ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಕಸ ನಿರ್ವಹಣೆ–ಜನರಿಗೂ ಇದೆ ಹೊಣೆ’

ಕಸ ನಿರ್ವಹಣೆ ನಿಯಮಗಳ ಕಟ್ಟುನಿಟ್ಟಿನ ಪಾಲನೆ: ನಿವೃತ್ತ ನ್ಯಾ.ಸುಭಾಷ್ ಬಿ. ಅಡಿ ಸೂಚನೆ
Last Updated 24 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಣೆಯ ಹೊಣೆ ಅಧಿಕಾರಿಗಳಿಗೆ ಸೀಮಿತವಲ್ಲ. ಕಸ ನಿರ್ವಹಣೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯೂ ಮುಖ್ಯ’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೇಮಿಸಿರುವ ‘ರಾಜ್ಯ ಮಟ್ಟದ ಕಸ ನಿರ್ವಹಣೆ ಉಸ್ತುವಾರಿ ಸಮಿತಿ’ಯ ಅಧ್ಯಕ್ಷ ನ್ಯಾ.ಸುಭಾಷ್ ಬಿ. ಅಡಿ ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಕಸ ನಿರ್ವಹಣೆ ನಿಯಮಗಳು-2016’ ಅನುಷ್ಠಾನ, ಕಸ ನಿರ್ವಹಣೆ, ಸಾಗಣೆ ಮತ್ತು ಸಂಸ್ಕರಣೆ ಪ್ರಕ್ರಿಯೆ ಸುಧಾರಣೆ ಕುರಿತು ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ನಾಗರಿಕರು ತಮ್ಮ ಜವಾಬ್ದಾರಿಯನ್ನು ಅರಿತು ಹಸಿ ಹಾಗೂ ಒಣ ಕಸವನ್ನು ಮೂಲದಲ್ಲೇ ವಿಂಗಡಣೆ ಮಾಡಿ ಪಾಲಿಕೆಗೆ ಕೊಡಬೇಕು. ನಗರದಲ್ಲಿ ಶೇ 40 ರಷ್ಟು ಕಸವು ಸಗಟು ಕಸ ಉತ್ಪಾದಕರಿಂದ ಬರುತ್ತಿದೆ. ಎಷ್ಟು ಪ್ರಮಾಣದಲ್ಲಿ ಸಗಟು ಕಸ ಉತ್ಪಾದನೆ ಆಗುತ್ತಿದೆ, ಅದರ ವಿಲೇವಾರಿಗೆ ಪಾಲಿಕೆಯಲ್ಲಿ ಎಷ್ಟು ಮಂದಿ ನೋಂದಣಿಯಾಗಿದ್ದಾರೆ, ಅದನ್ನು ಎಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂಬ ಬಗ್ಗೆಯೂ ಅಧಿಕಾರಿಗಳು ನಿಗಾ ಇಡಬೇಕು. ‌ಕಸ ಉತ್ಪಾದನೆಯಾಗುವ ಸ್ಥಳಗಳ ಸಮೀಕ್ಷೆ ನಡೆಸಬೇಕು. ಒಟ್ಟು ಅಂಗಡಿಗಳು, ಅವುಗಳ ವಿಧ, ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಸಂಖ್ಯೆ, ಅವುಗಳಲ್ಲಿ ಸಂಗ್ರಹಣೆಯಾಗುವ ಕಸಕ್ಕೆ ಸಂಬಂಧಿಸಿದ ಮಾಹಿತಿ ಪಾಲಿಕೆಯಲ್ಲಿ ಲಭ್ಯವಿರಬೇಕು’ ಎಂದರು.

‘ಸಗಟು ಕಸ ಉತ್ಪಾದಕರ ಮೇಲೂ ಮಾರ್ಷಲ್‌ಗಳು ಕಣ್ಣಿಡಬೇಕು. ನಗರದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಸಗಿ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಕಟ್ಟುನಿಟ್ಟಾಗಿ ದಂಡ ವಿಧಿಸಬೇಕು. ಕಸವನ್ನು ಸರಿಯಾದ ಕ್ರಮದಲ್ಲಿ ನೀಡುವ ಬಗ್ಗೆ ಜಾಗೃತಿ ಮೂಡಿಸಬೇಕು. ಅವರು ಕಸವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ದಂಡ ವಿಧಿಸಬೇಕು’ ಎಂದು ಸಲಹೆ ನೀಡಿದರು.

‘ನಗರದಲ್ಲಿರುವ ಕಸ ಸಂಸ್ಕರಣ ಘಟಕಗಳೆಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಅಲ್ಲಿ ಪರಿಸರದ ಸ್ವಚ್ಛತೆ ಕಾಪಾಡಲಾಗಿದೆಯೇ ಎಂಬುದನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯವರು ಆಗಿಂದಾಗ್ಗೆ ಪರಿಶೀಲಿಸಬೇಕು. ಸುತ್ತಮುತ್ತಲಿನ ನೀರು, ಗಾಳಿ ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕು. ಕಸ ಸಂಸ್ಕರಣೆಯಿಂದ ಸ್ಥಳೀಯರಿಗೆ ಸಮಸ್ಯೆ ಆಗದಂತೆ ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ನ್ಯಾ.ಸುಭಾಷ್‌ ಬಿ.ಅಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ನಗರದಲ್ಲಿ ಕಸ ವಿಲೇವಾರಿಗೆ ತಳಮಟ್ಟದ ಯೋಜನೆ ರೂಪಿಸಬೇಕು. ಕಸ ನಿರ್ವಹಣೆ ನಿಯಮಗಳನ್ನು ಪಾಲಿಸವರಿಗೆ ಮುಲಾಜಿಲ್ಲದೇ ದಂಡವನ್ನು ವಿಧಿಸಬೇಕು. ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸಿ ಕೊಡುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ಜನರ ಸಹಭಾಗಿತ್ವ ಹೆಚ್ಚಿಸಲು ಆಯಾ ವಲಯದ ಜಂಟಿ ಆಯುಕ್ತರು ಕಾರ್ಯಕ್ರಮ ರೂಪಿಸಬೇಕು’ ಎಂದು ಸೂಚಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು, ‘ಖಾಲಿ ಸ್ಥಳಗಳಲ್ಲಿ ಕಸ ಬಿಸಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕಸ ಸಂಸ್ಕರಣಾ ಘಟಕಗಳ ಸುತ್ತ ಮೀಸಲು ವಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದರು.

ಕಸ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT