಮಗ್ರ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ’ ಎಂದು ಆಕ್ಷೇಪಿಸಿದರು.

‘ಪೊಲೀಸ್‌ ಅಧಿಕಾರಿಯ ಈ ಕ್ರಮ ಏಕಪಕ್ಷೀಯ ಮತ್ತು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಿರುವುದುಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ನೋಟಿಸ್‌ ಅನುಸಾರ ಯಾವುದೇ ಕ್ರಮ ಕೈಗೊಳ್ಳದಂತೆ ತಡೆ ನೀಡಬೇಕು’ ಎಂದು ಕೋರಿದರು.

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು ಪೊಲೀಸ್‌ ಅಧಿಕಾರಿ ವಿರುದ್ಧ ಕೆಂಡಾಮಂಡ ಲವಾದರು. ‘ಯಾರ‍್ರೀ ಅದು, ಸಿವಿಲ್‌ ಪ್ರಕರಣದಲ್ಲಿ ವಕೀಲರಿಗೆ ಈ ರೀತಿ ನೋಟಿಸ್ ಕೊಡಲು ಅವರಿಗೇನು ಅಧಿಕಾರವಿದೆ.
ನಾಳೆ ಬೆಳಿಗ್ಗೆ ಅವರನ್ನು ಕೋರ್ಟ್‌ಗೆ ಕರೆಯಿಸಿ’ ಎಂದು ಸರ್ಕಾರದ ಪರ ವಕೀಲರಿಗೆ ಆದೇಶಿಸಿದರು.

ವಿಚಾರಣೆಯನ್ನು ಡಿ. 11ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರ ಆರ್.ಅನಿಲ್‌ ಕುಮಾರ್ ವಕಾಲತ್ತು ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT