ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರ ಸರಿದಾರಿಗೆ ತರಲು ಯೋಜನೆ ಏನು?: ಡಿ.ಕೆ.ಶಿವಕುಮಾರ್ ಪ್ರಶ್ನೆ

ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌ನಿಂದ ಹಕ್ಕೊತ್ತಾಯ– ಡಿ.ಕೆ. ಶಿವಕುಮಾರ್
Last Updated 5 ಸೆಪ್ಟೆಂಬರ್ 2020, 16:57 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಶಿಕ್ಷಣ ಕ್ಷೇತ್ರ ಕತ್ತಲೆಯಲ್ಲಿದೆ. 2 ಲಕ್ಷ ಶಿಕ್ಷಕರು ಸಂಬಳವಿಲ್ಲದೆ ಒದ್ದಾಡುತ್ತಿದ್ದಾರೆ. ಖಾಸಗಿ ಶಾಲೆಗಳ 40 ಸಾವಿರಕ್ಕೂ ಹೆಚ್ಚು ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವವರು ತಳ್ಳುಗಾಡಿ ವ್ಯಾಪಾರ, ಗಾರೆ ಕೆಲಸ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಶಿಕ್ಷಣ ಕ್ಷೇತ್ರವನ್ನು ಸರಿದಾರಿಗೆ ತರಲು ಸರ್ಕಾರದ ಯೋಜನೆ ಏನು’ ಎಂದು ಪ್ರಶ್ನಿಸಿದ್ದಾರೆ.

‘ರಾಜ್ಯದ 80 ಲಕ್ಷ ವಿದ್ಯಾರ್ಥಿಗಳ ಪೈಕಿ, ಶೇ 62.50 ಮಕ್ಕಳಿಗೆ ಮಾತ್ರ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಲಭ್ಯತೆ ಇದೆ. ಶೇ 53.75 ಮಕ್ಕಳಿಗೆ ಮಾತ್ರ ಇಂಟರ್ನೆಟ್ ಸಂಪರ್ಕ ಸೌಲಭ್ಯವಿದೆ. ತಂತ್ರಜ್ಞಾನದ ಲಭ್ಯತೆಯಿಲ್ಲದ ಮಕ್ಕಳು ಆನ್‌ಲೈನ್ ಶಿಕ್ಷಣ ಪಡೆಯುವುದಾದರೂ ಹೇಗೆ’ ಎಂದೂ ಕೇಳಿರುವ ಶಿವಕುಮಾರ್, ಪಕ್ಷದ ವತಿಯಿಂದ 10 ಹಕ್ಕೊತ್ತಾಯ ಮಂಡಿಸಿದ್ದಾರೆ.

‘ವಿದ್ಯಾರ್ಥಿಗಳ ಮನೆಗಳಿಗೆ ಮಧ್ಯಾಹ್ನದ ಬಿಸಿಯೂಟ ತಲುಪಿಸಿ ಅವರ ಪೌಷ್ಟಿಕತೆ ಕಾಪಾಡಬೇಕು. ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಸಿ, ಮರಳಿ ಶಾಲೆಗೆ ಕರೆತರುವ ಯೋಜನೆ ರೂಪಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿರುವವರಿಗೆ ಆರ್ಥಿಕ ಪರಿಹಾರ ಪ್ಯಾಕೇಜ್, ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಶಿಕ್ಷಕರಿಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಬಡ್ಡಿರಹಿತ ಸಾಲ ನೀಡುವ ಮೂಲಕ ಶಾಲೆಗಳ ಆರ್ಥಿಕ ಸಾಮರ್ಥ್ಯ ವೃದ್ಧಿಸಬೇಕು. ಖಾಸಗಿ ಶಾಲೆಗಳಿಗೆ ತೆರಿಗೆ ವಿನಾಯತಿ ನೀಡುವ ಮೂಲಕ, ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶಾಲಾ ಶುಲ್ಕ ಕಡಿಮೆ ಮಾಡುವ ಒತ್ತಡವನ್ನು ಸರ್ಕಾರ ಖಾಸಗಿ ಸಂಸ್ಥೆಗಳ ಮೇಲೆ ಹೇರಬೇಕು. ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಮಾರ್ಗಸೂಚಿ ಹೊರಡಿಸಬೇಕು. ಆದ್ಯತೆ ಮೇರೆಗೆ ತಂತ್ರಜ್ಞಾನ ಬಳಸಿಕೊಳ್ಳುವ ಅಂತರ ಕಡಿಮೆಗೊಳಿಸಬೇಕು. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಆದ್ಯತೆಯಾಗಿ ಪರಿಗಣಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.

‘ಈ ಸಂದರ್ಭದಲ್ಲಿ ರಾಜಕಾರಣ ಅಪೇಕ್ಷಣೀಯವಲ್ಲ’

‘ವೃಥಾ ಆರೋಪ ಮಾಡುವುದು ಬೇಡ. ನಾವೆಲ್ಲರೂ ನಮ್ಮ ಮಕ್ಕಳ ಹಿತ ಕಾಯಬೇಕಾಗಿದೆ. ದುಸ್ಥಿತಿಯಲ್ಲಿರುವ ಪೋಷಕರು, ಖಾಸಗಿ ಶಾಲಾ ಶಿಕ್ಷಕರನ್ನು ರಕ್ಷಿಸಬೇಕಿದೆ. ಅವರೊಂದಿಗೆ ನಾನು ಮುಕ್ತವಾಗಿ ಚರ್ಚಿಸಲು ಸಿದ್ಧನಿದ್ದೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ

‘ನಾವು ವೈಜ್ಞಾನಿಕವಾಗಿ, ಅತ್ಯಂತ ಪ್ರಜಾಸತ್ತಾತ್ಮಕವಾಗಿ ನಮ್ಮೆಲ್ಲ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ರಾಜಕಾರಣ ಅಪೇಕ್ಷಣೀಯವಲ್ಲ. ಜನರಿಗೆ ಬೇಕಿರುವುದು ರಾಜಕಾರಣಿಗಳು ನೀಡಬೇಕಿರುವ ವಿಶ್ವಾಸ. ಸರ್ಕಾರದ ಬದ್ಧತೆಯ ಬಗ್ಗೆ ಕಾಳಜಿ ಬೇಡವೆಂದೇ ನಾನು ಮನವಿ ಮಾಡುತ್ತೇನೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT