ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಷಭಾವತಿ ಕಣಿವೆಗೆ ತ್ಯಾಜ್ಯ: ಪ್ರೆಸ್ಟೀಜ್‌ ಬಾಗಮನೆಗೆ ದಂಡ

Published 5 ಡಿಸೆಂಬರ್ 2023, 19:57 IST
Last Updated 5 ಡಿಸೆಂಬರ್ 2023, 19:57 IST
ಅಕ್ಷರ ಗಾತ್ರ

ಬೆಂಗಳೂರು: 900 ಫ್ಲ್ಯಾಟ್‌ಗಳ ಮಿಶ್ರಿತ ತ್ಯಾಜ್ಯವನ್ನು ವೃಷಭಾವತಿ ಕಣಿವೆಗೆ ಸುರಿಯುತ್ತಿದ್ದ ಪ್ರೆಸ್ಟೀಜ್‌ ಬಾಗಮನೆ ಟೆಂಪಲ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ಗೆ ಬಿಬಿಎಂಪಿ ₹25 ಸಾವಿರ ದಂಡ ವಿಧಿಸಿದೆ.

ರಾಜರಾಜೇಶ್ವರಿ ನಗರದ ಜವರೇಗೌಡದೊಡ್ಡಿ ಮುಖ್ಯರಸ್ತೆಯಲ್ಲಿರುವ ಪ್ರೆಸ್ಟೀಜ್‌ ಬಾಗಮನೆ ಟೆಂಪಲ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ 900ಕ್ಕೂ ಅಧಿಕ ಫ್ಲ್ಯಾಟ್‌ಗಳಿವೆ. ಇಲ್ಲಿ ತ್ಯಾಜ್ಯವನ್ನು ವಿಂಗಡಿಸದೆ ಒಂದು ಬಿನ್‌ನಲ್ಲಿ ಎಲ್ಲ ಕಸವನ್ನು ಸಂಗ್ರಹಿಸಲಾಗುತ್ತಿದೆ ಎಂದು ತೋರಿಸಲಾಗುತ್ತಿತ್ತು. 

ಬಿಬಿಎಂಪಿ ತಪಾಸಣೆ ನಡೆಸಿದ ಸಂದರ್ಭದಲ್ಲಿ, ಯಾವುದೇ ಅನುಮತಿ ಪಡೆಯದ ವ್ಯಕ್ತಿಗೆ ಮಿಶ್ರಿತ ತ್ಯಾಜ್ಯವನ್ನು ನೀಡಲಾಗುತ್ತಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಮಿಶ್ರಿತ ತ್ಯಾಜ್ಯವನ್ನು ಪ್ಲಾಸ್ಟಿಕ್‌ ಬಿನ್‌ಗಳಲ್ಲಿ ತಂದು ಪಕ್ಕದಲ್ಲಿರುವ ವೃಷಭಾವತಿ ಕಣಿವೆಗೆ ಸುರಿಯುತ್ತಿರುವುದನ್ನೂ ಪತ್ತೆ ಮಾಡಲಾಗಿದೆ. ಚಿತ್ರಗಳ ಮೂಲಕ ಇದನ್ನು ದೃಢಪಡಿಸಲಾಗಿದ್ದು, ಕಾನೂನು ಉಲ್ಲಂಘಿಸಲಾಗಿದೆ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನೋಟಿಸ್‌ ನೀಡಿದ್ದಾರೆ.

‘ಸರ್ಕಾರದ ನಿಯಮದಂತೆ 100 ಕೆ.ಜಿಗಿಂತಲೂ ಹೆಚ್ಚಿನ ಪ್ರಮಾಣದ ತ್ಯಾಜ್ಯ ಉತ್ಪಾದಕರು, ಅವರ ಆವರಣದಲ್ಲೇ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಸಂಸ್ಕರಣೆ ನಡೆಸಬೇಕು. 900 ಫ್ಲ್ಯಾಟ್‌ಗಳಿರುವ ಪ್ರೆಸ್ಟೀಜ್‌ ಬಾಗಮನೆ ಟೆಂಪಲ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಈ ವ್ಯವಸ್ಥೆ ಇಲ್ಲ. ಇಷ್ಟು ತ್ಯಾಜ್ಯವನ್ನು ಒಣ, ಹಸಿ, ಸ್ಯಾನಿಟರಿ ಎಂದು ಪ್ರತ್ಯೇಕವಾಗಿ ಬೇರ್ಪಡಿಸುತ್ತಿಲ್ಲ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ಪ್ರಜ್ಞಾವಂತ ನಾಗರಿಕರಾದ ತಾವು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಉತ್ಪತ್ತಿಯಾಗುವ ಎಲ್ಲ ಮಾದರಿ ತ್ಯಾಜ್ಯವನ್ನು ಒಂದೇ ಬಿನ್‌ನಲ್ಲಿ ಸಂಗ್ರಹಿಸಿಟ್ಟಿರುತ್ತೀರಿ. ಇದನ್ನು ಸರಿಪಡಿಸಲು ಪಾಲಿಕೆ ನೌಕರರು ಹೇಳಿದ್ದರೂ ಉದಾಸೀನ ತೋರಿದ್ದೀರಿ. ನಿಮ್ಮ ಅಪಾರ್ಟ್‌ಮೆಂಟ್‌ ತ್ಯಾಜ್ಯವನ್ನು ಅನುಮತಿ ಪಡೆದ ಅಧಿಕೃತ ಸಂಸ್ಕರಣೆ ಘಟಕಕ್ಕೆ ಮಾತ್ರ ನೀಡಬೇಕು. ಈಗ ನೀವು ತ್ಯಾಜ್ಯ ನೀಡುತ್ತಿರುವ ಸಂಸ್ಥೆ ಅನಧಿಕೃತವಾದದ್ದು. ಹೀಗಾಗಿ ದಂಡ ಪಾವತಿಸಬೇಕು’ ಎಂದು ಪ್ರೆಸ್ಟೀಜ್‌ ಬಾಗಮನೆ ಟೆಂಪಲ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘದ ಸಂತೋಷ್‌ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

‘ಇದರಂತೆ ₹25 ಸಾವಿರ ದಂಡ ಪಾವತಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ನಿಯಮಾನುಸಾರ ಮಾಡದಿದ್ದರೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕದ ಪರವಾನಗಿ ರದ್ದುಪಡಿಸಲು ಶಿಫಾರಸು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT