ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಶ್ಚಿಮಘಟ್ಟಗಳಲ್ಲಿ ಸೂಕ್ಷ್ಮಪ್ರದೇಶಗಳನ್ನು ಘೋಷಣೆ ಅನುಕೂಲಕರ’

‘ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌’ ಪ್ರತಿಪಾದನೆ
Last Updated 21 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಪಶ್ಚಿಮಘಟ್ಟಗಳಲ್ಲಿ ಸೂಕ್ಷ್ಮಪ್ರದೇಶಗಳನ್ನು (ಇಎಸ್‌ಎ) ಘೋಷಣೆ ಮಾಡುವ ಮೂಲಕ ಅದಕ್ಕೊಂದು ಸಾಂವಿಧಾನಿಕ ಭದ್ರತೆ ಸಿಗುವಂತೆ ಮಾಡಬೇಕು. ಆ ಮೂಲಕ, ಪರಿಸರ ವಿನಾಶಕಾರಿ ಯೋಜನೆಗಳಿಂದ ಈ ಸೂಕ್ಷ್ಮಪ್ರದೇಶಗಳಿಗೆ ರಕ್ಷಣೆ ನೀಡಲು ಸಾಧ್ಯ’ ಎಂದು ಪರಿಸರ ಪರ 80ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟ ‘ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌’ ಪ್ರತಿಪಾದಿಸಿದೆ.

‘ಪಶ್ಚಿಮಘಟ್ಟಗಳಲ್ಲಿ ಸೂಕ್ಷ್ಮಪ್ರದೇಶ
ಗಳನ್ನು ಗುರುತಿಸುವ ಸಲುವಾಗಿ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಜುಲೈ 6ರಂದು ಕರಡು ಅಧಿಸೂಚನೆ ಹೊರಡಿ
ಸಿದೆ. ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ಅನುಸರಿಸುವುದು ಈ ಹೊತ್ತಿನ ತುರ್ತು. ಹೀಗಾಗಿ ಕರಡು ಅಧಿಸೂಚನೆಯಲ್ಲಿ ಕೈಬಿಟ್ಟಿ
ರುವ ಸೂಕ್ಷ್ಮಪ್ರದೇಶಗಳನ್ನೂ ಪರಿಸರ ಸೂಕ್ಷ್ಮಪ್ರದೇಶಗಳೆಂದು ಘೋಷಿಸ
ಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ‘ಫಾರೆಸ್ಟ್‌ ಫಸ್ಟ್‌’ ಸಮಿತಿಯ ಮೀರಾ ರಾಜೇಶ್‌ ಅವರು ಆಗ್ರಹಿಸಿದರು.

‘ಪಶ್ಚಿಮಘಟ್ಟಗಳಲ್ಲಿ ಸೂಕ್ಷ್ಮಪ್ರದೇಶ (ಇಎಸ್‌ಎ) ಘೋಷಣೆ ಇಂದ ಸ್ಥಳೀಯರಿಗೆ ಸಮಸ್ಯೆಯಾಗಲಿದೆ ಎಂದು ತಪ್ಪು ಮಾಹಿತಿ ನೀಡ
ಲಾಗುತ್ತಿದೆ. ಜನಪ್ರತಿನಿಧಿಗಳು
ಕೂಡಾ ಜನರಲ್ಲಿ ಭೀತಿ ಮೂಡಿಸುತ್ತಿದ್ದಾರೆ. ಆದರೆ, ಈ ಘೋಷಣೆ
ಯಿಂದಾಗಿ ಅನಗತ್ಯ ಅಭಿವೃದ್ಧಿಯಿಂದ ಘಟ್ಟ ಪ್ರದೇಶಗಳು ನಾಶ ಆಗುವು
ದನ್ನು ನಿಲ್ಲಿಸಬಹುದು. ಪರಿಸರ ಸೂಕ್ಷ್ಮ ಹಳ್ಳಿಗಳೆಂದರೆ, ಅವು ರೈತರಿಗೆ ಹಾಗೂ ಅಲ್ಲಿ ವಾಸಿಸುವ ಇತರರಿಗೆ ಸುರಕ್ಷಿತ ಪ್ರದೇಶವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಪಶ್ಚಿಮಘಟ್ಟಗಳ ರೈತರ ಕ್ಷೇಮಕ್ಕೆ ಪರಿಸರ ಸೂಕ್ಷ್ಮ ಪ್ರದೇಶ ಬೇಕಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳಿಗೆ ಇನ್ನೂ ಹೆಚ್ಚಿನ ರಕ್ಷಣೆ ನೀಡುವ ಉದ್ದೇಶದಿಂದ 2000 ದಲ್ಲಿ ಪ್ರಣವ್‌ ಸೇನ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸುಮಾರು ಒಂದು ದಶಕದ ನಂತರ ಪಶ್ಚಿಮಘಟ್ಟಗಳ ಸಂರಕ್ಷಣೆಯ ಸಲುವಾಗಿ ರಚಿಸಿದ ಪ್ರೊ. ಮಾಧವ ಗಾಡ್ಗಿಳ್‌ ನೇತೃತ್ವದ ಸಮಿತಿಯು ಪಶ್ಚಿಮಘಟ್ಟಗಳ ಶೇ 64 ರಷ್ಟು ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಿತು. ಇಲ್ಲಿ ಗಣಿಗಾರಿಕೆ, ಕೆಂಪು ಪಟ್ಟಿಯಲ್ಲಿ ಬರುವ ಅಥವಾ ಮಾಲಿನ್ಯಕಾರಕ ಕಾರ್ಖಾನೆಗಳಿಗೆ ನಿಷೇಧ ಹೇರಿತ್ತು. ನಂತರದಲ್ಲಿ ಬಂದ ಡಾ. ಕಸ್ತೂರಿ ರಂಗನ್‌ ವರದಿಯು ಗಾಡ್ಗಿಳ್‌ ವರದಿಯ ಶಿಫಾರಸ್ಸಿಗೆ ವಿರುದ್ಧವಾಗಿ ಶೇ 37 ರಷ್ಟು ಭಾಗವನ್ನು ಮಾತ್ರ ಪರಿಸರ ಸೂಕ್ಷ್ಮಪ್ರದೇಶವೆಂದು ಶಿಫಾರಸು ಮಾಡಿತ್ತು. ನ್ಯಾಯಾಲಯದ ಮಧ್ಯಪ್ರವೇಶದ ಬಳಿಕವೂ ಯಾವುದೇ ಸರ್ಕಾರಗಳು ಪಶ್ಚಿಮಘಟ್ಟ ಸೂಕ್ಷ್ಮಪ್ರದೇಶಗಳನ್ನು ಗುರುತಿಸುವ ಬದಲು ವಿವಿಧ ವರದಿಗಳನ್ನು ಹಳಿಯುವ ಮತ್ತು ಜನರಿಗೆ ಸುಳ್ಳು ಹೇಳಿ ದಿಕ್ಕು ತಪ್ಪಿಸುವ ಕೆಲಸ ಮಾಡಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿವಮೊಗ್ಗ ‘ಸ್ವಾನ್‌’ ಸಂಸ್ಥೆಯ ಅಖಿಲೇಶ್‌ ಚಿಪ್ಲಿ, ಕೊಡಗಿನವರಾದ ಕರ್ನಲ್‌ ಸಿ.ಪಿ.ಮುತ್ತಣ್ಣ, ವಿಜ್ಞಾನಿ ಹೇಮಂತ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT