ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆಯೇ ಸವಾಲು

Last Updated 29 ಫೆಬ್ರುವರಿ 2020, 8:20 IST
ಅಕ್ಷರ ಗಾತ್ರ

ಬಿಳೇಕಹಳ್ಳಿ–188

ಬನ್ನೇರುಘಟ್ಟ ರಸ್ತೆಗೆ ಹೊಂದಿಕೊಂಡಂತೆ ಇರುವ ಬಿಳೇಕಹಳ್ಳಿ ವಾರ್ಡ್ 4.22 ಚ.ಕಿ.ಮೀ ವಿಸ್ತೀರ್ಣದಲ್ಲಿದೆ. ಐ.ಟಿ ಕಂಪನಿಗಳು, ಅಪಾರ್ಟ್‌ಮೆಂಟ್ ಸಮುಚ್ಚಯಗಳು ಇವೆ.‌‌ ಕೆಲ ರಸ್ತೆಗಳು ಸುಸ್ಥಿತಿಯಲ್ಲಿವೆ. ಕಿರಿದಾದ ರಸ್ತೆಗಳೂ ಕಾಂಕ್ರಿಟ್ ಕಂಡಿವೆ. ಬಿಳೇಕಹಳ್ಳಿ ಹಳೇ ಊರಿನ ಬಸ್ ನಿಲ್ದಾಣ ಹಾಳು ಬಿದ್ದ ಸ್ಥಿತಿಯಲ್ಲೇ ಇದೆ. ಅಲ್ಲಿಂದ ಬಿಟಿಎಂ ಲೇಔಟ್‌ಗೆ ಹೋಗಲು ಇರುವ ಕೋಡಿಚಿಕ್ಕನಹಳ್ಳಿ ಮುಖ್ಯ ರಸ್ತೆ ಅತ್ಯಂತ ಕಿರಿದಾದ ರಸ್ತೆ. ಅಲ್ಲಲ್ಲಿ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಂಚಾರ ಮಾಡುವುದೇ ಸಾಹಸದ ಕೆಲಸ. ಹೆಸರಿಗೆ ಮುಖ್ಯ ರಸ್ತೆಯಾದರೂ ಗಲ್ಲಿಗಳಲ್ಲಿ ಸಾಗಿದ ಅನುಭವವಾಗುತ್ತದೆ. ಈ ವಾರ್ಡ್‌ಗೆ ಹೊಂದಿಕೊಂಡಿರುವ ಮಡಿವಾಳ ಕೆರೆಗೆ ಕೊಳಚೆ ನೀರು ಸೇರುತ್ತಿದೆ. ಮೊದಲು ಅಲ್ಲಲ್ಲಿ ಇದ್ದ ಕಳೆ ಈಗ ಇಡೀ ಜಲಕಾಯವನ್ನು ಆವರಿಸಿಕೊಂಡಿದೆ. ಹೀಗಾಗಿ ಬೋಟಿಂಗ್ ನಿಲ್ಲಿಸಲಾಗಿದೆ. ಈ ವಾರ್ಡ್‌ನಲ್ಲಿ ಅಂಚಿನಲ್ಲಿ ಮಂಜುನಾಥನಗರದ ಕಡೆಗೆ ಸಾಲು ಸಾಲು ಅಪಾರ್ಟ್‌ಮೆಂಟ್ ಸಮುಚ್ಚಯಗಳಿವೆ. ಮಳೆ ಬಂದರೆ ರಾಜಕಾಲುವೆ ನೀರು ರಸ್ತೆ ಮತ್ತು ಮನೆಗಳನ್ನು ತುಂಬಿಕೊಳ್ಳುವ ಆತಂಕ ಜನರಲ್ಲಿದೆ. ರಾಜಕಾಲುವೆ ಅಭಿವೃದ್ಧಿಯಾಗಿದ್ದು, ಈಗ ಸಮಸ್ಯೆ ಇಲ್ಲ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಎಚ್‌ಎಸ್‌ಆರ್ ಬಡಾವಣೆ –174

ಸಿಲ್ಕ್‌ಬೋರ್ಡ್, ಹೊಸೂರು ರಸ್ತೆ, ಹೊರ ವರ್ತುಲ ರಸ್ತೆ, ಸರ್ಜಾಪುರ ರಸ್ತೆಗಳ ಮಧ್ಯದಲ್ಲಿ ಇರುವ ಎಚ್‌ಎಸ್‌ಆರ್ ಬಡಾವಣೆ ಐ.ಟಿ ಕಂಪನಿಗಳ ಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ವಾರ್ಡ್‌. ಅತೀ ಹೆಚ್ಚು ಉದ್ಯಾನಗಳಿರುವುದು ಇದೇ ವಾರ್ಡ್‌ನಲ್ಲಿ. 33 ಉದ್ಯಾನಗಳಿದ್ದು, ಬಹುತೇಕ ಸುಸ್ಥಿತಿಯಲ್ಲಿವೆ. ಎಲ್ಲಾ ಉದ್ಯಾನಗಳಲ್ಲಿ ಜಿಮ್ ಸಲಕರಣೆ ಮತ್ತು ಮಕ್ಕಳ ಆಟಿಕೆ ಸಲಕರಣೆಗಳನ್ನು ಅಳವಡಿಸಲಾಗಿದೆ. ಇಬ್ಬಲೂರು, ಅಗರ ಮತ್ತು ಸೋಮಸಂದ್ರಪಾಳ್ಯ ಕೆರೆಗಳು ಈ ವಾರ್ಡ್‌ನಲ್ಲಿವೆ. ಜೋರು ಮಳೆ ಬಂದರೆ ಮುಳುಗುವ ಭಯದಿಂದ ಜನ ಹೊರ ಬಂದಿಲ್ಲ. 2018ರಲ್ಲಿ ಭಾರಿ ಮಳೆ ಸುರಿದಾಗ ರಾಜಕಾಲುವೆ ಮತ್ತು ಒಳಚರಂಡಿ ನೀರುಗಳು ಮನೆಗಳಿಗೆ ನುಗ್ಗಿತ್ತು. ರಾಜಕಾಲುವೆ ತಡೆಗೋಡೆ ಎತ್ತರಿಸುವ ಕಾಮಗಾರಿ ನಡೆಯುತ್ತಿದೆ.

ಮಂಗಮ್ಮನಪಾಳ್ಯ–190

ಹೊಸೂರು ರಸ್ತೆಯಲ್ಲಿ ಸಿಲ್ಕ್ ಬೋರ್ಡ್‌ ಕಡೆಯಿಂದ ಹೋದರೆ ಎಡಭಾಗಕ್ಕೆ ಮಂಗಮ್ಮನಪಾಳ್ಯ ಸಿಗುತ್ತದೆ. ಸೋಮಸುಂದ್ರಪಾಳ್ಯ, ಮುನೇಶ್ವರನಗರ, ವೆಂಕಟೇಶ್ವರ ಲೇಔಟ್‌ಗಳನ್ನು ಈ ವಾರ್ಡ್ ಒಳಗೊಂಡಿದೆ. ಕಾರ್ಮಿಕ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾರ್ಡ್‌ನಲ್ಲಿದ್ದರೆ, ಐ.ಟಿ ಕಂಪನಿಗಳ ಉದ್ಯೋಗಿಗಳೂ ಕೆಲ ಬಡಾವಣೆಗಳಲ್ಲಿ ಇದ್ದಾರೆ. ಅಲ್ಲಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯಗಳು ತಲೆ ಎತ್ತಿವೆ. ಹೊಸೂರು ರಸ್ತೆಯ ಪಕ್ಕದಲ್ಲೇ ಇರುವ ಗಾರ್ವೇಬಾವಿಪಾಳ್ಯ ಕೆರೆ ಕಸ ಮತ್ತು ಕಟ್ಟಡ ಅವಶೇಷ ಸುರಿಯುವ ತಾಣವಾಗಿದೆ. ಮಂಗನಪಾಳ್ಯದ ಕಿಷ್ಕಿಂಧೆಯಂತ ರಸ್ತೆ ಬದಿಯ ಖಾಲಿ ನಿವೇಶನಗಳಲ್ಲಿ ಅಲ್ಲಲ್ಲಿ ಕಸ ಬಿದ್ದಿದೆ. ಇಲ್ಲಿನ ಮುಖ್ಯ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ. ಒಳಚರಂಡಿ ನೀರಿನ ದುರ್ನಾತ ಸುತ್ತಮುತ್ತಲ ಅಂಗಡಿ ಮತ್ತು ಮನೆಗಳ ನಿವಾಸಿಗಳಿಗೆ ಕಿರಿಕಿರಿ ತಂದೊಡ್ಡಿದೆ.

ಹೊಂಗಸಂದ್ರ–189

ಬಹುತೇಕ ಗಾರ್ಮೆಂಟ್ಸ್‌ ನೌಕರರೇ ವಾಸಿಸುವ ಹೊಂಗಸಂದ್ರ ವಾರ್ಡ್‌ನಲ್ಲಿ ಹೊಸೂರು ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇದೆ. ಆದರ್ಶ ಬಡಾವಣೆ, ಸಿಲ್ಕ್ ಬೋರ್ಡ್ ಲೇಔಟ್, ಎಂಆರ್‌ಎಸ್‌ ಬಡಾವಣೆ, ಶಾಂತಿನಗರ, ಮುನಿಸ್ವಾಮಪ್ಪ ಲೇಔಟ್, ಮೈಕೊ ಲೇಔಟ್‌ಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. 63 ಕಿ.ಮೀ. ರಸ್ತೆ ಮತ್ತು 542 ಕ್ರಾಸ್‌ಗಳು ವಾರ್ಡ್‌ನಲ್ಲಿದೆ. ಸಣ್ಣಪುಟ್ಟ ರಸ್ತೆಗಳು ಮತ್ತು ಉದ್ಯಾನಗಳು ಬಹುತೇಕ ಅಭಿವೃದ್ಧಿಗೊಂಡಿವೆ. ಬೇಗೂರು ಮುಖ್ಯರಸ್ತೆಯಿಂದ ಹೊಸೂರು ರಸ್ತೆ ವರೆಗಿನ ರಾಜಕಾಲುವೆಯನ್ನು ಒಂದು ಮೀಟರ್‌ನಷ್ಟು ಎತ್ತರಿಸಲಾಗಿದೆ. ಅದಕ್ಕೆ ಕಸ ಸುರಿಯುವುದನ್ನು ತಪ್ಪಿಸಲು ಚೈನ್‌ಲಿಂಕ್ ಫೆನ್ಸಿಂಗ್ ಅಳವಡಿಸಲಾಗಿದೆ. ಈ ವಾರ್ಡ್‌ನ ದೊಡ್ಡ ಸಮಸ್ಯೆ ಎಂದರೆ ಬೇಗೂರು ಮುಖ್ಯ ರಸ್ತೆ ವಿಸ್ತರಣೆ ಆಗದಿರುವುದು. ಬೆಳಿಗ್ಗೆ ಹಾಗೂ ಸಂಜೆ ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ಸವಾಲಿನ ಕೆಲಸ.

ಈ ರಸ್ತೆ ವಿಸ್ತರಣೆ ಪ್ರಸ್ತಾವ ಹಲವು ವರ್ಷಗಳಿಂದ ಹಾಗೆಯೇ ಉಳಿದಿದೆ. ರಸ್ತೆ ಬದಿ ಇರುವ ಕಟ್ಟಡಗಳ ಸ್ವಾಧೀನ ಆಗಬೇಕಿದೆ. ಕಟ್ಟಡ ಕಳೆದುಕೊಳ್ಳುವ ಮಾಲೀಕರಿಗೆ ಟಿಡಿಆರ್‌ (ಅಭಿವೃದ್ಧಿ ಹಕ್ಕು ವರ್ಗಾವಣೆ) ವಿತರಣೆಯಲ್ಲಿನ ಗೊಂದಲ ಮತ್ತು ಅಧಿಕಾರಿಗಳ ವಿಳಂಬದಿಂದ ರಸ್ತೆ ವಿಸ್ತರಣೆ ಕನಸಾಗಿಯೇ ಉಳಿದಿದೆ.

ಟಿಡಿಆರ್ ದೊಡ್ಡ ಸಮಸ್ಯೆ

ಬೇಗೂರು ಮುಖ್ಯರಸ್ತೆ ವಿಸ್ತರಣೆ ಆಗಬೇಕಿರುವುದನ್ನು ಬಿಟ್ಟರೆ ವಾರ್ಡ್‌ನಲ್ಲಿ ಬೇರೆ ಸಮಸ್ಯೆ ಇಲ್ಲ. ಟಿಡಿಆರ್ ವಿತರಣೆಯಾಗದ ಕಾರಣ ವಿಳಂಬವಾಗುತ್ತಿದೆ. ರಸ್ತೆ ವಿಸ್ತರಣೆಗೆ ಶಾಸಕ ಸತೀಶ್‌ರೆಡ್ಡಿ ಅವರೂ ಮುತುವರ್ಜಿ ವಹಿಸಿದ್ದಾರೆ. ವಾರ್ಡ್‌ ಅಭಿವೃದ್ಧಿಗೆ ₹50 ಕೋಟಿ ಅನುದಾನ ಕೊಡಿಸಿದ್ದಾರೆ.

–ಭಾರತಿ ರಾಮಚಂದ್ರ,ಹೊಂಗಸಂದ್ರ ವಾರ್ಡ್‌ ಪಾಲಿಕೆ ಸದಸ್ಯೆ

₹85 ಕೋಟಿ ಅನುದಾನ

ಎಲ್ಲಾ 33 ಉದ್ಯಾನಗಳು, ಎರಡು ಎಸ್‌ಟಿಪಿ, ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು ₹15 ಕೋಟಿ ಅನುದಾನವನ್ನೂ ನೀಡಿರಲಿಲ್ಲ. ಬಿಜೆಪಿ ಸರ್ಕಾರದಲ್ಲಿ ₹85 ಕೋಟಿ ಅನುದಾನ ದೊರೆತಿದೆ. ಅಭಿವೃದ್ಧಿ ಕೆಲಸಗಳು ಆರಂಭವಾಗಿದ್ದು, ವಾರ್ಡ್‌ ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ವಾರ್ಡ್ ಎಂಬ ಹೆಗ್ಗಳಿಗೂ ಪಾತ್ರವಾಗಲಿದೆ

–ಗುರುಮೂರ್ತಿ ರೆಡ್ಡಿ, ಎಚ್‌ಎಸ್‌ಆರ್ ಬಡಾವಣೆ ಪಾಲಿಕೆ ಸದಸ್ಯ

ಬಿಳೇಕಹಳ್ಳಿ ಮತ್ತು ಮಂಗಮ್ಮನಪಾಳ್ಯ ಪಾಲಿಕೆ ಸದಸ್ಯರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ

ಸಂಚಾರ ದಟ್ಟಣೆಯೇ ಸವಾಲು

ಬಿಳೇಕಹಳ್ಳಿ ನಿಲ್ದಾಣದಿಂದ ಕೋಡಿಚಿಕ್ಕನಹಳ್ಳಿ ಮುಖ್ಯ ರಸ್ತೆಯಲ್ಲಿ ಬಿಟಿಎಂ ಕಡೆಗೆ ಹೋಗುವುದೇ ಕಷ್ಟದ ಕೆಲಸ. ಬೆಳಗಿನ ಜಾವದಿಂದಲೇ ಸಂಚಾರ ದಟ್ಟಣೆ ಆರಂಭವಾಗುತ್ತದೆ. ಸಂಜೆ ಕೂಡ ಇದೇ ಸಮಸ್ಯೆ.

–ಗಣೇಶ್, ಬಿಳೇಕಹಳ್ಳಿ

–––

ವಿಸ್ತರಣೆಯಾಗದ ಬೇಗೂರು ರಸ್ತೆ

ಹೊಸೂರು ರಸ್ತೆಯಿಂದ ಆರಂಭವಾಗುವ ಬೇಗೂರು ಮುಖ್ಯ ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ಸಾಧ್ಯವೇ ಆಗುವುದಿಲ್ಲ. ವಾಹನಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಸಮಸ್ಯೆಯೂ ಹೆಚ್ಚಾಗುತ್ತಿದೆ. ರಸ್ತೆ ವಿಸ್ತರಣೆಗೆ ಇರುವ ತೊಡಕುಗಳನ್ನು ಬಿಬಿಎಂಪಿ ಅಧಿಕಾರಿಗಳು ನಿವಾರಿಸಬೇಕು.

–ಮಧು, ಬೊಮ್ಮನಹಳ್ಳಿ

–––

ದುರ್ನಾತ ತಪ್ಪಿಸಬೇಕು

ಹಳೇ ಮಂಗಮ್ಮನಪಾಳ್ಯ ಮುಖ್ಯರಸ್ತೆಯನ್ನು ಅಭಿವೃದ್ಧಿಪಡಿಸುವ ಕಾರಣಕ್ಕೆ ಅಗೆಯಲಾಗಿದೆ. ಮೂರು ತಿಂಗಳಿಂದ ಸಮಸ್ಯೆ ಅನುಭವಿಸುತ್ತಿದ್ದೇವೆ. ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಸಮಸ್ಯೆ ತಪ್ಪಿಸಬೇಕು

–ಕುಮಾರ್, ಮಂಗಮ್ಮನಪಾಳ್ಯ

––

ರಸ್ತೆ ಸರಿಪಡಿಸಿ

ಎಚ್‌ಎಸ್ಆರ್ ಬಡಾವಣೆಯಲ್ಲಿ ಸುಸಜ್ಜಿತ ರಸ್ತೆಗಳಿವೆ. ಚೆನ್ನಾಗಿದ್ದ ರಸ್ತೆಯನ್ನು ಪೈಪ್‌ಲೈನ್ ಕಾಮಗಾರಿ ನೆಪದಲ್ಲಿ ಅಗೆಯಲಾಗಿದೆ. ಹೀಗಾಗಿ ದೂಳು ಮತ್ತು ಗುಂಡಿಯ ನಡುವೆ ವಾಹನ ಚಾಲನೆ ಮಾಡಬೇಕಿದೆ. ಪಾಲಿಕೆ ಅಧಿಕಾರಿಗಳು ಕೂಡಲೇ ರಸ್ತೆಗೆ ಡಾಂಬರ್ ಹಾಕಿಸಬೇಕು

–ಮೋಹನ್, ಎಚ್‌ಎಸ್‌ಆರ್ ಬಡಾವಣೆ

ಮೂರು ಪ್ರಮುಖ ಸಮಸ್ಯೆಗಳು

ಬಿಳೇಕಹಳ್ಳಿ

* ಮಡಿವಾಳ ಕೆರೆಗೆ ಸೇರುತ್ತಿದೆ ಶೌಚಗುಂಡಿ ನೀರು

* ಕಿರಿದಾದ ರಸ್ತೆಯಲ್ಲಿ ಸಂಚಾರವೇ ಸವಾಲು

* ಕಳೆ ಬೆಳೆದ ಕಾರಣ ಬೋಟಿಂಗ್ ಸ್ಥಗಿತ

ಹೊಂಗಸಂದ್ರ

* ಬೆಳಿಗ್ಗೆ–ಸಂಜೆ ಸಂಚಾರ ದಟ್ಟಣೆ ಸಮಸ್ಯೆ

* ವಿಸ್ತರಣೆಯಾಗದ ಬೇಗೂರು ಮುಖ್ಯರಸ್ತೆ

* ದೂಳು, ಗುಂಡಿಗಳ ನಡುವೆ ಸಂಚಾರ

ಮಂಗಮ್ಮನಪಾಳ್ಯ

* ಕೆರೆ ಸೇರುತ್ತಿರುವ ಕಟ್ಟಡಗಳ ನಿವೇಶನ

* ಅಗೆದು ಬಿಟ್ಟಿರುವ ರಸ್ತೆಗಳಲ್ಲಿ ಸಂಚಾರ ಸಮಸ್ಯೆ

* ಖಾಲಿ ನಿವೇಶನಗಳಲ್ಲಿ ಕಸದ ರಾಶಿ

ಎಚ್‌ಎಸ್‌ಆರ್ ಬಡಾವಣೆ

* ರಾಜಕಾಲುವೆ ನೀರು ಮನೆಗೆ ನುಗ್ಗುವ ಆತಂಕ

* ಅಗೆದು ಬಿಟ್ಟಿರುವ ರಸ್ತೆಯಲ್ಲಿ ದೂಳಿನ ಸಮಸ್ಯೆ

* ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ

2011ರ ಜನಗಣತಿ ಪ್ರಕಾರ ಜನಸಂಖ್ಯೆ

ಬಿಳೇಕಹಳ್ಳಿ– 49,884

ಹೊಂಗಸಂದ್ರ- 68,554

ಮಂಗಮ್ಮನಪಾಳ್ಯ– 65,890‌

ಎಚ್‌ಎಸ್‌ಆರ್ ಲೇಔಟ್– 63,033

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT