ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ಪಾವತಿಸಿದ್ದ ₹ 70 ಲಕ್ಷ ಸ್ವಂತಕ್ಕೆ ಬಳಕೆ: ಎಫ್‌ಐಆರ್‌

ರಾಜ್ಯ ಒಕ್ಕಲಿಗರ ಸಂಘದ ಮಾಜಿ ಚೇರ್ಮನ್, ಮಾಜಿ ಅಧ್ಯಕ್ಷನ ವಿರುದ್ಧ ಎಫ್‌ಐಆರ್
Last Updated 30 ಸೆಪ್ಟೆಂಬರ್ 2021, 18:53 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ (ಕಿಮ್ಸ್) ವಿದ್ಯಾರ್ಥಿನಿಯೊಬ್ಬರು ಪಾವತಿಸಿದ್ದ ₹ 70 ಲಕ್ಷ ಶುಲ್ಕವನ್ನು ಸ್ವಂತಕ್ಕೆ ಬಳಸಿದ್ದ ಆರೋಪದಡಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಚೇರ್ಮನ್ ಹಾಗೂ ಅಧ್ಯಕ್ಷನ ವಿರುದ್ಧ ವಿ.ವಿ.ಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಸಿ.ಸಿದ್ದರಾಮಯ್ಯ ಅವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅದರನ್ವಯ ಸಂಘದ ಮಾಜಿ ಚೇರ್ಮನ್ ಡಿ.ಸಿ.ಕೆ. ಕಾಳೇಗೌಡ, ಮಾಜಿ ಅಧ್ಯಕ್ಷ ಡಾ. ಅಪ್ಪಾಜಿಗೌಡ, ನಿರ್ದೇಶಕ ಜಿ.ಎಲ್‌. ನರೇಂದ್ರಬಾಬು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಚಾಮರಾಜನಗರದ ಡಾ. ಮರಿ ಅನುಷಾ ದೀಪ್ತಿ ಎಂಬುವರು 2016 ಹಾಗೂ 2017ನೇ ಸಾಲಿನಲ್ಲಿ ಕಿಮ್ಸ್‌ನ ಒಬಿಜಿ (ಪ್ರಸೂತಿ ಮತ್ತು ಸ್ತ್ರೀರೋಗ) ಕೋರ್ಸ್‌ ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದರು. ಆದರೆ, ಶುಲ್ಕವನ್ನು ಪೂರ್ತಿಯಾಗಿ ಪಾವತಿಸಿರಲಿಲ್ಲ. ಹೀಗಾಗಿ, ಅವರಿಗೆ ನೋಟಿಸ್ ನೀಡಲಾಗಿತ್ತು.’

‘ನೋಟಿಸ್ ಪಡೆದಿದ್ದ ವಿದ್ಯಾರ್ಥಿನಿ, 2018ರ ಅಕ್ಟೋಬರ್ 26ರಂದು ಬಾಕಿ ಶುಲ್ಕ ₹ 70 ಲಕ್ಷವನ್ನು ಚೇರ್ಮನ್ ಕಾಳೇಗೌಡ ಅವರಿಗೆ ನೀಡಿದ್ದರು. ಉಳಿದ ಆರೋಪಿಗಳ ಪರವಾಗಿ ಕಾಳೇಗೌಡ ಹಣ ಪಡೆದಿದ್ದರು. ನಂತರ, ವಿದ್ಯಾರ್ಥಿನಿಯ ಪ್ರವೇಶ ದಾಖಲಾತಿಯನ್ನು ಅಂಗೀಕರಿಸಿದ್ದರು. ಆದರೆ, ವಿದ್ಯಾರ್ಥಿನಿಯಿಂದ ಪಡೆದಿದ್ದ ₹ 70 ಲಕ್ಷವನ್ನು ಆರೋಪಿಗಳು, ಕಾಲೇಜಿಗೆ ಸಂದಾಯ ಮಾಡಿರಲಿಲ್ಲ. ಎಲ್ಲ ಹಣವನ್ನು ಆರೋಪಿಗಳು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು
ತಿಳಿಸಿವೆ.

‘ಕ್ರಿಮಿನಲ್ ಪಿತೂರಿ (ಐಪಿಸಿ 120 ಬಿ), ನಂಬಿಕೆ ದ್ರೋಹ (ಐಪಿಸಿ 406), ಸಾರ್ವಜನಿಕರ ಆಸ್ತಿಗೆ ನಷ್ಟ ಉಂಟು ಮಾಡಿದ (ಐಪಿಸಿ 427) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಿ, ಆರೋಪಿಗಳಿಗೆ ನೋಟಿಸ್ ನೀಡಲಾಗುವುದು. ಅವರ ಹೇಳಿಕೆ ದಾಖಲಿಸಿಕೊಂಡ ಬಳಿಕ ಕಾನೂನು ಕ್ರಮ ಜರುಗಿಸಲಾಗುವುದು’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT