ಬೆಂಗಳೂರು: ಕೊಡಗಿನ ಪುಷ್ಪಗಿರಿ ಪಕ್ಷಿಧಾಮ, ಆಭಯಾರಣ್ಯದ ಅನುಸೂಚಿತ ಪ್ರದೇಶದೊಳಗೆ ಕಾನೂನು ಉಲ್ಲಂಘಿಸಿ ರಸ್ತೆ ನಿರ್ಮಿಸಿದ ಆರೋಪ ಹೊತ್ತಿರುವ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ವಿರುದ್ಧ ಹಸಿರು ನ್ಯಾಯಪೀಠ ಆದೇಶದಂತೆ ರಾಜ್ಯ ಸರ್ಕಾರ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಕೊಡಗಿನವರೇ ಆದ ಭಾರತೀಯ ವಾಯುಪಡೆಯ ನಿವೃತ್ತ ಮುಖ್ಯಸ್ಥ ನಂದಾ ಕಾರ್ಯಪ್ಪ ಅವರು ಇಬ್ಬರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ 10 ವರ್ಷಗಳಿಗೂ ಮುಂಚೆ ರಿಟ್ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಕೇಂದ್ರ ಅಧಿಕಾರಯುಕ್ತ ಸಮಿತಿ ರಚಿಸಿತ್ತು. ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಸಮಿತಿ ಶಾಸಕರ ಸುಳ್ಳು ನೆಪಗಳನ್ನು ತಿರಸ್ಕರಿಸಿ ಅವರ ವಿರುದ್ಧ ಹಾಗೂ ಅಂದಿನ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು. ನಂತರ ರಾಷ್ಟ್ರೀಯ ಹಸಿರು ಪೀಠ 2017ರಲ್ಲಿ ಶಾಸಕರಿಗೆ ನೋಟಿಸ್ ನೀಡಿತ್ತು. ನಾಲ್ಕು ವರ್ಷ ನೋಟಿಸ್ ಕಡೆಗಣಿಸಿದ್ದರು. ವಿವರಣೆಯನ್ನೂ ನೀಡಿರಲಿಲ್ಲ ಎಂದು ವಿವರಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಂತರ ಅಗತ್ಯ ಶಿಕ್ಷೆಯ ಪ್ರಕ್ರಿಯೆ ಆರಂಭಿಸುವಂತೆ ಹಸಿರು ನ್ಯಾಯಪೀಠ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ರಾಜ್ಯ ಸರ್ಕಾರವೂ ಆದೇಶವನ್ನು ಪಾಲಿಸಿರಲಿಲ್ಲ. ಮೂರು ತಿಂಗಳ ಒಳಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನ್ಯಾಯಪೀಠ ಸೂಚಿಸಿದೆ ಎಂದು ಹೇಳಿದ್ದಾರೆ.
ಹಿಂದೆ ಪತ್ರಿಕಾ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದ ತಮಗೆ ಅಂದು ವಿಧಾನಸಭಾಧ್ಯಕ್ಷರಾಗಿದ್ದ ಬೋಪಯ್ಯ ‘ಹಕ್ಕು ಬಾಧ್ಯತಾ ಸಮಿತಿ’ ಮುಂದೆ ಕರೆಸಿದ್ದರು. ಹಕ್ಕು ಬಾಧ್ಯತಾ ಸಮಿತಿಗೆ ವಿಷಯ ಮನವರಿಕೆ ಮಾಡಿಸಿದ್ದೆ. ಈಗ ಶಿಕ್ಷೆ ಖಚಿತವಾಗಿದೆ. ಶಾಸಕರ ವಿರುದ್ಧ ಶಿಸ್ತು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.