ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ ಟಾಪಿಂಗ್‌: ವಿಳಂಬವೇ ಆತಂಕ- ಪ್ರತಿಷ್ಠಿತ ರಸ್ತೆಗಳ ಮೇಲ್ದರ್ಜೆಗೆ ಯೋಜನೆ

Published 10 ಜನವರಿ 2024, 21:29 IST
Last Updated 10 ಜನವರಿ 2024, 21:29 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಿ, ಮೇಲ್ದರ್ಜೆಗೆ ಏರಿಸುವ ವೈಟ್ ಟಾಪಿಂಗ್‌ ಕಾಮಗಾರಿ ಫೆಬ್ರುವರಿ ಅಂತ್ಯಕ್ಕೆ ಆರಂಭವಾಗಲಿದೆ. ವಾಹನ ದಟ್ಟಣೆ ಅತಿಹೆಚ್ಚಿರುವ ರಸ್ತೆಗಳಲ್ಲೇ ಈ ಕಾಮಗಾರಿ ನಡೆಯಲಿವೆ.

ಪ್ರತಿಷ್ಠಿತ ಎಂ.ಜಿ. ರಸ್ತೆ, ರೆಸಿಡೆನ್ಸಿ ರಸ್ತೆ, ರೇಸ್‌ ಕೋರ್ಸ್‌, ಕೆ.ಆರ್‌. ವೃತ್ತದ ರಸ್ತೆ, ಜಯನಗರ, ವಿಜಯನಗರ, ಬಳ್ಳಾರಿ ರಸ್ತೆ ಸೇರಿದಂತೆ 43 ರಸ್ತೆಗಳಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ನಡೆಯಲಿದೆ.

19 ವಿಧಾನಸಭೆ ಕ್ಷೇತ್ರಗಳ ಮುಖ್ಯ ಹಾಗೂ ಉಪ ಮುಖ್ಯರಸ್ತೆಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಗಳು ಒಂದೇ ಸಮಯದಲ್ಲಿ ಆರಂಭವಾಗಲಿವೆ. ಹಲವು ಟೆಂಡರ್‌ಶ್ಯೂರ್‌ ರಸ್ತೆಗಳಿಗೆ ಈ ರಸ್ತೆಗಳು ಸಂಪರ್ಕ ಕಲ್ಪಿಸಲಿವೆ. ವೈಟ್‌ ಟಾಪಿಂಗ್‌ ಕಾಮಗಾರಿಗಳಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದ್ದು, ಜ.20ರ ವೇಳೆಗೆ  9 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಆಹ್ವಾನಿಸಲಾಗುತ್ತಿದೆ.

‘ವೈಟ್‌ ಟಾಪಿಂಗ್ ರಸ್ತೆಯನ್ನು ಶೀಘ್ರವಾಗಿ ಮುಗಿಸುತ್ತೇವೆ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ಹೇಳುತ್ತಾರೆ. ಆದರೆ ಅವರು ಪೂರ್ವತಯಾರಿ ಇಲ್ಲದೆ ರಸ್ತೆಯನ್ನು ಅಗೆಯುತ್ತಾರೆ. ನಂತರ ಜಲಮಂಡಳಿ, ಬೆಸ್ಕಾಂ ಅಧಿಕಾರಿಗಳ ಮೇಲೆ ದೂರು ಹೇಳಿ ಕಾಮಗಾರಿಯನ್ನು ವಿಳಂಬ ಮಾಡುತ್ತಾರೆ. ಗುಬ್ಬಿ ತೋಟದಪ್ಪ ರಸ್ತೆಯ (ರೈಲ್ವೆ ನಿಲ್ದಾಣದ ಮುಂಭಾಗ) ವೈಟ್‌ ಟಾಪಿಂಗ್‌ ಕಾಮಗಾರಿ 2022ರ ನವೆಂಬರ್‌ನಲ್ಲಿ ಆರಂಭವಾಯಿತು. ಇನ್ನೂ ಮುಗಿದಿಲ್ಲ. ಹೀಗೆ ವರ್ಷಗಟ್ಟಲೆ ಕಾಮಗಾರಿ ನಡೆಸಿದರೆ, ವಾಣಿಜ್ಯ ಪ್ರದೇಶ ಹಾಗೂ ಪ್ರಮುಖ ರಸ್ತೆಗಳಲ್ಲಿ ಇನ್ನೂ ಹೆಚ್ಚು ವಾಹನ ದಟ್ಟಣೆ ಉಂಟಾಗುತ್ತದೆ. ಬಿಬಿಎಂಪಿ ಎಂಜಿನಿಯರ್‌ಗಳು ಕಾಮಗಾರಿ ಆರಂಭಿಸುವ ಮುನ್ನ ಎಲ್ಲವೂ ಗೊತ್ತಿರುವ ರೀತಿಯಲ್ಲೇ ಮಾತನಾಡುತ್ತಾರೆ. ನಂತರ ಕೈಚೆಲ್ಲಿ ಕೂರುತ್ತಾರೆ. ಇದರಿಂದಲೇ ವೈಟ್‌ ಟಾಪಿಂಗ್‌ ಎಂದರೆ ಆತಂಕ ಎದುರಾಗುತ್ತದೆ’ ಎಂದು ವ್ಯಾಪಾರಿ ಸಂತೋಷ್ ಹೇಳಿದರು.

ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಾಗಿ ನಗರ ಭೂ ಸಾರಿಗೆ ನಿರ್ದೇಶನಾಲಯ, ಸ್ವಯಂಚಾಲಿತ ಸಿಗ್ನಲ್ ತಂತ್ರಜ್ಞಾನವನ್ನು ಅಳವಡಿಸುತ್ತಿದೆ. ಎಂ.ಜಿ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಹೊಸೂರು ರಸ್ತೆಯ 28 ವೃತ್ತಗಳಲ್ಲಿ ‘ಮೊಡೆರಾಟೊ ವ್ಯವಸ್ಥೆ’ ಜಾರಿಯಾಗುತ್ತಿದೆ. ‘ಈ ರಸ್ತೆಗಳಲ್ಲೇ ವೈಟ್‌ ಟಾಪಿಂಗ್‌ ಕಾಮಗಾರಿ ಕೂಡ ಆರಂಭವಾಗಲಿವೆ. ಆಗ ಈ ವ್ಯವಸ್ಥೆಗೆ ತೊಂದರೆಯಾಗುವುದಿಲ್ಲವೇ’ ಎಂದು ಸ್ಥಳೀಯರು ಪ್ರಶ್ನಿಸಿದರು.

Cut-off box - 18 ತಿಂಗಳ ಯೋಜನೆ: ಪ್ರಹ್ಲಾದ್‌ ‘ಸರ್ಕಾರ ಅನುಮೋದಿಸಿರುವ ವೈಟ್‌ ಟಾಪಿಂಗ್‌ ಕಾಮಗಾರಿಗಳನ್ನು ಫೆಬ್ರುವರಿ ಅಂತ್ಯಕ್ಕೆ ಆರಂಭಿಸಲಾಗುತ್ತದೆ. 18 ತಿಂಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಪೂರ್ಣಗೊಳ್ಳಲಿದೆ. ನಗರದ ಹೃದಯ ಭಾಗದಲ್ಲಿ ಕಾಮಗಾರಿಗಳು ನಡೆಯಲಿದ್ದು ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಪೊಲೀಸರ ನೆರವಿನೊಂದಿಗೆ ಹೆಚ್ಚಿನ ದಟ್ಟಣೆಯಾಗದಂತೆ ಕ್ರಮ ವಹಿಸಲಾಗುತ್ತದೆ. ನಿಗದಿಯಾದ ಸಮಯದಲ್ಲಿ ಕಾಮಗಾರಿ ಮುಗಿಸಲಿದ್ದೇವೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲೆಲ್ಲಿ ವೈಟ್‌ ಟಾಪಿಂಗ್?

ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ವೃತ್ತದಿಂದ ಟ್ರಿನಿಟಿ ವೃತ್ತ

ರೆಸಿಡೆನ್ಸಿ ರಸ್ತೆಯಿಂದ ರಿಚ್ಮಂಡ್‌ ರಸ್ತೆ

ನಗರ ಸಿವಿಲ್‌ ಕೋರ್ಟ್‌ನಿಂದ ಮೈಸೂರು ಬ್ಯಾಂಕ್‌– ಕೆ.ಆರ್‌. ವೃತ್ತ

ಸಿಬಿಐ ರಸ್ತೆ– ಆರ್‌.ಟಿ. ನಗರ ದಿಣ್ಣೂರು ಮುಖ್ಯರಸ್ತೆ

ರೇಸ್‌ ಕೋರ್ಸ್ ರಸ್ತೆ; ಮಯೂರ ಜಂಕ್ಷನ್‌ನಿಂದ ಹರೇ ಕೃಷ್ಣ ಜಂಕ್ಷನ್‌

ತಿಮ್ಮಯ್ಯ ರಸ್ತೆಯಿಂದ ನಿಸ್ವಾನಿ ಸ್ಕೂಲ್‌– ಕಾಮರಾಜ್‌ ರಸ್ತೆ

ನಾರಾಯಣಪಿಳ್ಳೈ ಸ್ಟ್ರೀಟ್‌ನಿಂದ ಸೇಂಟ್‌ ಜಾನ್ಸ್‌ ರಸ್ತೆ– ಕಮರ್ಷಿಯಲ್‌ ರಸ್ತೆ

ವೆಸ್ಟ್ ಆಫ್‌ ಕಾರ್ಡ್ ರಸ್ತೆ ವಿಜಯನಗರ

ಮಲ್ಲೇಶ್ವರ 8ನೇ ಮುಖ್ಯರಸ್ತೆ. ಬಳ್ಳಾರಿ ರಸ್ತೆಯಿಂದ ಸಹಕಾರ ನಗರ–ಜಕ್ಕೂರು ರಸ್ತೆ.

ಜಾಲಹಳ್ಳಿ ಕ್ರಾಸ್‌–ಟಿವಿಎಸ್‌ ಕ್ರಾಸ್‌.

ಟ್ಯಾನರಿ ರಸ್ತೆಯ ದೊಡ್ಡಿ ವೃತ್ತ– ವೆಂಟೇಶಪುರ ವೃತ್ತ

ಮಾಸ್ಕ್‌ ರಸ್ತೆಯಿಂದ ಕೋಲ್ಸ್‌ ರಸ್ತೆ– ಎಂ.ಎಂ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT