ಭಾನುವಾರ, ಏಪ್ರಿಲ್ 11, 2021
29 °C

ಶಾಶ್ವತ ಮಂದಿರ ನಿರ್ಮಾಣ: ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಮ್ಮಿಕೊಂಡಿದ್ದ ನಿಧಿ ಸಂಗ್ರಹ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದಾಗಿ ಶಾಶ್ವತವಾಗಿ ಉಳಿಯುವಂತಹ ಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ’ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ರಾಷ್ಟ್ರ ಧರ್ಮ ಸಂಘಟನೆಯು ಲಾಲ್‌ಬಾಗ್ ಪಶ್ಚಿಮ ದ್ವಾರದ ಬಳಿ ನಾಣ್ಯಗಳಿಂದ ನಿರ್ಮಿಸಿರುವ ರಾಮ ಮಂದಿರದ ಪ್ರತಿಕೃತಿಯನ್ನು ಶನಿವಾರ ವೀಕ್ಷಿಸಿದ ಅವರು, ನಿಧಿ ಸಂಗ್ರಹ ಅಭಿಯಾನದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.

‘ಮಂದಿರ ನಿರ್ಮಾಣಕ್ಕೆ ದೇಶದಾದ್ಯಂತ ಹಮ್ಮಿಕೊಂಡಿದ್ದ ನಿಧಿ ಸಂಗ್ರಹ ಅಭಿಯಾನದಲ್ಲಿ ₹ 1,500 ಕೋಟಿ ಸಂಗ್ರಹವಾಗುವ ನಿರೀಕ್ಷೆಯನ್ನು ಹೊಂದಿದ್ದೆವು. ಆದರೆ, ಈಗಾಗಲೇ ₹ 2,100 ಕೋಟಿ ಸಂಗ್ರಹವಾಗಿದೆ. ಭಕ್ತಾದಿಗಳು ಸ್ವಯಂಪ್ರೇರಿತರಾಗಿ ಹಣ ನೀಡುತ್ತಿದ್ದಾರೆ. ಹೀಗಾಗಿ ₹ 2,500 ಕೋಟಿ ಸಂಗ್ರಹವಾಗುವ ಸಾಧ್ಯತೆಯಿದೆ. ಈ ಮಂದಿರಕ್ಕೆ ಎಲ್ಲರು ಕೈಲಾದ ಕೊಡುಗೆಯನ್ನು ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆ ಮಾತನಾಡಿ, ‘ನಿಧಿ ಸಂಗ್ರಹಕ್ಕೆ ರಾಜ್ಯದಲ್ಲಿ 20 ಸಾವಿರ ತಂಡಗಳನ್ನು ಗುರುತಿಸಲಾಗಿತ್ತು. 1.50 ಲಕ್ಷ ಕಾರ್ಯಕರ್ತರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸುಮಾರು ₹ 150 ಕೋಟಿ ದೇಣಿಗೆ ಸಂಗ್ರಹ ಮಾಡಿದ್ದಾರೆ. ಇನ್ನೂ ಹಲವರು ಚೆಕ್‌ ಮೂಲಕ ಹಣವನ್ನು ಸಂದಾಯ ಮಾಡುತ್ತಿದ್ದಾರೆ’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಎಲ್ಲರ ಆರಾಧ್ಯ ದೇವತೆಯಾಗಿರುವ ರಾಮನ ಜನ್ಮ ಸ್ಥಳದಲ್ಲಿಯೇ ಮಂದಿರ ನಿರ್ಮಾಣ ಮಾಡುತ್ತಿರುವುದು ನಮ್ಮ ಸೌಭಾಗ್ಯ. ಸುದೀರ್ಘ ಹೋರಾಟ ಮತ್ತು ಸಂಕಲ್ಪದಿಂದ ಮಂದಿರ ನಿರ್ಮಾಣ ಕಾರ್ಯ  ಆರಂಭವಾಗಿದೆ’ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು