ಗುರುವಾರ , ಡಿಸೆಂಬರ್ 8, 2022
18 °C
ಆರಗ, ಚರಂತಿಮಠ ಸೇರಿ ಆರು ಮಂದಿಗೆ ಬದಲಿ ನಿವೇಶನ ಹಂಚಿಕೆ ಪ್ರಕರಣ l ಸುಪ್ರೀಂಕೋರ್ಟಿಗೆ ಪ್ರಮಾಣ ಪತ್ರ

ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆ: ಲೋಪ ಒಪ್ಪಿಕೊಂಡ ಬಿಡಿಎ

ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

ನವದೆಹಲಿ: ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಮುಖಂಡ ಬಸವರಾಜ ಪಾಟೀಲ ಸೇಡಂ ಸೇರಿ ದಂತೆ 6 ಮಂದಿಗೆ ಬದಲಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಬದಲಿ ನಿವೇಶನ ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆ ಆಗಿರುವುದನ್ನು ಒಪ್ಪಿಕೊಂಡಿದೆ.

ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ರಾಜಕಾರಣಿಗಳಿಗೆ ಕಾನೂನುಬಾಹಿರವಾಗಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಈ ಬದಲಿ ನಿವೇಶನಗಳನ್ನು ಕಾನೂನು ಪ್ರಕ್ರಿಯೆಗಳ ಅನುಸಾರ ವಾಪಸ್‌ ಪಡೆಯುವಂತೆ ಪ್ರಾಧಿಕಾರಕ್ಕೆ ಅ. 11ರಂದು ನಿರ್ದೇಶನ ನೀಡಿತ್ತು. ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಿ ಈ ಸೂಚನೆ ನೀಡಿತ್ತು.

‘ಸುಪ್ರೀಂಕೋರ್ಟ್‌ 2021ರ ಅಕ್ಟೋಬರ್‌ನಲ್ಲಿ ನೀಡಿರುವ ಆದೇಶ ವನ್ನು ಉಲ್ಲಂಘಿಸಿ ಪ್ರಾಧಿಕಾರವು ಆರ್‌ಎಂವಿ ಎರಡನೇ ಹಂತದಲ್ಲಿ ರಾಜಕಾರಣಿಗಳಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದು 1984ರ ನಿವೇಶನ ಹಂಚಿಕೆ ನಿಯಮದ ಸೆಕ್ಷನ್‌ 11 ಎ ಯ ಉಲ್ಲಂಘನೆ’ ಎಂದು ಸಮಿತಿ ವರದಿ ಸಲ್ಲಿಸಿತ್ತು. ‘ಒಂದು ನಿವೇಶನದ ಹಂಚಿಕೆ ಪತ್ರವನ್ನು ಈಗಾಗಲೇ ರದ್ದುಪಡಿಸಲಾಗಿದ್ದು, ಉಳಿದ 5 ನಿವೇಶನಗಳನ್ನು ವಾಪಸ್‌ ಪಡೆಯಲು ನೋಟಿಸ್‌ ನೀಡಲಾಗಿದೆ’ ಎಂದು ಬಿಡಿಎ ಆಯುಕ್ತ ಜಿ.ಕುಮಾರ್‌ ನಾಯ್ಕ್ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. 

ಬದಲಿ ನಿವೇಶನ: ಹಂಚಿಕೆ ಆಗಿದ್ದು ಹೇಗೆ?

ಗೌತಮ್‌ ಚಂದ್‌ ಜೈನ್‌: ಬನಶಂಕರಿ ಎರಡನೇ ಹಂತದಲ್ಲಿರುವ ನಿವೇಶನ ಸಂಖ್ಯೆ 1796 ಅನ್ನು ಪ್ರಾಧಿಕಾರವು ಶಾಂತಮಣಿ ಎಂಬುವರಿಗೆ ಹಂಚಿಕೆ ಮಾಡಿತ್ತು. ಅವರು ಅದನ್ನು 1984ರಲ್ಲಿ ಸುಲೋಚನಾ ದೇವಿ ಜಿಂದಾಲ್‌ ಎಂಬುವವರಿಗೆ ಮಾರಿದ್ದರು. ಬಳಿಕ ಅವರು ಗೌತಮ್‌ ಚಂದ್ ಜೈನ್‌ ಅವರಿಗೆ ಕ್ರಯಪತ್ರ ಮಾಡಿಕೊಟ್ಟಿದ್ದರು. ಜೈನ್‌ ಅವರು ಬದಲಿ ನಿವೇಶನಕ್ಕಾಗಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಜೈನ್‌ ಅವರಿಗೆ ಯಾವುದೇ ಕ್ರಯಪತ್ರ ಹಾಗೂ ಸ್ವಾಧೀನ ಪ್ರಮಾಣಪತ್ರ ಮಾಡಿಕೊಟ್ಟಿಲ್ಲ. ಅವರಿಗೆ ಹಂಚಿಕೆ ಪ್ರಮಾಣಪತ್ರವನ್ನಷ್ಟೇ ಪ್ರಾಧಿಕಾರ ನೀಡಿದೆ ಎಂದು ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯು ವರದಿಯಲ್ಲಿ (ಜೆಸಿಸಿ ಸಮಿತಿ) ಉಲ್ಲೇಖಿಸಿದೆ. ಈ ಹಂಚಿಕೆ ಪ್ರಮಾಣಪತ್ರವನ್ನು ಅಕ್ಟೋಬರ್‌ 18ರಂದು ರದ್ದುಪಡಿಸಲಾಗಿದೆ. ಈ ಬಗ್ಗೆ ಜೈನ್ ಅವರಿಗೆ ಮಾಹಿತಿ ನೀಡಲಾಗಿದೆ. 

ಆರಗ ಜ್ಞಾನೇಂದ್ರ: ಆರಗ ಜ್ಞಾನೇಂದ್ರ ಅವರಿಗೆ ಎಚ್‌ಎಸ್‌ಆರ್ ಬಡಾವಣೆಯ ಸೆಕ್ಷರ್ 3ರಲ್ಲಿ 50 ಬಿ ಸಂಖ್ಯೆಯ ನಿವೇಶನ ನೀಡಲಾಗಿತ್ತು. ಇದಕ್ಕೆ 2007ರಲ್ಲಿ ಕ್ರಯಪತ್ರ ಮಾಡಿಕೊಡಲಾಗಿತ್ತು. 2009ರಲ್ಲಿ ಈ ಕ್ರಯಪತ್ರವನ್ನು ರದ್ದುಪಡಿಸ ಲಾಗಿತ್ತು. ಎಸ್‌.ಎ.ಮಧುಮತಿ ಎಂಬುವರಿಗೆ ಈ ನಿವೇಶನವನ್ನು ಹಂಚಿಕೆ ಮಾಡಿದ್ದರಿಂದ ಆರಗ ಅವರ ಕ್ರಯಪತ್ರವನ್ನು ರದ್ದುಪಡಿಸಲಾಗಿತ್ತು. ಸ್ವಲ್ಪ ಸಮಯದ ಬಳಿಕ ಮಧುಮತಿ ಅವರ ಕ್ರಯಪತ್ರವನ್ನು ರದ್ದುಗೊಳಿಸಿ ಉತ್ತೇಜನ ನಿವೇಶನದ ರೂಪದಲ್ಲಿ ದೊಡ್ಡನಾಗಯ್ಯ ಎಂಬುವರಿಗೆ ಇದನ್ನು ಹಂಚಿಕೆ ಮಾಡಲಾಗಿತ್ತು.

ಜ್ಞಾನೇಂದ್ರ ಅವರಿಗೆ ಎಚ್‌ಎಸ್‌ಆರ್‌ ಸೆಕ್ಷರ್‌ ಮೂರರ 110/ಬಿ ನಿವೇಶನಕ್ಕೆ 2009ರಲ್ಲಿ ಕ್ರಯಪತ್ರ ಮಾಡಿಕೊಡಲಾಗಿತ್ತು. ಪ್ರಾಧಿಕಾರವು 2021ರ ಡಿಸೆಂಬರ್‌ 8ರಂದು ಈ ಹಂಚಿಕೆಯನ್ನು ರದ್ದು ಮಾಡಿತ್ತು. ಬದಲಿಯಾಗಿ ಆರ್‌ಎಂವಿ ಎರಡನೇ ಹಂತದ ನಿವೇಶನ ಸಂಖ್ಯೆ 2 ಅನ್ನು ನೀಡಲಾಗಿತ್ತು. ಅದಕ್ಕೆ ಡಿಸೆಂಬರ್‌ 9ರಂದು ಸ್ವಾಧೀನ ಪ್ರಮಾಣಪತ್ರ
ಮಾಡಿಕೊಡಲಾಗಿತ್ತು.

ಈ ಹಂಚಿಕೆಯು ಸುಪ್ರೀಂ ಕೋರ್ಟ್‌ ಆದೇ ಶದ ಉಲ್ಲಂಘನೆ ಎಂದು ಸಮಿತಿ ವರದಿ ನೀಡಿದೆ. ಈ ನಿವೇಶನವನ್ನು ಮರಳಿಸುವಂತೆ ಆರಗ ಅವರಿಗೆ ಅಕ್ಟೋಬರ್ 18ರಂದು ಪ್ರಾಧಿಕಾರ ನೋಟಿಸ್‌ ನೀಡಿದೆ.

ಬಸವರಾಜ ಪಾಟೀಲ ಸೇಡಂ: ಸೇಡಂ ಅವರಿಗೆ ಎಚ್ಎಸ್ಆರ್ ಸೆಕ್ಷರ್ 3ರಲ್ಲಿ ನಿವೇಶನ ಸಂಖ್ಯೆ 1100 ಅನ್ನು ನೀಡಲಾಗಿತ್ತು. ಈ ಹಂಚಿಕೆಯನ್ನು 2011ರಲ್ಲಿ ರದ್ದುಪಡಿಸಲಾಗಿತ್ತು. ಸೇಡಂ ಅವರಿಗೆ ಆರ್‌ಎಂವಿ ಎರಡನೇ ಹಂತದಲ್ಲಿ (ನಿವೇಶನ ಸಂಖ್ಯೆ1) 2001ರಲ್ಲಿ ಬದಲಿ ನಿವೇಶನ ನೀಡಿತ್ತು. ಬಳಿಕ ಅವರಿಗೆ ನಿವೇಶನ 6ನ್ನು ಹಂಚಿಕೆ ಮಾಡಲಾಗಿತ್ತು. ಈ ಹಂಚಿಕೆಯನ್ನು 2022ರ ಏಪ್ರಿಲ್‌ 19ರಂದು ರದ್ದುಪಡಿಸಲಾಗಿತ್ತು ಈಗ ಆ ನಿವೇಶನ ಸೇಡಂ ಅವರ ಸ್ವಾಧೀನದಲ್ಲಿ ಇಲ್ಲ. ಅವರಿಗೆ ಅದೇ ಬಡಾವಣೆಯಲ್ಲಿ ನಿವೇಶನ ಸಂಖ್ಯೆ 8 ಅನ್ನು ಏಪ್ರಿಲ್‌ 19ರಂದು ನೀಡಲಾಗಿತ್ತು. ಈ ನಿವೇಶನ ಮರಳಿಸುವಂತೆ ಅಕ್ಟೋಬರ್‌ 18ರಂದು ನೋಟಿಸ್‌ ನೀಡಲಾಗಿದೆ. 

ವೀರಣ್ಣ ಚರಂತಿಮಠ: ಚರಂತಿಮಠ ಅವರಿಗೆ ಎಚ್‌ಎಸ್‌ಆರ್ ಸೆಕ್ಷರ್‌ 3ರಲ್ಲಿ 2400 ಅಡಿಯ ನಿವೇಶನ (ನಿವೇಶನ ಸಂಖ್ಯೆ 46/ಬಿ) ಹಂಚಿಕೆ ಮಾಡಲಾಗಿತ್ತು ಎಂದು ಜೆಸಿಸಿ ಸಮಿತಿ ವರದಿ ಯಲ್ಲಿ ಉಲ್ಲೇಖಿಸಲಾಗಿದೆ. ದಾಖಲೆಗಳ ಪ್ರಕಾರ, ಈ ಹಂಚಿಕೆಯನ್ನು ರದ್ದುಪಡಿಸಿ ಜಿ.ಎನ್‌.ನರಸಿಂಹಮೂರ್ತಿ ಹಾಗೂ ಇತರರಿಗೆ 2013ರಲ್ಲಿ ಕ್ರಯಪತ್ರ ಮಾಡಿಕೊಡಲಾಗಿತ್ತು. ಚರಂತಿಮಠ ಅವರಿಗೆ ಆರ್‌ಎಂವಿ ಎರಡನೇ ಹಂತದಲ್ಲಿ ಬದಲಿ ನಿವೇಶನವನ್ನು (ನಿವೇಶನ ಸಂಖ್ಯೆ 3) 2011ರ ಏಪ್ರಿಲ್‌ 4ರಂದು ಹಂಚಿಕೆ ಮಾಡಲಾಗಿತ್ತು. ಸ್ವಾಧೀನ ಪ್ರಮಾಣಪತ್ರವನ್ನು ಏಪ್ರಿಲ್‌ 20ರಂದು ನೀಡಲಾಗಿತ್ತು. ಈ ಹಂಚಿಕೆಯನ್ನು ಪ್ರಾಧಿಕಾರವು 2022ರ ಫೆಬ್ರುವರಿ 3ರಂದು ರದ್ದುಪಡಿಸಿತು. ಅದರ ಎಲ್ಲ ದಾಖಲೆಗಳನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಿದ್ದಾರೆ.

ಅದೇ ಬಡಾವಣೆಯಲ್ಲಿ ಅದೇ ಅಳತೆಯ ನಿವೇಶನವನ್ನು (ಸಂಖ್ಯೆ 5) ಈ ವರ್ಷ ಫೆಬ್ರುವರಿ 3ರಂದು ಹಂಚಿಕೆ ಮಾಡಲಾಗಿದೆ ಎಂದು ಜೆಸಿಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ನಿವೇಶನ ಮರಳಿಸುವಂತೆ ಅಕ್ಟೋಬರ್‌ 18ರಂದು ನೋಟಿಸ್‌ ನೀಡಲಾಗಿದೆ. ಈ ನಿವೇಶನ ಹಂಚಿಕೆಯು ಸುಪ್ರೀಂ ಕೋರ್ಟ್‌ನ ಆದೇಶದ ಉಲ್ಲಂಘನೆ. ಒಂದು ವೇಳೆ, ಅವರು ನಿವೇಶನ ಮರಳಿಸದಿದ್ದರೆ ಅಗತ್ಯ ಕಾನೂನು ಕ್ರಮ
ಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ. 

ಡಾ.ಎಂ.ನಾಗರಾಜ್‌: ನಾಗರಾಜ್‌ ಅವರಿಗೆ ಬನಶಂಕರಿ ಆರನೇ ಹಂತದ 10ನೇ ಬ್ಲಾಕ್‌ ನಲ್ಲಿ 2400 ಅಡಿಯ (ನಿವೇಶನ ಸಂಖ್ಯೆ 960) ಜಿ ಕೆಟಗರಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಹಂಚಿಕೆ ಪ್ರಮಾಣಪತ್ರವನ್ನಷ್ಟೇ ನೀಡಲಾಗಿತ್ತು. ಅವರಿಗೆ ಕ್ರಯಪತ್ರ ಮಾಡಿಕೊಟ್ಟಿರಲಿಲ್ಲ. ಆದರೂ, ಈ ನಿವೇಶನವು 10 ವರ್ಷಕ್ಕೂ ಅಧಿಕ ಕಾಲ ಅವರ ಸ್ವಾಧೀನದಲ್ಲಿತ್ತು. ಜತೆಗೆ, ಅವರಿಗೆ ಆರ್‌ಎಂವಿ ಎರಡನೇ ಹಂತದಲ್ಲಿ ಬದಲಿ ನಿವೇಶನ
(ಸಂಖ್ಯೆ 17) ನೀಡಲಾಗಿತ್ತು ಎಂದು ಜೆಸಿಸಿ ವರದಿ ಹೇಳಿದೆ.

ಬಿಡಿಎ ದಾಖಲೆಗಳ ‍ಪ್ರಕಾರ, ನಾಗರಾಜ್‌ ಅವರಿಗೆ 10ನೇ ಬ್ಲಾಕ್‌ನಲ್ಲಿ 2009ರಲ್ಲಿ ನಿವೇಶನ ಕೊಡಲಾಗಿತ್ತು. ಕ್ರಯಪತ್ರ ಮಾಡಿಕೊಟ್ಟಿರಲಿಲ್ಲ. ಹಂಚಿಕೆ ಸೂಚನಾ ಪತ್ರವನ್ನು 2011ರಲ್ಲಿ ರದ್ದುಪಡಿಸಲಾಗಿತ್ತು. ಈ ನಿವೇಶನವನ್ನು ಬಿ.ಮುಕೇಶ್‌ ಕುಮಾರ್ ಎಂಬುವರಿಗೆ 2019ರಲ್ಲಿ ಹಂಚಿಕೆ ಮಾಡಲಾಗಿತ್ತು. 

ನಾಗರಾಜ್‌ ಅವರಿಗೆ ಆರ್‌ಎಂವಿ ಬಡಾವಣೆ ಯಲ್ಲಿ ನಿವೇಶನ ಸಂಖ್ಯೆ 5 ಅನ್ನು 2011ರ ಏಪ್ರಿಲ್‌ನಲ್ಲಿ ನೀಡಲಾಗಿತ್ತು. ಈ ಹಂಚಿಕೆಯನ್ನು 2022ರ ಏಪ್ರಿಲ್‌ 8ರಂದು ರದ್ದುಪಡಿಸಲಾಗಿತ್ತು. ಅವರು ಆ ನಿವೇಶನವನ್ನು ಮರಳಿಸಿದ್ದಾರೆ. ಅವರಿಗೆ ಬದಲಿ ನಿವೇಶನವನ್ನು (ಸಂಖ್ಯೆ 9) ಏಪ್ರಿಲ್‌ 8ರಂದು ನೀಡಲಾಗಿತ್ತು. ನಿವೇಶನ ಮರಳಿಸುವಂತೆ ಅಕ್ಟೋಬರ್ 18ರಂದು ನೋಟಿಸ್‌ ನೀಡಲಾಗಿದ್ದು, ಮರಳಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಕುಮಾರ್ ನಾಯ್ಕ್‌ ತಿಳಿಸಿದ್ದಾರೆ.

ಬಿ.ರಾಮರೆಡ್ಡಿ ಮತ್ತು ಆರ್.ಗೀತಾ: ಇವರಿಗೆ ಎಚ್‌ಎಸ್‌ಆರ್ ಬಡಾವಣೆಯ ಸೆಕ್ಷರ್‌ 6ರಲ್ಲಿ 2400 ಅಡಿಯ (ನಿವೇಶನ ಸಂಖ್ಯೆ 682) ಅನ್ನು 2009ರಲ್ಲಿ ಹಂಚಿಕೆ ಮಾಡಲಾಗಿತ್ತು ಎಂದು ದಾಖಲೆಗಳಲ್ಲಿ ಇದೆ. ಆದರೆ, ಎಂಜಿನಿಯರಿಂಗ್‌ ವಿಭಾಗ ಹಾಗೂ ನಗರ ಯೋಜನಾ ವಿಭಾಗಗಳಲ್ಲಿ ಪರಿಶೀಲನೆ ನಡೆಸಿದಾಗ, ಆ ಸಂಖ್ಯೆಯ ನಿವೇಶನವೇ ಇಲ್ಲ. ಈ ಬಡಾವಣೆಯಲ್ಲಿರುವ ಕೊನೆಯ ನಿವೇಶನದ ಸಂಖ್ಯೆ 630. ಹೀಗಾಗಿ, ಈ ಹಂಚಿಕೆಯನ್ನು 2022ರ ಜನವರಿ 19ರಂದು ರದ್ದುಪಡಿಸಲಾಗಿತ್ತು. ಅವರಿಗೆ ಆರ್‌ಎಂವಿ ಎರಡನೇ ಹಂತದಲ್ಲಿ ನಿವೇಶನ ಸಂಖ್ಯೆ 11ಕ್ಕೆ 2022ರ ಜನವರಿ 19ರಂದು ಕ್ರಯಪತ್ರ ಮಾಡಿಕೊಡಲಾಗಿತ್ತು. ಈ ನಿ್ವೇಶನ ಮರಳಿಸುವಂತೆ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಆಯುಕ್ತರು
ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು