ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆ; ಕಸ ವಿಲೇವಾರಿ ಅವ್ಯವಸ್ಥೆ

ಹೂಳು ತುಂಬಿದ ಕೆರೆಗಳ ಗೋಳು ಕೇಳುವವರಿಲ್ಲ
Last Updated 9 ಜನವರಿ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ಅಸಮರ್ಪಕ ಕಸ ವಿಲೇವಾರಿ, ಹದಗೆಟ್ಟ ರಸ್ತೆಗಳು, ಹೂಳು ತುಂಬಿದ ಕೆರೆಗಳು, ಕೆರೆ ಜಾಗ ಒತ್ತುವರಿ... ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್‌ಗಳಲ್ಲಿ ಒಂದೊಂದು ಬಗೆಯ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಬಗೆಹರಿಸಲು ಜನಪ್ರತಿನಿಧಿಗಳು ಆಸಕ್ತಿ ತೋರಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು.ಶಾಸಕರು ಮತ್ತು ಪಾಲಿಕೆ ಸದಸ್ಯರ ನಡುವಿನ ಹೊಂದಾಣಿಕೆ ಕೊರತೆಯೂ ವಾರ್ಡ್‌ ಅಭಿವೃದ್ಧಿಗೆ ತೊಡಕಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾದ ಅನುದಾನವನ್ನು ಈಗಿನ ಸರ್ಕಾರ ವಾಪಸ್ ಪಡೆದಿರುವುದರಿಂದಲೂ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದೆ ಎಂಬ ಆರೋಪವೂ ಇದೆ. ಸಿ.ವಿ.ರಾಮನ್‌ ನಗರ, ಬೆನ್ನಿಗಾನಹಳ್ಳಿ, ಹೊಸ ತಿಪ್ಪಸಂದ್ರ, ಸರ್ವಜ್ಞನಗರ ವಾರ್ಡ್‌ಗಳ ಪರಿಸ್ಥಿತಿಯಮೇಲೆ ವಿದ್ಯಾಶ್ರೀ ಎಸ್‌. ಅವರು ಇಲ್ಲಿ ಬೆಳಕು ಚೆಲ್ಲಿದ್ದಾರೆ.

ಬೆನ್ನಿಗಾನಹಳ್ಳಿ ವಾರ್ಡ್‌- 50

ಗಜೇಂದ್ರ ಲೇಔಟ್‌, ಮಲ್ಲಪ್ಪ ಗಾರ್ಡನ್‌, ಸಂಜಯ್‌ ಗಾಂಧಿ ನಗರ, ಕೃಷ್ಣಯ್ಯನಪಾಳ್ಯ, ಸದಾನಂದನಗರ, ರಾಜೀವ್‌ ನಗರ, ಕಸ್ತೂರಿನಗರ, ಚಿಕ್ಕ ಬಾಣಸವಾಡಿ, ರಾಮಯ್ಯ ರೆಡ್ಡಿ ಕಾಲೊನಿ, ಬಿ. ಚನ್ನಸಂದ್ರ, ಬಚ್ಚಣ್ಣ ಲೇಔಟ್‌ ಈ ವ್ಯಾಪ್ತಿಗೆ ಬರುತ್ತವೆ. ಕೊಳಚೆ ನೀರು, ಕಳೆ ಹಾಗೂ ಕಟ್ಟಡ ತ್ಯಾಜ್ಯಗಳಿಂದಾಗಿ ಅಳಿವಿನ ಅಂಚಿಗೆ ತಲುಪಿದ್ದ ಬೆನ್ನಿಗಾನಹಳ್ಳಿ ಕೆರೆಗೆ ಮರುಜೀವ ನೀಡಲಾಗಿದೆ. ಕಸ್ತೂರಿನಗರದಲ್ಲಿ ಸುಸಜ್ಜಿತವಾದ ಉದ್ಯಾನ ಇದ್ದು, ಅದನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿದೆ. ಈ ವಾರ್ಡ್‌ನಲ್ಲಿ ಸಣ್ಣಪುಟ್ಟ ಮೂಲಸೌಕರ್ಯಗಳನ್ನು ನಿರ್ವಹಿಸುವ ಕೆಲಸ ಆಗುತ್ತಿದೆಯೇ ಹೊರತು, ದೊಡ್ಡ ಮಟ್ಟದ ಯಾವುದೇ ಕೆಲಸಗಳು ಆಗಿಲ್ಲ ಎನ್ನುವುದು ಸ್ಥಳೀಯ ನಿವಾಸಿಗಳ ದೂರು.

ಬೆನ್ನಿಗಾನಹಳ್ಳಿಯಲ್ಲಿ ಸ್ಕೈವಾಕ್‌ ನಿರ್ಮಿಸಬೇಕು ಎಂಬುದು ಬಹುದಿನದ ಬೇಡಿಕೆ. ನಗರದ ಕೇಂದ್ರ ಭಾಗದಿಂದ ಹೊಸಕೋಟೆ, ವೈಟ್‌ಫೀಲ್ಡ್‌ ಮತ್ತು ಮಾರತ್ತಹಳ್ಳಿ ಕಡೆಗೆ ಓಡಾಡುವ ಸಾವಿರಾರುವಾಹನಗಳು ಬೆನ್ನಿಗಾನಹಳ್ಳಿ ರಸ್ತೆಯನ್ನು ಬಳಸುತ್ತವೆ.ಈ ರಸ್ತೆ ಅಗಲವಾಗಿರುವುದರಿಂದ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಇಲ್ಲೊಂದು ಸ್ಕೈವಾಕ್‌ ನಿರ್ಮಿಸಿದರೆ ಅನುಕೂಲವಾಗುತ್ತದೆ.ಹದಗೆಟ್ಟ ರಸ್ತೆ ಮತ್ತು ಚರಂಡಿ ಅವ್ಯವಸ್ಥೆ ಇಲ್ಲಿಯ ಬಹುದೊಡ್ಡ ಸಮಸ್ಯೆ.ರಸ್ತೆ ಬದಿಯಲ್ಲಿ ಕಸದ ರಾಶಿಗಳು ಕಣ್ಣಿಗೆ ರಾಚುವಂತಿವೆ.

ಜಲಮಂಡಳಿಯ ಪೈಪ್‌ಲೈನ್‌ ಕಾಮಗಾರಿಗಾಗಿ ಕಸ್ತೂರಿನಗರ ಬಡಾವಣೆಯ 2ನೇ ಹಾಗೂ 4ನೇ ಮುಖ್ಯರಸ್ತೆಯನ್ನು ಅಗೆಯಲಾಗಿತ್ತು. ಈಗ ಈ ರಸ್ತೆಗಳಿಗೆ ತೇಪೆ ಹಾಕುವ ಕಾಮಗಾರಿ ನಡೆಯುತ್ತಿದೆ. ಹಳೆ ಕಸ್ತೂರಿನಗರದ ಕೆಲವು ಭಾಗಗಳಲ್ಲಿ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಬಿ.ಚನ್ನಚಂದ್ರದ ಸ್ಮಶಾನವನ್ನು ಒತ್ತುವರಿ ಮಾಡಲಾಗಿದೆ ಎಂಬುದು ಸ್ಥಳೀಯರ ಆರೋಪ. ಸ್ಮಶಾನಕ್ಕೆ ಆವರಣ ಗೋಡೆ ನಿರ್ಮಿಸಿಲ್ಲ. ಅದರ ಪಕ್ಕದಲ್ಲಿ ತ್ಯಾಜ್ಯವನ್ನು ಸುರಿಯಲಾಗಿದೆ. ಕಸ್ತೂರಿನಗರದಲ್ಲಿ ಸುಸಜ್ಜಿತವಾದ ಉದ್ಯಾನವಿದೆ. ಆದರೆ, ಹೊಸ ಕಸ್ತೂರಿನಗರದಿಂದ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬಳಿಯಿರುವ ವಿವೇಕಾನಂದ ಉದ್ಯಾನದ ಪಕ್ಕದಲ್ಲಿಯೇ ಕಟ್ಟಡದ ಅವಶೇಷಗಳನ್ನು ಸುರಿಯಲಾಗಿದೆ. ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದಿದೆ. ‘ಇಲ್ಲಿ ಇತ್ತೀಚೆಗೆ ಹಾವುಗಳ ಹಾವಳಿ ಹೆಚ್ಚಾಗಿದೆ’ ಎನ್ನುತ್ತಾರೆ ಸ್ಥಳೀಯರು.

ಸಿ.ವಿ. ರಾಮನ್‌ ನಗರ ವಾರ್ಡ್‌– 57

ಮಾರುತಿ ನಗರ, ಭೈರಸಂದ್ರ, ಭುವನೇಶ್ವರಿ ನಗರ, ಪಟೇಲ್‌ ಕೆ. ಮಾರಪ್ಪ ಲೇಔಟ್, ಎಎಚ್‌ಎಎಲ್‌, ಕಗ್ಗದಾಸಪುರ, ಮಲ್ಲೇಶಪ್ಪನ ಪಾಳ್ಯ ಈ ವಾರ್ಡ್‌ನ ವ್ಯಾಪ್ತಿಯಲ್ಲಿವೆ. ಅಕ್ಕ–ಪಕ್ಕದ ವಾರ್ಡ್‌ಗಳಿಗೆ ಹೋಲಿಸಿದರೆ ಇದು ಅಭಿವೃದ್ಧಿ ಹೊಂದಿದ ವಾರ್ಡ್‌ನಂತೆ ಕಾಣುತ್ತದೆ. ಮುಖ್ಯರಸ್ತೆಗಳು ಸುಸಜ್ಜಿತವಾಗಿವೆ. ಪೈಪ್‌ಲೈನ್‌ ಕಾಮಗಾರಿಗಾಗಿ ಅಲ್ಲಲ್ಲಿ ರಸ್ತೆಗಳನ್ನು ಅಗೆಯಲಾಗಿದೆ.

ಕಗ್ಗದಾಸಪುರ ಕೆರೆ ಕೊಳಚೆ ಗುಂಡಿಯಾಗಿ ಮಾರ್ಪಟ್ಟಿದೆ. ಸುತ್ತಲಿನ ನಾಗವಾರಪಾಳ್ಯ, ಭುವನೇಶ್ವರಿ ನಗರ, ಬೆನ್ನಿಗಾನಹಳ್ಳಿ, ಭೈರಸಂದ್ರ, ಮಲ್ಲೇಶಪ್ಪನ ಪಾಳ್ಯ, ಜಿ.ಎಂ.ಪಾಳ್ಯ, ಕಗ್ಗದಾಸಪುರ, ವಾರ್ಸೊವಾ ಬಡಾವಣೆಯ ವಸತಿ ಸಮುಚ್ಚಯಗಳ ಹಾಗೂ ಕಂಪನಿಗಳ ತ್ಯಾಜ್ಯನೀರು ಈ ಜಲಕಾಯದ ಒಡಲು ಸೇರುತ್ತಿದೆ. ಕೆರೆಯ ಸುತ್ತಲೂ ಹಾಕಿರುವ ತಂತಿಬೇಲಿ ಅಲ್ಲಲ್ಲಿ ಕಿತ್ತುಹೋಗಿದೆ.

ಹೊಸ ತಿಪ್ಪಸಂದ್ರ– 58

ಬಾಗ್ಮನೆ ಟೆಕ್‌ ಪಾರ್ಕ್‌ ಈ ವಾರ್ಡ್‌ವ್ಯಾಪ್ತಿಯಲ್ಲಿದೆ. ಎಲ್‌ಐಸಿ ಕಾಲೊನಿ, ವೆಂಕಟೇಶ್ವರ ಕಾಲೊನಿ, ಕೃಷ್ಣಪ್ಪ ಗಾರ್ಡನ್‌, ಕೆ.ಜಿ ಕಾಲೊನಿ, ಪಾಟೇಲ್‌ ಸೀತಪ್ಪ ಪಾಳ್ಯ ಈ ವ್ಯಾಪ್ತಿಯಲ್ಲಿದೆ. ರಸ್ತೆ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಆರು ತಿಂಗಳಿನಿಂದ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ತಿಪ್ಪಸಂದ್ರದ ಮುಖ್ಯರಸ್ತೆಗೆ ಸಮಾನಾಂತರವಾಗಿರುವ ನಾಲ್ಕನೇ ಅಡ್ಡರಸ್ತೆಯಲ್ಲಿ ಮಳೆ ಬಂತೆಂದರೆ ಪ್ರವಾಹ ಉಂಟಾಗುತ್ತಿತ್ತು. ಇಲ್ಲಿ ದುರಸ್ತಿ ಕಾಮಗಾರಿ ನಡೆಸಲಾಗಿದೆ. ಅದು ಪ್ರವಾಹ ತಡೆಯುವಲ್ಲಿ ನೆರವಿಗೆ ಬರುತ್ತದೆಯೋ ಎಂಬುದನ್ನು ತಿಳಿಯಬೇಕಾದರೆ ಮುಂದಿನ ಮಳೆಗಾಲದವರೆಗೂ ಕಾದು ನೋಡಬೇಕಿದೆ ಎನ್ನುತ್ತಾರೆ ಸ್ಥಳೀಯರು. ಭೈರಸಂದ್ರ ಕೆರೆಯ ಅವ್ಯವಸ್ಥೆ ಇನ್ನೂ ಸರಿಯಾಗಿಲ್ಲ. ಸುತ್ತಮುತ್ತಲಿನ ಕಂಪನಿಗಳ ಕಲುಷಿತ ನೀರು ಕೆರೆಯನ್ನು ಸೇರುತ್ತಿದೆ. ಇದರಿಂದ ಈ ಜಲಕಾಯ ಗಬ್ಬುನಾರುವ ಮೋರಿಯಂತಾಗಿದೆ. ಕಸ ವಿಲೇವಾರಿಯೂ ಸಮರ್ಪಕವಾಗಿಲ್ಲ.

ಸರ್ವಜ್ಞನಗರ ವಾರ್ಡ್‌–79

ಕೊಳೆಗೇರಿಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ರಸ್ತೆಗಳ ಪರಿಸ್ಥಿತಿ ಅಯೋಮಯವಾಗಿದೆ.ಚರಂಡಿ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆದರೆ, ಹದಗೆಟ್ಟ ರಸ್ತೆಗಳಿಂದಾಗಿ ಸಂಚಾರವೇ ದುಸ್ತರವಾಗಿದೆ. ಪೈಪ್‌ಲೈನ್ ಕಾಮಗಾರಿಗಾಗಿ ಪಿಎಸ್‌ಕೆನಾಯ್ಡು, ಕೊಂಡಪ್ಪ ಗಾರ್ಡನ್‌ ಬಳಿಯ ರಸ್ತೆಗಳನ್ನು ಅಗೆದು ವರ್ಷವಾದರೂ, ಅದರ ದುರಸ್ತಿಗೆ ಕ್ರಮ ತೆಗೆದುಕೊಂಡಿಲ್ಲ. ಕಾಕ್ಸ್‌ಟೌನ್‌ ಮತ್ತು ಹೊಸ ಬೈಯಪ್ಪನಹಳ್ಳಿಯಲ್ಲಿ ಕಾವೇರಿ ನೀರು ಪೂರೈಕೆ ಸಮರ್ಪಕವಾಗಿಲ್ಲ ಎಂಬ ದೂರುಗಳು ಇವೆ. ಕದಿರಪ್ಪ ರಸ್ತೆ ಮತ್ತು ಮೌನಗುರು ಮಠದ ಬಳಿ ಕಸದ ರಾಶಿಗಳು ತುಂಬಿಕೊಂಡಿವೆ. ಬೀದಿದೀಪಗಳ ಅವ್ಯವಸ್ಥೆ ಮತ್ತು ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆಯಿದೆ.

***

‘ಮೂಲ ಸೌಕರ್ಯಕ್ಕೆ ಆದ್ಯತೆ’

ಸರ್ಕಾರದಿಂದ ₹ 1.50 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದೆ. ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ಕಸ್ತೂರಿ ನಗರದವರೆಗೂ ರಸ್ತೆ ಕಾಮಗಾರಿ ನಡೆದಿದೆ. ಹಳೆ ಬೈಯಪ್ಪನಹಳ್ಳಿಯಲ್ಲಿ ಇತ್ತೀಚೆಗೆ ಸುಸಜ್ಜಿತವಾದ ಉದ್ಯಾನ ನಿರ್ಮಿಸಿದ್ದೇವೆ. ಕೃಷ್ಣಯ್ಯನಪಾಳ್ಯದ ಸ್ಮಶಾನದಲ್ಲಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. ಸದಾನಂದ ನಗರದಲ್ಲಿ ರಾಜಕಾಲುವೆಯ ಸಮಸ್ಯೆಯಿತ್ತು. ಅದರ ಕಾಮಗಾರಿಯೂ ನಡೆದಿದೆ. ಸರಗಳ್ಳರು ಮತ್ತು ಹಾವುಗಳು ಹೆಚ್ಚುತ್ತಿರುವ ಕುರಿತು ದೂರುಗಳು ಬಂದಿವೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.

-ಮೀನಾಕ್ಷಿ, ಬೆನ್ನಿಗಾನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯೆ

‘ಅನುದಾನ ಕಡಿತದಿಂದಸಮಸ್ಯೆ’

ಡಿಆರ್‌ಡಿಒದ ಕೊಳಚೆ ನೀರು ಭೈರಸಂದ್ರದ ಮೇಲಿನ ಕೆರೆಗೆ ಸೇರುತ್ತದೆ. ಅದರ ನಿರ್ವಹಣೆ ಇಷ್ಟು ವರ್ಷ ಡಿಆರ್‌ಡಿಒ ವ್ಯಾಪ್ತಿಯಲ್ಲಿಯೇ ಇತ್ತು. ಕಳೆದ ಆರು ತಿಂಗಳ ಹಿಂದೆ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ. ಕೆಳಗಿನ ಕೆರೆ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಸಮ್ಮಿಶ್ರ ಸರ್ಕಾರವಿದ್ದಾಗ ಕೆರೆ ಅಭಿವೃದ್ಧಿಗೆ ಸರ್ವೆ ನಡೆಸಲಾಗಿತ್ತು. ಸರ್ಕಾರ ಬದಲಾದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಪ್ರಮುಖ ಒಳಚರಂಡಿ ಕೆಲಸಗಳು ಆಗಿವೆ.

-ಶಿಲ್ಪಾ ಅಭಿಲಾಷ್‌, ತಿಪ್ಪಸಂದ್ರ ವಾರ್ಡ್‌ನ ಪಾಲಿಕೆ ಸದಸ್ಯೆ

‘ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ’

ಹಲವು ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದ್ದೇವೆ. ಬೋರ್‌ವೇಲ್‌ಗಳನ್ನು ಕೊರೆಸಿದ್ದೇವೆ. ಪಿಎಸ್‌ಕೆ ನಾಯ್ಡು ರಸ್ತೆಯಲ್ಲಿ ನೀರಿನ ಪೈಪ್‌ಲೈನ್‌ ಮತ್ತು ಒಳಚರಂಡಿ ಕಾಮಗಾರಿ ಮುಗಿದಿದ್ದು, ಮುಂದಿನ ವಾರದಿಂದ ರಸ್ತೆ ಕಾಮಗಾರಿ ನಡೆಯಲಿದೆ.ಶೌಚಾಲಯ ಸ್ವಚ್ಛತೆಗೆ ಕರೆದಿದ್ದ ಟೆಂಡರ್‌ ರದ್ದಾಗಿತ್ತು. ಈ ವಾರ ಮರು ಟೆಂಡರ್‌ ಕರೆಯಲಾಗಿದೆ.₹2 ಕೋಟಿ ಮೊತ್ತದ ಅನುದಾನ ಜೊತೆಗೆ ₹2.5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದೆ.ಎಂಎಂ ಮಾರ್ಕೆಟ್‌ನಲ್ಲಿ ಒಳಚರಂಡಿ ಕಾಮಗಾರಿ ಬಾಕಿಯಿದೆ. ಈ ಕಾಮಗಾರಿಯಾಗದೇ ಮಾರುಕಟ್ಟೆ ಪ್ರಾರಂಭಿಸಿದರೆ ಅಲ್ಲಿಯೇ ಕೊಳಚೆ ನೀರು ಹರಿದು ಕೆಟ್ಟ ವಾಸನೆ ಬರುತ್ತದೆ.ಕಲ್ಲಹಳ್ಳಿ ಸ್ಮಶಾನದಲ್ಲಿ ನೀಲಂ ಸಂಜೀವ್‌ ರೆಡ್ಡಿ ಅವರ ಸಮಾಧಿಯಿದೆ. ಅದನ್ನು ಜನರ ಗಮನಸೆಳೆಯುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು.

-ಶಶಿರೇಖಾ ಎಂ., ಸರ್ವಜ್ಞ ವಾರ್ಡ್‌

ಸಿ.ವಿ ರಾಮನ್‌ ನಗರ ಪಾಲಿಕೆ ಸದಸ್ಯೆ ಅರುಣಾ ರವಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

***

‘ಹೋರಾಟಕ್ಕೂ ಬೆಲೆಯಿಲ್ಲ’

ವಾರ್ಡ್‌ನಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರಿನ ಸೌಕರ್ಯಗಳು ಸಮರ್ಪಕವಾಗಿಲ್ಲ. ಹಲವು ಬಾರಿ ಪ್ರತಿಭಟನೆ ನಡೆಸಿದರೂ, ಸ್ಪಂದನೆ ಸಿಕ್ಕಿಲ್ಲ. ಪ್ರತಿ ಬಜೆಟ್‌ನಲ್ಲಿ ಬಿ. ಚನ್ನಚಂದ್ರದ ಸ್ಮಶಾನ ಅಭಿವೃದ್ಧಿಗೆ ₹ 30 ಲಕ್ಷ ಅನುದಾನ ಬಿಡುಗಡೆ ಆಗುತ್ತದೆ. ಆದರೆ, ಅದು ಬಳಕೆ ಆಗುತ್ತಿಲ್ಲ.ಬೀದಿದೀಪಗಳ ನಿರ್ವಹಣೆ ಸರಿಯಾಗಿಲ್ಲ. ಪೌರಕಾರ್ಮಿಕರು ಮುಖ್ಯರಸ್ತೆಗಳಲ್ಲಿ ಮಾತ್ರವೇ ಕಸ ಸಂಗ್ರಹಿಸುತ್ತಾರೆ. ಒಳ ರಸ್ತೆಗಳಿಗೆ ಹೋಗುತ್ತಿಲ್ಲ.

-ಎಸ್‌. ಮುನಿರಾಜು, ಬೆನ್ನಿಗಾನಹಳ್ಳಿ ನಿವಾಸಿ

‘ಸಂಚಾರ ದುಸ್ತರ’

ಕಗ್ಗದಾಸಪುರ ಕೆರೆಯಲ್ಲಿಯೇ ಕಟ್ಟಡ ನಿರ್ಮಾಣ ತ್ಯಾಜ್ಯ ತಂದು ಸುರಿಯಲಾಗುತ್ತಿದೆ.ಇದರಿಂದ ಸೊಳ್ಳೆಗಳ ಕಾಟ ಹೆಚ್ಚಿ ಸಾರ್ವಜನಿಕರು ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಕೆಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆಯೂ ಇದೆ. ಮಲ್ಲೇಶಪ್ಪನ ಪಾಳ್ಯದಲ್ಲಿ ಕಸವನ್ನು ಸುರಿಯಲಾಗುತ್ತಿದೆ. ಈ ಪ್ರದೇಶಗಳಲ್ಲಿ ಸಂಚಾರ ದುಸ್ತರ.

-ಜಗದೀಶ್‌, ಸಿ.ವಿ. ರಾಮನ್ ನಗರ ನಿವಾಸಿ

‘ಸಮನ್ವಯ ಕೊರತೆ’

ಶಾಸಕರು ಮತ್ತು ಪಾಲಿಕೆ ಸದಸ್ಯರು ಬೇರೆ ಪಕ್ಷದವರಾಗಿರುವುದರಿಂದ ಅವರ ನಡುವೆ ಹೊಂದಾಣಿಕೆ ಸಮಸ್ಯೆ ಇದೆ. ಈ ಕಾರಣದಿಂದಾಗಿಯೇ ವಾರ್ಡ್‌ ಅಭಿವೃದ್ಧಿಗೆ ಮಂಜೂರಾದ ಅನುದಾನ ವಾಪಸ್‌ ಪಡೆಯಲಾಗಿದೆ. 30 ವರ್ಷಗಳ ನಂತರ ರಸ್ತೆ, ಚರಂಡಿ ಕಾಮಗಾರಿ ನಡೆದಿದೆ. ಕಸದ ಸಮಸ್ಯೆಗೆ ಇನ್ನೂ ಪರಿಹಾರ ದೊರಕಿಲ್ಲ. ಮುಖ್ಯರಸ್ತೆಯಲ್ಲಿಯೇ ಕಸ ಸುರಿಯಲಾಗುತ್ತಿದೆ.

-ಆನಂದ್‌ ವಾಸುದೇವನ್‌, ತಿಪ್ಪಸಂದ್ರ ನಿವಾಸಿ

‘ರಸ್ತೆ ದುರವಸ್ಥೆ’

ರಸ್ತೆಗಳ ಪರಿಸ್ಥಿತಿ ಹೇಳತೀರದು. ಎಂ.ಎಂ ರಸ್ತೆಯಲ್ಲಿ ಮಾರುಕಟ್ಟೆ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿ ಅಂಗಡಿಗಳು ತೆರೆದಿಲ್ಲ. ಹೀಗಾಗಿ, ಫುಟ್‌ಪಾತ್‌ನಲ್ಲೇ ವ್ಯಾಪಾರ ನಡೆಯುತ್ತದೆ. ಇದು ಸಂಚಾರ ದಟ್ಟಣೆಗೆ ಕಾರಣವಾಗಿದೆ.

-ದಿನೇಶ್‌ ರೆಡ್ಡಿ, ಸರ್ವಜ್ಞನಗರ ವಾರ್ಡ್‌ ನಿವಾಸಿ

***

ವಾರ್ಡ್‌ನ ಪ್ರಮುಖ ಮೂರು ಸಮಸ್ಯೆಗಳು

ಬೆನ್ನಿಗಾನಹಳ್ಳಿ

*ತ್ಯಾಜ್ಯ ವಿಲೇವಾರಿ

*ಸ್ಮಶಾನ ಒತ್ತುವರಿ

*ಹದಗೆಟ್ಟ ರಸ್ತೆ

ಸಿ.ವಿ.ರಾಮನ್‌ ನಗರ

*ಕಸ ವಿಲೇವಾರಿ ಸಮಸ್ಯೆ

*ಮಲಿನಗೊಂಡಿರುವ ಕೆರೆ

*ಒಳ ರಸ್ತೆಗಳ ಅವ್ಯವಸ್ಥೆ

ಹೊಸ ತಿಪ್ಪಸಂದ್ರ

*ಬೈರಸಂದ್ರ ಕೆರೆ ಅವ್ಯವಸ್ಥೆ

*ಕುಡಿಯುವ ನೀರಿನ ಸಮಸ್ಯೆ

*ಕುಂಠಿತಗೊಂಡಿರುವ ಅಭಿವೃದ್ದಿ ಕಾಮಗಾರಿ

ಸರ್ವಜ್ಞ ನಗರ

*ಗುಂಡಿಬಿದ್ದ ರಸ್ತೆಗಳು

*ಕುಡಿಯುವ ನೀರಿನ ಸಮಸ್ಯೆ

*ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆ ಕೊರತೆ

***

2011ರ ಜನಗಣತಿ ಪ್ರಕಾರ ಜನಸಂಖ್ಯೆ

ಬೆನ್ನಿಗಾನಹಳ್ಳಿ ವಾರ್ಡ್‌: 49,094

ಸಿ.ವಿ.ರಾಮನ್‌ ನಗರ:58,815

ಹೊಸ ತಿಪ್ಪಸಂದ್ರ:43,983

ಸರ್ವಜ್ಞ ನಗರ:37,291

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT