ಬೆಂಗಳೂರು: ‘ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ನಗರದಲ್ಲಿ ಸಾಧ್ಯ ಇರುವ ಎಲ್ಲ ಕಡೆಗಳಲ್ಲಿ ಪಾಲಿಕೆ ಬಜಾರ್‌ಗಳನ್ನು ನಿರ್ಮಿಸಿ’ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ವಿಜಯನಗರ ಬಸ್ ಹಾಗೂ ಮೆಟ್ರೊ ನಿಲ್ದಾಣಗಳ ಬಳಿ ನಿರ್ಮಿಸಿರುವ ದಕ್ಷಿಣ ಭಾರತದ ಮೊದಲ ಹವಾನಿಯಂತ್ರಿತ ಮಾರುಕಟ್ಟೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಕೃಷ್ಣಪ್ಪ ಅವರ ಕನಸಿನ ಕೂಸು ಇದು. ಈ ಪಾಲಿಕೆ ಬಜಾರ್‌ನ ಹಿಂದೆ ಅವರ 10 ವರ್ಷಗಳ ಪ್ರಯತ್ನವಿದೆ. ಅವರು ನನ್ನ ಮುಂದೆ ಈ ಬಗ್ಗೆ ಪ್ರಸ್ತಾವ ಇಟ್ಟ ಬಳಿಕ 2017ರಲ್ಲಿ ನಾನು ಪಾಲಿಕೆ ಬಜಾರ್‌ಗೆ ₹ 5 ಕೋಟಿ ಮಂಜೂರು ಮಾಡಿದ್ದೆ. ಈಗ ಒಟ್ಟು ₹ 13 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪಾಲಿಕೆ ಬಜಾರ್ ನಿರ್ಮಾಣಗೊಂಡಿದೆ’ ಎಂದು ಶ್ಲಾಘಿಸಿದರು.
‘ಬೆಂಗಳೂರು ನಗರ ಬಹಳ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಬಸ್ ನಿಲ್ದಾಣ ಹಾಗೂ ಮೆಟ್ರೊ ರೈಲು ನಿಲ್ದಾಣವಿರುವ ಸ್ಥಳದಲ್ಲಿಯೇ ಈ ಮಾರುಕಟ್ಟೆ ನಿರ್ಮಾಣಗೊಂಡಿರುವುದರಿಂದ ಜನರಿಗೆ ಅನುಕೂಲವಾಗಿದೆ. ಒಂದೇ ಕಡೆ ಎಲ್ಲ ತರಹದ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಿರುವುದು ಉತ್ತಮ ಕಾರ್ಯ. ಗಾಂಧಿ ಬಜಾರ್‌ನಂಥ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಇಂಥ ಬಜಾರ್‌ಗಳು ನಿರ್ಮಾಣಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳು ಎಷ್ಟೇ ಟೀಕೆ, ಅಪಪ್ರಚಾರ ಮಾಡಿದರೂ ‘ಗ್ಯಾರಂಟಿ’ ನಿಲ್ಲಿಸುವುದಿಲ್ಲ. ಜೊತೆಗೆ ಬೆಂಗಳೂರು ನಗರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ₹ 1.60 ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.
ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ‘ನಾನು ದೆಹಲಿಗೆ ಹೋದಾಗ ಅಲ್ಲಿನ ಪಾಲಿಕೆ ಬಜಾರ್ ನೋಡಿದ್ದೆ. ನಮ್ಮಲ್ಲಿಯೂ ಇಂಥ ಬಜಾರ್ ಆಗಬೇಕು ಎಂಬ ಯೋಚನೆ ಆಗ ಬಂದಿತ್ತು. ಬೀದಿ ಬದಿಯಲ್ಲಿ ವ್ಯಾಪಾರ ಮಾಡಿದಾಗ ಓಡಾಡುವ ಜನರಿಗೆ, ವಾಹನಗಳಿಗೆ ಮಾತ್ರವಲ್ಲ, ವ್ಯಾಪಾರಿಗಳಿಗೂ ತೊಂದರೆ ಉಂಟಾಗುತ್ತದೆ. ಅದನ್ನು ತಪ್ಪಿಸಲು ಈ ರೀತಿ ಪಾಲಿಕೆ ಬಜಾರ್ ನಿರ್ಮಿಸಬೇಕು ಎಂಬ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಇಟ್ಟಾಗ ಅವರು ಅನುದಾನ ನೀಡಿದರು’ ಎಂದು ನೆನಪು ಮಾಡಿಕೊಂಡರು.
ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ, ಕಾಂಗ್ರೆಸ್ ಮುಖಂಡ ಬಿ.ಎಸ್. ಶಿವಣ್ಣ ಮಳವಳ್ಳಿ, ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್. ಉಮಾಶಂಕರ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸಂಗೀತ ನಿರ್ದೇಶಕ ಸಾಧು ಕೋಕಿಲ, ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಒಟ್ಟು ವಿಸ್ತೀರ್ಣ: 1165 ಚದರ ಮೀಟರ್
ಬಜಾರ್‌ನ ಉದ್ದ 136 ಮೀಟರ್ ಅಗಲ 11 ಮೀಟರ್
ಪ್ರತಿ ಮಳಿಗೆಯ ವಿಸ್ತೀರ್ಣ 9 ಚದರ ಮೀಟರ್
ಒಟ್ಟು ಮಳಿಗೆಗಳು 79
ಹೊರಾಂಗಣದಲ್ಲಿ 5 ಒಳಾಂಗಣದಲ್ಲಿ 26 ಎ.ಸಿ. ಯುನಿಟ್‌ಗಳು
1 ಲಿಫ್ಟ್ 2 ಎಸ್ಕಲೇಟರ್ 8 ಪ್ರವೇಶ ದ್ವಾರ 145 ವಿದ್ಯುತ್ ದೀಪಗಳು
ಪ್ರತಿ ಮಳಿಗೆಗೆ ಅಗ್ನಿಶಾಮಕ ಉಪಕರಣ ಅಳವಡಿಕೆ
ಪಾಲಿಕೆ ಬಜಾರ್‌ಗೆ ವಿಜಯನಗರದ ಅರಸನಾಗಿದ್ದ ಶ್ರೀಕೃಷ್ಣದೇವರಾಯನ ಹೆಸರನ್ನು ಇಟ್ಟಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಉಲ್ಲೇಖಿಸಿದರು. ‘ಮೈಸೂರು ರಾಜ್ಯದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ನೀಡಿದ್ದರು. ಅವರ ಹೆಸರನ್ನು ಪಾಲಿಕೆ ಬಜಾರ್‌ಗೆ ಇಟ್ಟಿರುವುದು ಅವರಿಗೆ ನೀಡಿರುವ ಗೌರವ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.