ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಣೆಯ ಗೋಡೆ!

Last Updated 14 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಅ ವರೊಬ್ಬ, ಖಾಸಗಿ ಕಂಪನಿ ಉದ್ಯೋಗಿ. ತಾವು ಧರಿಸುತ್ತಿದ್ದ ಬಟ್ಟೆಗಳು, ಚಿಕ್ಕದಾದವು ಎಂಬ ಕಾರಣಕ್ಕೆ ಮನೆಯಲ್ಲೇ ಗಂಟು ಕಟ್ಟಿ ಇಟ್ಟಿದ್ದರು. ಮತ್ತೊಬ್ಬ, ತಳ್ಳುಗಾಡಿ ಕಾರ್ಮಿಕ. ಹರಿದ ಬಟ್ಟೆ ತೊಟ್ಟು ನಿತ್ಯವೂ ಮಾಡುವ ಕಾಯಕ, ಅವರ ಹೊಟ್ಟೆಯನ್ನಷ್ಟೇ ತುಂಬಿಸುತ್ತಿತ್ತು. ಉದ್ಯೋಗಿಗೆ ಬಟ್ಟೆ ಬೇಡವಾದರೆ, ಕಾರ್ಮಿಕನಿಗೆ ಬಟ್ಟೆಯ ಅಗತ್ಯವಿತ್ತು. ಅಂಥ ಸ್ಥಿತಿಯಲ್ಲಿ ಆ ಒಂದು ಗೋಡೆ, ಅವರಿಬ್ಬರ ನಡುವೆ ಬಟ್ಟೆಯ ವರ್ಗಾವಣೆಗೆ ವೇದಿಕೆಯಾಯಿತು.

ಆ ಗೋಡೆಯೇ, ಬೆಂಗಳೂರಿನ ಮೆಜೆಸ್ಟಿಕ್‌ ಕೇಂದ್ರ ಬಸ್‌ ನಿಲ್ದಾಣದಲ್ಲಿ ವಿನೂತನವಾಗಿ ನಿರ್ಮಾಣಗೊಂಡಿರುವ ‘ಕರುಣೆಯ ಗೋಡೆ’. ಖಾಸಗಿ ಕಂಪನಿ ಉದ್ಯೋಗಿಗೆ ದಾನ ಮಾಡಿದ ಸಾರ್ಥಕತೆಯನ್ನು ಈ ಗೋಡೆ ತಂದುಕೊಟ್ಟರೆ, ಬಟ್ಟೆ ಸಿಕ್ಕಿತಲ್ಲ ಎಂಬ ಖುಷಿ ಕಾರ್ಮಿಕನದ್ದಾಯಿತು.

ಹೌದು. ಇಂಥ ಹಲವು ಜನರ ದಾನ ಹಾಗೂ ಖುಷಿ ಕ್ಷಣಗಳಿಗೆ ಈ ಕರುಣೆಯ ಗೋಡೆ ವೇದಿಕೆಯಾಗುತ್ತಿದೆ. ನಿತ್ಯವೂ ನೂರಾರು ಮಂದಿಗೆ ಬೇಡವಾದ ವಸ್ತುಗಳನ್ನು ತನ್ನ ಬಳಿಯೇ ಸಂಗ್ರಹಿಸಿಟ್ಟುಕೊಳ್ಳುವ ಹಾಗೂ ಆ ವಸ್ತುಗಳನ್ನು ಅಗತ್ಯವಿರುವವರಿಗೆ ನೀಡುವ ಸ್ಥಳವಾಗಿ ಈ ಗೋಡೆ ಕೆಲಸ ಮಾಡುತ್ತಿದೆ.

ನಗರ ಪೊಲೀಸರ ಪರಿಕಲ್ಪನೆ: ಮೆಜೆಸ್ಟಿಕ್‌ನ ಕೆ.ಎಸ್‌.ಆರ್‌.ಟಿ.ಸಿ ಹಾಗೂ ಬಿ.ಎಂ.ಟಿ.ಸಿ ಬಸ್‌ ನಿಲ್ದಾಣ ಸಮೀಪದಲ್ಲಿರುವ ಪೊಲೀಸ್ ಹೊರ ಠಾಣೆ ಪಕ್ಕವೇ ನಿರ್ಮಿಸಿರುವ ಈ ಗೋಡೆ, ಬೆಂಗಳೂರು ನಗರ ಪೊಲೀಸರ ಪರಿಕಲ್ಪನೆಯ ಕೂಸು.

ಮನುಷ್ಯನಿಗೆ ಬೇಕಿರುವ ವಸ್ತುಗಳೆಲ್ಲವೂ ನಮ್ಮ ಸುತ್ತಮುತ್ತ ಇವೆ. ಕೆಲವು ವಸ್ತುಗಳು ಹಣವಿದ್ದರೆ ಮಾತ್ರ ದೊರೆಯುತ್ತವೆ. ಇನ್ನು ಕೆಲವು ಉಚಿತವಾಗಿಯೂ ಸಿಗಬಹುದು. ಹಣ ಕೊಟ್ಟು ಪಡೆಯುವ ವಸ್ತುಗಳು, ದಾನದ ರೂಪದಲ್ಲಿ ಸಿಕ್ಕರೆ ಹೇಗಿರುತ್ತದೆ. ಈ ಪ್ರಶ್ನೆಗೆ ಕರುಣೆಯ ಗೋಡೆಯೇ ಉತ್ತರ ನೀಡುತ್ತಿದೆ.

ಕೆಲವರಿಗೆ, ಉಪಯೋಗಿಸಿದ ವಸ್ತುಗಳು ಹಾಗೂ ಹೊಸದಾಗಿ ಖರೀದಿಸಿಟ್ಟ ವಸ್ತುಗಳೇ ನಿರುಪಯುಕ್ತ ಎಂದು ಅನ್ನಿಸುತ್ತವೆ. ಅಂಥ ವಸ್ತುಗಳನ್ನೇ ಒಂದೇ ಸಂಗ್ರಹಿಸಿಟ್ಟು, ಯಾರಿಗೆ ಅವುಗಳ ಅವಶ್ಯಕತೆ ಇರುತ್ತದೆಯೋ ಅವರು ತೆಗೆದುಕೊಂಡು ಹೋಗುವ ವ್ಯವಸ್ಥೆಯೇ ಈ ಕರುಣೆಯ ಗೋಡೆ.

‘ನಮ್ಮಲ್ಲಿ ಎಲ್ಲ ಇದೆ. ಆದರೆ, ಏನೂ ಇಲ್ಲ. ಕೆಲವರ ಬಳಿ ಹೆಚ್ಚೆಚ್ಚು ವಸ್ತುಗಳಿವೆ. ಇನ್ನು ಕೆಲವರಲ್ಲಿ ಯಾವ ವಸ್ತುಗಳೂ ಇಲ್ಲ. ಇದ್ದವರ ಕಡೆಯಿಂದ ಇಲ್ಲದವರಿಗೆ ವಸ್ತುಗಳನ್ನು ಕೊಡಿಸಿದರೆ ಹೇಗೆ ಎಂಬ ಚರ್ಚೆ ಹುಟ್ಟಿದಾಗಲೇ ಈ ಕರುಣೆಯ ಗೋಡೆ ಜನ್ಮ ತಾಳಿತು’ ಎನ್ನುತ್ತಾರೆ ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ.

‘ಅಮೃತ ಬಿಂದು’ ಸ್ವಯಂ ಸೇವಾ ಸಂಸ್ಥೆ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಕೆಲವು ತಿಂಗಳ ಹಿಂದಷ್ಟೇ, ಕೆ.ಆರ್‌.ಮಾರುಕಟ್ಟೆಯಲ್ಲಿ ಕರುಣೆಯ ಗೋಡೆ ವ್ಯವಸ್ಥೆ ರೂಪಿಸಲಾಗಿತ್ತು. ನಿತ್ಯವೂ ಉಪಯುಕ್ತ ವಸ್ತುಗಳು, ಗೋಡೆ ಮೂಲಕ ವರ್ಗಾವಣೆ ಆಗುತ್ತಿದ್ದವು. ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದರಿಂದಾಗಿ, ಈಗ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲೂ ಅಂಥದ್ದೇ ಗೋಡೆ ವ್ಯವಸ್ಥೆ ಮಾಡಲಾಗಿದೆ’ ಎಂದು ಚನ್ನಣ್ಣನವರ ಹೇಳುತ್ತಾರೆ.

ಗೋಡೆಯಲ್ಲಿ ಯಾವ ಯಾವ ವಸ್ತುಗಳು: ಭಾನುವಾರ (ನ.10) ಉದ್ಘಾಟನೆಗೊಂಡಿರುವ ಈ ಗೋಡೆಯಲ್ಲಿ, ಮೊದಲ ದಿನದಲ್ಲೇ ಸಾಕಷ್ಟು ವಸ್ತುಗಳು ಪರಸ್ಪರ ವರ್ಗಾವಣೆ ಆಗಿವೆ. ತಿಂಡಿ–ತಿನಿಸುಗಳು, ಮಕ್ಕಳ ಹಾಗೂ ದೊಡ್ಡವರ ಬಟ್ಟೆಗಳು, ಪುಸ್ತಕಗಳು ಇದ್ದವು. ಅಗತ್ಯವಿರುವವರು ಅವುಗಳನ್ನು ತೆಗೆದುಕೊಂಡು ಹೋದರು.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ತಮ್ಮೂರಿನಿಂದ ಬರುವಾಗ ಪ್ರಯಾಣದ ವೇಳೆ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುತ್ತಾ ಬರುತ್ತಾರೆ. ಅಂಥ ಪ್ರಯಾಣಿಕರು, ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಗೋಡೆಯನ್ನು ಕಂಡು ತಮ್ಮ ಬಳಿಯ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಇಟ್ಟು ಹೋಗುತ್ತಾರೆ. ಅವುಗಳನ್ನು ಅಗತ್ಯವಿರುವವರು ತೆಗೆದುಕೊಂಡು ಓದಿ, ಜ್ಞಾನಾರ್ಜನೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ, ಮೊದಲನೇ ದಿನ ಪುಸ್ತಕಗಳೇ ಗೋಡೆ ಮೇಲೆ ಹೆಚ್ಚಾಗಿ ಸಂಗ್ರಹವಾಗಿದ್ದವು.

‘ಸಾರ್ವಜನಿಕರು ತಮಗೆ ಅಗತ್ಯವಿಲ್ಲದಿದ್ದರೆ, ಅಂಥ ವಸ್ತುಗಳನ್ನು ಗೋಡೆ ಮೇಲೆ ತಂದಿಡಬಹುದು’ ಎಂದು ಪೊಲೀಸರು ಮನವಿ ಮಾಡಿದ್ದಾರೆ.

‘ಬಟ್ಟೆ, ತಿಂಡಿ–ತಿನಿಸು, ಆಟಿಕೆ ವಸ್ತುಗಳು, ಶಾಲಾ ಬ್ಯಾಗ್‌ಗಳು, ಪುಸ್ತಕ, ಹೊದಿಕೆಗಳು, ನೀರಿನ ಬಾಟಲಿ, ತಟ್ಟೆ... ಹೀಗೆ ಯಾವುದೇ ವಸ್ತುವನ್ನಾದರೂ ಗೋಡೆ ಮೇಲಿಡಬಹುದು. ಜೊತೆಗೆ, ಆ ವಸ್ತುಗಳ ಅಗತ್ಯವಿರುವವರು ತೆಗೆದುಕೊಂಡು ಹೋಗಬಹುದು’ ಎಂತಲೂ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT